ಚಿಕ್ಕೋಡಿ/ ಬೆಳಗಾವಿ: ಮಾಜಿ ಡಿಸಿಎಂ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಚಲಿಸುತ್ತಿದ್ದ ಕಾರು ಅಪಘಾತವಾಗಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಕಾರ್ಯಕ್ರಮ ನಿಮಿತ್ತ ತೆರಳುವ ವೇಳೆ ಶಾಸಕ ಲಕ್ಷ್ಮಣ ಸವದಿ ಚಲಿಸುತ್ತಿದ್ದ ಕಾರಿಗೆ ತಾಲೂಕಿನ ದರೂರ ಬಳಿ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದ್ದು, ಶಾಸಕರ ಕಾರು ಜಖಂಗೊಂಡಿದೆ. ಮದ್ಯಪಾನ ಮಾಡಿ ಶಾಸಕ ಸವದಿ ಕಾರಿಗೆ ಗೂಡ್ಸ್ ವಾಹನ ಚಾಲಕ ಅಪಘಾತ ಮಾಡಿದ್ದು ಬೆಳಕಿಗೆ ಬಂದಿದ್ದು, ಅದೃಷ್ಟವಷಾತ್ ಎಲ್ಲರೂ ಸುರಕ್ಷಿತವಾಗಿದ್ದಾರೆ.

ಶಾಸಕ ಲಕ್ಷ್ಮಣ ಸವದಿ ಅವರ ಕಾರು ಅಪಘಾತ ಘಟನೆ ಇದು ಮೂರನೇ ಬಾರಿಯಾಗಿದೆ. ಈ ಹಿಂದೆ ಸಂಭವಿಸಿದ್ದ ಅಪಘಾತದಲ್ಲಿ ಅವರು ಗಾಯಗೊಂಡಿದ್ದರು.

ಅಪಘಾತದ ಬಳಿಕ ಈಟಿವಿ ಭಾರತಕ್ಕೆ ದೂರವಾಣಿ ಮುಖಾಂತರ ಶಾಸಕ ಲಕ್ಷ್ಮಣ್ ಸವದಿ ಮಾತನಾಡಿದ್ದು, ನಾನು ಒಂದು ಕಾರ್ಯಕ್ರಮದ ನಿಮಿತ್ತ ತೆರಳುತ್ತಿದ್ದೆ. ದರೂರು ಗ್ರಾಮದ ಬಳಿ ಒಂದು ಶಾಲೆ ವಾಹನ ನಿಂತಿತ್ತು, ಶಾಲಾ ವಾಹನದ ಹಿಂದೆ ಗ್ರಾನೈಟ್ ಹೆರಿಕೊಂಡು ಬಂದ ಗೂಡ್ಸ್ ವಾಹನ ನೇರವಾಗಿ ನಮ್ಮ ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಯಾರಿಗೂ ಕೂಡ ಅಪಾಯವಾಗಿಲ್ಲ, ಸಣ್ಣ ಪುಟ್ಟ ಗಾಯಗಳು ಕೂಡ ಆಗಿಲ್ಲ, ಪಿಕಪ್ ವಾಹನ ಚಾಲಕ ಮಧ್ಯಪಾನ ಮಾಡಿದ್ದರಿಂದ ಈ ಘಟನೆ ಸಂಭವಿಸಿದೆ. ಅಭಿಮಾನಿಗಳು ಆತಂಕ ಪಡುವುದು ಬೇಡ, ನಾನು ಸುರಕ್ಷಿತವಾಗಿದ್ದೇನೆ ಹಾಗೂ ಮನೆಯಲ್ಲೇ ಇದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ

ಇದನ್ನು ಓದಿ:' ಮುಜರಾಯಿ ವ್ಯಾಪ್ತಿಯ ಎಲ್ಲ ದೇಗುಲಗಳಲ್ಲಿ ನೀರಿನ ಬಾಟಲ್ ಸೇರಿ ಎಲ್ಲ ಬಗೆಯ ಪ್ಲಾಸ್ಟಿಕ್ ಬಳಕೆ ನಿಷೇಧ'