ಚಿಕ್ಕಮಗಳೂರು: "ಜಾತಿ ಜನಗಣತಿ, ಜನಗಣತಿ ಮಾಡುವ ಅಧಿಕಾರ ಸಂವಿಧಾನಬದ್ಧವಾಗಿ ಕೇಂದ್ರಕ್ಕೆ ಮಾತ್ರ ಇರೋದು. ಇವರು ಸಾಮಾಜಿಕ-ಆರ್ಥಿಕ ಸಮೀಕ್ಷೆ ಎಂದು ಹೇಳಿದ್ದಾರೆ. ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ಈಗಲೇ ಸತ್ಯ-ಸುಳ್ಳು ಪ್ರತಿಕ್ರಿಯೆ ಕಷ್ಟ. ಅನಧಿಕೃತವಾಗಿ ಸೋರಿಕೆಯಾಗಿರೋದನ್ನು ಸತ್ಯ ಎಂದು ಭಾವಿಸಿದರೆ ಚರ್ಚೆ ಹುಟ್ಟುಹಾಕುತ್ತೆ ಅಷ್ಟೆ" ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅಭಿಪ್ರಾಯಪಟ್ಟರು.
ಚಿಕ್ಕಮಗಳೂರಲ್ಲಿಂದು ಮಾಧ್ಯಮದವರಿಗೆ ಜಾತಿ ಜನಗಣತಿ ವರದಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, "ಅಲ್ಪ ಸಂಖ್ಯಾತರು ಯಾರು? ರಾಜ್ಯದ ಜನಸಂಖ್ಯೆಯಲ್ಲಿ 2ನೇ ದೊಡ್ಡ ಸಂಖ್ಯೆಯಲ್ಲಿರೋರು ಅಲ್ಪ ಸಂಖ್ಯಾತರಾಗುತ್ತಾರಾ? ಮೀಸಲಾತಿ ಸಂಬಂಧ ಕೋರ್ಟ್ನಲ್ಲಿ ಮೊಕದ್ದಮೆ ಇದ್ದಾಗ ಕೇಂದ್ರ ಮೀಸಲಾತಿ ಪರ ಪ್ರಮಾಣಪತ್ರ ಸಲ್ಲಿಸ್ತು, ಬಡ್ತಿ ಮೀಸಲಾತಿ ಪರ ಪ್ರಮಾಣಪತ್ರ ಸಲ್ಲಿಸ್ತು. ಇದು ಮೀಸಲಾತಿ ಬಗ್ಗೆ ಬಿಜೆಪಿಗೆ ಇರುವ ಬದ್ಧತೆ" ಎಂದು ತಮ್ಮ ಪಕ್ಷ ಹಾಗೂ ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡರು.
"ಸಮಾಜ ಒಡೆಯುವ ದುರುದ್ದೇಶವನ್ನು ನಾವು ಬೆಂಬಲಿಸುವುದಿಲ್ಲ. ಕೆಲ ವ್ಯಕ್ತಿ-ಸಂಘಟನೆ-ರಾಜಕೀಯ ಪಕ್ಷಗಳು ಹಿಂದೂ ಸಮಾಜವನ್ನು ಜಾತಿವಾರು ಒಡೆಯುತ್ತಿವೆ. ಹಿಂದೂಗಳನ್ನು ಒಡೆದು ಆಳುವ ನೀತಿಗೆ ನಮ್ಮ ಬೆಂಬಲವಿಲ್ಲ. ಸಾಮಾಜಿಕ ನ್ಯಾಯಕ್ಕೆ ನಾವು ಬದ್ಧ" ಎಂದು ಸ್ಪಷ್ಟಪಡಿಸಿದರು.
"ವಕ್ಫ್ ಕಾಯ್ದೆ ವಿರುದ್ಧ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಹಿಂದೆ ಸಿಎಎ ವಿರುದ್ಧವೂ ಕಾಂಗ್ರೆಸ್ ಹೀಗೆಯೇ ಅಪಪ್ರಚಾರ ಮಾಡಿತ್ತು. ಕಾಂಗ್ರೆಸ್ ನಿಲುವು ರಾಷ್ಟ್ರಘಾತುಕ ನಿಲುವು, ಈಗ ವಕ್ಫ್ ಬಿಲ್ನಲ್ಲೂ ಅಪಪ್ರಚಾರ ಮಾಡ್ತಿದ್ದಾರೆ. ನ್ಯಾಯಬದ್ಧವಾಗಿರುವ ಜಮೀನನ್ನು ಯಾರೂ ಕಿತ್ತುಕೊಳ್ಳಲ್ಲ. ಅಕ್ರಮವಾಗಿರೋದನ್ನು ಬಿಡ್ಲೇಬೇಕು. ರೈತರ ಜಮೀನು, ಸಾವಿರಾರು ವರ್ಷಗಳ ದೇವಸ್ಥಾನದ ಜಮೀನುಗಳನ್ನು ನಮ್ಮದು ಅಂತಾರೆ, ಬಿಡ್ಲೇಬೇಕು. ವಿಧಾನಸೌಧ, ಸುಪ್ರೀಂ ಕೋರ್ಟ್, ಹೈಕೋರ್ಟ್, ಪಾರ್ಲಿಮೆಂಟ್ ನಮ್ದು ಅಂತ ಹೇಳೋಕೆ ಅವಕಾಶ ಕೊಡಬೇಕಾ?" ಎಂದು ಅವರು ಪ್ರಶ್ನಿಸಿದರು.
