ಬೆಂಗಳೂರು: ನನ್ನ ತಾಕತ್ ಬಗ್ಗೆ ಅವರು ಟೆಸ್ಟ್ ಮಾಡಬೇಕು ಎನ್ನುವುದಾದರೆ ಕ್ಷೇತ್ರಕ್ಕೆ ಬರಲಿ. ಅವರು ಸಂಸದೆ ಸ್ಥಾನಕ್ಕೆ ರಾಜೀನಾಮೆ ನೀಡಲಿ, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ತಾಕತ್ ಇದ್ದರೆ ಯಶವಂತಪುರ ಕ್ಷೇತ್ರದಲ್ಲಿ ನಿಲ್ಲಲಿ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಅವರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ ಎಸ್.ಟಿ ಸೋಮಶೇಖರ್‌ಗೆ ತಾಕತ್ ಇದ್ದರೆ ರಾಜೀನಾಮೆ ಕೊಟ್ಟು ಕಾಂಗ್ರೆಸ್‌ನಿಂದ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದ್ದ ಶೋಭಾ ಕರಂದ್ಲಾಜೆಗೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಲ್ಲಿ ಹೇಗೂ ಗೆದ್ದಿದ್ದಳಲ್ಲ, ಯಶವಂತಪುರದಲ್ಲಿಯೂ ಸ್ಪರ್ಧಿಸಲಿ. ಅವರ ಪಾಪದ ಕೊಡ ಇನ್ನೂ ತುಂಬಬೇಕಾಗಿದೆ. ಪಾಪದ ಕೊಡ ತುಂಬುವವರೆಗೆ ನಾನೂ ತಾಳ್ಮೆಯಿಂದ ಕಾಯುತ್ತಿದ್ದೇನೆ. ಆಮೇಲೆ ನಾನು ಮಾತಾಡುತ್ತೇನೆ ಎಂದರು.
ಚಿಕ್ಕಮಗಳೂರಿನಲ್ಲಿ ಅವರನ್ನು ಉಗಿದ ರೀತಿ ನನ್ನನ್ನು ಕ್ಷೇತ್ರದಲ್ಲಿ ಕ್ಯಾಕರಿಸಿ ಉಗಿದಿಲ್ಲ. ನನ್ನ ತಾಕತ್ ಬಗ್ಗೆಯಾಗಲಿ, ನನ್ನ ಬಗ್ಗೆಯಾಗಲಿ ಮಾತಾಡುವ ಕಿಂಚಿತ್ ಯೋಗ್ಯತೆ ಶೋಭಾ ಕರಂದ್ಲಾಜೆಗೆ ಇಲ್ಲ. ಚಿಕ್ಕಮಗಳೂರಿನಲ್ಲಿ ಜನರು ಉಗುಳಿದ್ದಕ್ಕೆ ಬೆಂಗಳೂರಿಗೆ ಬಂದಿದ್ದಾರೆ. ನಾನು ಅವರ ಹಾಗೆ ಕ್ಷೇತ್ರ ಬಿಟ್ಟು ಬೇರೊಂದು ಕ್ಷೇತ್ರಕ್ಕೆ ಓಡಿಹೋಗಿ ನಿಲ್ಲಲ್ಲ ಎಂದು ಕಿಡಿಕಾರಿದರು.
ಸೋಮಶೇಖರ್ ರಾಜಕೀಯ ಆಶ್ರಯಕ್ಕೆ, ಕಮಿಷನ್‌ಗೆ ಕಾಂಗ್ರೆಸ್ ಕಡೆ ಹೋಗಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಯಾವುದೇ ರಾಜಕೀಯ ಆಶ್ರಯ ಪಡೆದುಕೊಳ್ಳುತ್ತಿಲ್ಲ. ನನ್ನ ಕ್ಷೇತ್ರಕ್ಕೆ ಅನುದಾನ ತರಬೇಕು. ಬಿಜೆಪಿಯವರು ಎಷ್ಟು ಮಂದಿ ರಾತ್ರಿ 12 ಗಂಟೆ ನಂತರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ಮಾಡುತ್ತಾರೆ. ರಾತ್ರಿ 10.30 ನಂತರ ಎಷ್ಟು ಜನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತಾರೆ. ಅವರೆಲ್ಲಾ ಕಮಿಷನ್ ಕೊಡಲು ಹೋಗುತ್ತಾರಾ? ಯಲಹಂಕ ಶಾಸಕ ವಿಶ್ವನಾಥ್ 15 ನಿಮಿಷ ಹೊಗಳಿ ಮಾತಾಡಿದರು. ಹಾಗಾದರೆ ಕಮಿಷನ್‌ಗೆ ಮಾತನಾಡಿದರಾ? ಇವರೇನು ಕಮಿಷನ್ ಹೊಡೆದೇ ಇಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆಯಲ್ಲಿ ನಾನು ಕೆಲಸ ಮಾಡದಿದ್ದರೂ ಹೆಚ್ಚಿನ ಮತ ಬಂದಿದೆ ಎಂಬುದಾಗಿ ಹೇಳಿದ್ದಾರೆ. ಇವಳ ಮುಖ ನೋಡಿಕೊಂಡು ಯಾರು ಮತ ಹಾಕಿದ್ದಾರೆ?. ಸಂಸದರಾಗಿ ಕೇಂದ್ರ ಸಚಿವೆಯಾಗಿದ್ದಾರೆ. ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ್ದು ಏನು ಕೆಲಸ ಇದೆ ಅದನ್ನು ಮಾಡಲಿ. ಅದರ ಕಡೆ ವಿಶೇಷ ಗಮನ ಕೊಡಬೇಕು. ಸೋಮಶೇಖರ್ ಕಡೆ ಗಮನ ಕೊಡುವುದು ಅವರ ಕೆಲಸ ಅಲ್ಲ. ನಾನೇನು ಯಶವಂತಪುರದಲ್ಲಿ ಸೋತರೂ ಬೇರೆ ಕ್ಷೇತ್ರಕ್ಕೆ ಹೋಗಲಿಲ್ಲ. ಇವರ ರೀತಿ ರಾಜಾಜಿನಗರಕ್ಕೆ ಹೋಗೋದು, ಚಿಕ್ಕಮಗಳೂರಿಗೆ ಹೋಗೋದು ಮಾಡಿಲ್ಲ. ನನ್ನ ಬಗ್ಗೆ ಮಾತಾಡುವ ಬದಲು ಕೇಂದ್ರ ಸರ್ಕಾರದಿಂದ ಯೋಜನೆ ತರಲಿ. ನನ್ನ ತಾಕತ್ ಬಗ್ಗೆ ಪ್ರಶ್ನೆ ಮಾಡುವ ಅರ್ಹತೆ ಇವರಿಗಿಲ್ಲ ಎಂದು ಹರಿಹಾಯ್ದರು.
ಇದನ್ನೂ ಓದಿ: ಅಂದಾಜಿನ ಪ್ರಕಾರ ಕೋವಿಡ್ ವೇಳೆ ₹ 10 - 15 ಸಾವಿರ ಕೋಟಿಯಷ್ಟು ಭ್ರಷ್ಟಾಚಾರ ನಡೆದಿದೆ: ಸಿಎಂ ಸಿದ್ದರಾಮಯ್ಯ