ಬೆಂಗಳೂರು: ಜಾತಿ ಜನಗಣತಿ ವರದಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಹಲವು ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವ ಸಂಪುಟ ಸಭೆಗೂ ಮುನ್ನ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು, ಜಾತಿ ಜನಗಣತಿ ವರದಿಯಲ್ಲಿ ಏನೀದೆ ಎಂದು ಯಾರಿಗೂ ಗೊತ್ತಿಲ್ಲ. ದತ್ತಾಂಶ, ಅಂಕಿ - ಅಂಶಗಳಿಗೆ ಹೋಲಿಕೆ ಆಗಬೇಕು. ಸರ್ಕಾರದ ಇಲಾಖೆಗಳಲ್ಲೂ ಅಂಕಿ ಅಂಶಗಳಿರುತ್ತವೆ. ಇವತ್ತು ಸಂಪುಟ ಸಭೆಗೆ ಜಾತಿ ಗಣತಿ ವರದಿ ಬರಲಿ ಎಂದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಜಾತಿಗಣತಿ ಪಬ್ಲಿಕ್ ಡಾಕ್ಯುಮೆಂಟ್ ಆಗಲಿದೆ. ನೋಡದೇ ಕಾಮೆಂಟ್ ಮಾಡುವುದು ಸರಿಯಲ್ಲ. ಒಮ್ಮೆ ಮಂಡನೆಯಾದ ಮೇಲೆ ಲೋಪದೋಷಗಳಿವೆ, ಸರಿಪಡಿಸಿ ಎಂದೂ ಹೇಳಬಹುದು. ಅದಕ್ಕೂ ಅವಕಾಶ ಇದೆ. 2015ರಲ್ಲಿ ವರದಿ ಮಾಡಲಾಗಿತ್ತು, ಜಾತಿ ಗಣತಿಗೆ ಅವಕಾಶ ನೀಡಿದ್ದೆ ನಮ್ಮ ಸರ್ಕಾರ. ಇವತ್ತು ಸಂಪುಟ ಸಭೆಗೆ ಜಾತಿ ಗಣತಿ ಬರುವ ಸಾಧ್ಯತೆ ಇದೆ ಎಂದು ಹೇಳಿದರು.
ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಜಾತಿ ಜನಗಣತಿ ವರದಿಯನ್ನು ಸ್ವೀಕಾರ ಮಾಡಲಾಗಿದೆ. ವರದಿಯನ್ನು ನೋಡಲಾರದೇ ಹೇಳುವುದಕ್ಕೆ ಆಗಲ್ಲ. ಪರ-ವಿರೋಧ ಅಂತ ಹೇಳೋಕೆ ಆಗಲ್ಲ. ಟ್ರಜರಿಯಿಂದ ಇವತ್ತು ಹೊರತಂದಿದ್ದೇವೆ. ಸೋರಿಯಾಗಿರುವ ಪ್ರಶ್ನೆಯೇ ಇಲ್ಲ. ಇವತ್ತು ಸಿಎಂ ಸೂಚಿಸಿದ್ರೆ ವರದಿ ತರುತ್ತೇವೆ ಎಂದರು.
ಜಾತಿಗಣತಿಗೆ ಒಕ್ಕಲಿಗ, ಲಿಂಗಾಯತರ ವಿರೋಧ ಇಲ್ಲ: ಸಚಿವ ಚಲುವರಾಯಸ್ವಾಮಿ ಮಾತನಾಡಿ, ಜಾತಿಗಣತಿಗೆ ನಮ್ಮ ಸಮುದಾಯ, ಲಿಂಗಾಯತ ಸಮುದಾಯದ ವಿರೋಧ ಇಲ್ಲ. ಹತ್ತು ವರ್ಷಗಳಾಗಿರುವುದರಿಂದ ರಿವ್ಯೂ ಆಗಬೇಕೆಂದು ಬೇಡಿಕೆ ಇದೆ. ಎರಡು ವಿಚಾರ ಇದೆ. ಕ್ಯಾಸ್ಟ್ ಸೆನ್ಸಸ್ ಆಗಬೇಕು ಅಂತ ಎಲ್ಲಾ ಸಮುದಾಯಗಳು ಒಪ್ಪಿವೆ. ನಮ್ಮ ಪಕ್ಷದಲ್ಲಿ ಕೂಡ ಯಾವುದೇ ವ್ಯತ್ಯಾಸ ಇಲ್ಲ ಎಂದು ಹೇಳಿದರು.