"ಅಕ್ರಮಕ್ಕೆ ಅವಕಾಶವಿಲ್ಲ, ನ್ಯಾಯಬದ್ಧವಾಗಿದ್ದರೆ ದಾಖಲೆ ನೋಡ್ತಾರೆ. ದಾನ ಕೊಟ್ಟಿದ್ದಾರಾ ಎನ್ನುವುದು ನೋಡ್ಬೇಕು, ತಪ್ಪೇನಿದೆ. ಮಸೀದಿ ಕಿತ್ತುಕೊಳ್ತಾರೆ ಅಂತ ಅಪಪ್ರಚಾರ ಮಾಡ್ತಿದ್ದಾರೆ. ಹಾಗೇನು ಆಗಲ್ಲ. ಅಪಪ್ರಚಾರದ ಜೊತೆ ಕಾಂಗ್ರೆಸ್ ಬೆಂಬಲ ರಾಷ್ಟ್ರಘಾತುಕ, ಭಯೋತ್ಪಾದಕ ಸಂಘಟನೆ, ಎಸ್ಡಿಪಿಐ, ಪಿಎಫ್ಐ ಸಂಘಟನೆಗಳು ಸಂದರ್ಭದ ಲಾಭ ಪಡೆದು ಭಯೋತ್ಪಾದನೆ ಜಾಲದ ವಿಸ್ತೀರ್ಣ ಸಂಚು" ಎಂದು ಆರೋಪಿಸಿದರು.
"ಒಂದೊಂದು ಊರಲ್ಲಿ 10 ಹೆಣಗಳು ಬೀಳ್ಬೇಕು ಅಂತಾನೇ ಕಾಂಗ್ರೆಸ್ ಕಾರ್ಪೋರೇಟರ್ ಕಬೀರ್ ಖಾನ್, ರೈಲು-ಬಸ್ಸು ಸುಡ್ಬೇಕು, ದೊಂಬಿ ನಡೆಯಬೇಕು ಆಗ ಮಾತ್ರ ಬಗ್ಗುಸ್ಬೋದು ಎಂದು ಎಂದು ಹೇಳಿಕೆ ಕೊಡ್ತಾರೆ. ಪ್ರಜಾಪ್ರಭುತ್ವ ವಿರೋಧಿಯಾಗಿ ಭಯೋತ್ಪಾದನೆ ನಡೆಸ್ಬೇಕು ಅಂತಾರೆ. ಅವರು ಕಾಂಗ್ರೆಸ್ ಪಕ್ಷದ ಕಾರ್ಪೋರೇಟರ್, ಈವರೆಗೂ ಪಕ್ಷ ಅವರನ್ನು ಕಿತ್ತುಹಾಕಿಲ್ಲ, ಫತ್ವಾ ಹೊರಡಿಸಿಲ್ಲ, ಮುಸ್ಲಿಂ ಸಂಘಟನೆಯೂ ಅದನ್ನು ತಪ್ಪು ಅಂತ ಹೇಳಿಲ್ಲ. ಸಂವಿಧಾನಬಾಹಿರವಾಗಿ ನಡೆದುಕೊಳ್ಳಬೇಕೆಂದು ಸಂಚು ನಡೆಸಿದ್ದಾರೆ ಎನ್ನುವುದು ಇದರಲ್ಲಿ ಸ್ಪಷ್ಟವಾಗುತ್ತದೆ" ಎಂದು ಸಿ ಟಿ ರವಿ ಕಿಡಿಕಾರಿದರು.
ಇದನ್ನೂ ಓದಿ: ಸರ್ಕಾರದ ಮೂಗಿನ ನೇರಕ್ಕೆ ಜಾತಿ ಗಣತಿ ವರದಿ ತಯಾರಾಗಿದೆ: ರಂಭಾಪುರಿ ಶ್ರೀ