ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿ ಶಾಸಕ ವಿನಯ್ ಕುಲಕರ್ಣಿ ಶುಕ್ರವಾರ ನ್ಯಾಯಾಲಯದ ಮುಂದೆ ಶರಣಾಗಿದ್ದು, ಕೋರ್ಟ್ ಅವರನ್ನು ಸಿಬಿಐ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.
ಇತ್ತೀಚೆಗೆ ಸುಪ್ರೀಂ ಕೋರ್ಟ್ ಅವರ ಜಾಮೀನನ್ನು ರದ್ದುಪಡಿಸಿ, ಒಂದು ವಾರದೊಳಗೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿತ್ತು. ಅಲ್ಲದೆ, ವಿನಯ್ ಕುಲಕರ್ಣಿ ಅವರು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಶರಣಾಗಲು ಸಮಯ ವಿಸ್ತರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೂಡ ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿತ್ತು.
2016ರ ಜೂನ್ 15ರಂದು ಯೋಗೇಶ್ ಗೌಡ ಅವರನ್ನು ಅವರದ್ದೇ ಮಾಲೀಕತ್ವದ ಜಿಮ್ನಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಇದರಲ್ಲಿ ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಕೈವಾಡ ಇದೆ ಎಂಬ ಆರೋಪ ಹಿನ್ನೆಲೆಯಲ್ಲಿ ಅವರನ್ನು 2020ರ ನವೆಂಬರ್ 5ರಂದು ಸಿಬಿಐ ಬಂಧಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ವಿನಯ್ ಕುಲಕರ್ಣಿ ಅವರ ಜಾಮೀನು ರದ್ದುಗೊಳಿಸಿ ಆದೇಶಿಸಿತ್ತು.
ಈ ಬಗ್ಗೆ ಎಸ್ಪಿಪಿ ಗಂಗಾಧರ ಶೆಟ್ಟಿ ಮಾತನಾಡಿ, ಸುಪ್ರೀಂ ಕೋರ್ಟ್ನಲ್ಲಿ ವಿನಯ್ ಕುಲಕರ್ಣಿ ಅವರ ಜಾಮೀನು ಅರ್ಜಿ ವಜಾ ಆಗಿತ್ತು. ಒಂದು ವಾರದ ಒಳಗೆ ನ್ಯಾಯಾಲಯಕ್ಕೆ ಹಾಜರಾಗಲು ಆದೇಶ ನೀಡಲಾಗಿತ್ತು. ಶುಕ್ರವಾರ ಕೋರ್ಟ್ಗೆ ಹಾಜರಾದ ಮೇಲೆ ಅವರನ್ನು ವಶಕ್ಕೆ ಪಡೆದು ಜೈಲಿಗೆ ಕಳಿಸಲಾಗಿದೆ. ಇತ್ತೀಚೆಗೆ ಹೈಕೋರ್ಟ್ನಲ್ಲಿ ಚಂದ್ರಶೇಖರ್ ಎಂಬ ಆರೋಪಿಯ ಜಾಮೀನು ಅರ್ಜಿಯೂ ಕೂಡ ವಜಾ ಆಗಿತ್ತು. ಇದು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವಾಗಿದೆ. ಯಾರೇ ಆಗಿದ್ದರೂ ತಪ್ಪು ಮಾಡಿದ್ದರೆ ಅಂತವರ ವಿರುದ್ಧ ಕ್ರಮ ಆಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಅಸ್ವಾಭಾವಿಕ ಲೈಂಗಿಕತೆಗಾಗಿ ಪತ್ನಿಗೆ ಹಿಂಸೆ: ಪತಿ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