ಕ್ಯಾಬಿನೆಟ್ನಲ್ಲಿ ಚರ್ಚೆಮಾಡಿ, ಸಬ್ಕಮಿಟಿ ಮಾಡೋದಾ? ಅಂತ ನೋಡಬೇಕು. ಇಲ್ಲ ಜನರ ಅಭಿಪ್ರಾಯಕ್ಕೆ ಬಿಡೋದಾ? ನೋಡಬೇಕು. ಕ್ಯಾಬಿನೆಟ್ನಲ್ಲಿ ಹೀಗೆ ಹೇಳ್ತೀನಿ, ಹಾಗೆ ಹೇಳ್ತೀನಿ ಅನ್ನಲ್ಲ. ಜವಾಬ್ದಾರಿ ಸಚಿವರಾಗಿ ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ಅಭಿಪ್ರಾಯ ಬಗ್ಗೆ ಈಗಾಗಲೇ ಹೇಳಿದ್ದೇನೆ. ಯಾವುದೇ ಸಮುದಾಯಕ್ಕೂ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇವೆ. ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವುದು ಕಾಂಗ್ರೆಸ್ ಎಂದರು.
ಯಾವುದೇ ಸಮುದಾಯಕ್ಕೆ ತೊಂದರೆಯಾಗಲ್ಲ: ಸಚಿವ ಕೆ.ಹೆಚ್. ಮುನಿಯಪ್ಪ ಮಾತನಾಡಿ, ಕ್ಯಾಬಿನೆಟ್ ನಿರ್ಧಾರ ಏನಾಗುತ್ತಿದೆ ನೋಡೊಣ. ಎಐಸಿಸಿ ಅಧ್ಯಕ್ಷರು, ನಮ್ಮ ನಾಯಕರು ಜಾತಿಗಣತಿ ಆದರೆ ಯಾವುದೇ ಜಾತಿಗೆ ಅನ್ಯಾಯ ಆಗಲ್ಲ ಅಂತ ಹೇಳಿದ್ದಾರೆ. ಇದರಿಂದ ಯಾವುದೇ ಸಮುದಾಯಕ್ಕೆ ತೊಂದರೆ ಆಗುವುದಿಲ್ಲ. ನಮ್ಮ ಹೈಕಮಾಂಡ್ ವರದಿ ಜಾರಿಗೆ ಬದ್ಧವಾಗಿದೆ. ಯಾರ ವಿರೋಧವೂ ಇಲ್ಲ. ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ತೊಂದರೆ ಆಗುವುದಿಲ್ಲ. ವರದಿ ಬಗ್ಗೆ ಚರ್ಚೆ ಆಗಲಿ ನೋಡೊಣ ಎಂದು ತಿಳಿಸಿದರು.
ಇದನ್ನೂ ಓದಿ: 10 ವರ್ಷದ ಹಿಂದೆ ಕಸದ ಬುಟ್ಟಿಯಲ್ಲಿ ಬಿದ್ದಿದ್ದ ವರದಿಯನ್ನು ಈಗ ಸರ್ಕಾರಕ್ಕೆ ಸಲ್ಲಿಸಿದ್ದಾರೆ: ಶಾಮನೂರು ಶಿವಶಂಕರಪ್ಪ
ಇದನ್ನೂ ಓದಿ: 'ಜನಗಣತಿ, ಜಾತಿಗಣತಿ ತಕ್ಷಣ ಆರಂಭಿಸಿ': ಕೇಂದ್ರಕ್ಕೆ ಖರ್ಗೆ ಒತ್ತಾಯ