ಹೊಳೆನರಸೀಪುರ(ಹಾಸನ): "ಪೊಲೀಸ್ ಕಮಿಷನರ್ ಅಥವಾ ಅವರ ಕೆಳಗಿನ ಅಧಿಕಾರಿಗಳು ಕಾರ್ಯಕ್ರಮಕ್ಕೆ ಯಾರು ಅನುಮತಿ ನೀಡಿದ್ದು, ಇಷ್ಟು ಮಂದಿ ಜನ ಸೇರುತ್ತಾರೆ ಎಂದು ಸರ್ಕಾರಕ್ಕೆ ಪೊಲೀಸರು ಮಾಹಿತಿ ನೀಡಬೇಕಿತ್ತು. ಒಂದು ಕಡೆ ನೋಡಿದರೇ, ಪೊಲೀಸರ ತಪ್ಪು ಕಾಣುತ್ತಿದೆ" ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿ ಸಂಸದ ಶ್ರೇಯಸ್ ಎಂ.ಪಟೇಲ್ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉಂಟಾದ ಭೀಕರ ಕಾಲ್ತುಳಿತ ಪ್ರಕರಣ ಸಂಬಂಧ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
"ಸ್ಟೇಡಿಯಂಗೆ ಹೋಗುವ ಮುಂಚೆ ಡೆತ್ ಆಗಿದ್ರೆ ಸಿಎಂಗೆ, ಸರ್ಕಾರಕ್ಕೆ ಹೇಳಬೇಕಾದದ್ದು ಪೊಲೀಸರ ಕರ್ತವ್ಯ, ಜವಾಬ್ದಾರಿ. ಜತೆಗೆ ಮುಖ್ಯಮಂತ್ರಿಗಳಿಗೆ ಮುಂಚೆಯೇ ಹೇಳಬೇಕಿತ್ತು. ಕಮಿಷನರ್ ಆಫೀಸ್ ಅಥವಾ ಕೆಳಗಿನ ಪೊಲೀಸ್ ಅಧಿಕಾರಿಗಳು ಅನುಮತಿ ನೀಡಿದ್ರಾ ? ಬೇಡ ಅಂದ್ರು ಏಕೆ ಹೋದರು ? ಹೀಗೆ ಸಾಕಷ್ಟು ಗೊಂದಲಗಳಿವೆ, ಸಿಐಡಿ ತನಿಖೆ ಮಾಡುತ್ತಾರೆ. ವರದಿ ಬಳಿಕ ಸತ್ಯಾಂಶ ಹೊರಗೆ ಬರುತ್ತದೆ" ಎಂದರು.
ಬೇಲೂರಿನ ಅಭಿವೃದ್ಧಿಗೆ ಅನುದಾನ ನೀಡಲು ಬದ್ಧ: "ಬೇಲೂರಿನ ಚೆನ್ನಕೇಶವ ದೇವಾಲಯ ವಿಶ್ವ ಪಾರಂಪಾರಿಕ ಪಟ್ಟಿಗೆ ಸೇರ್ಪಡೆಯಾದ ನಂತರ ಇಲ್ಲಿ ಹೆಚ್ಚಿನ ಅನುದಾನ ನೀಡಲು ಸರ್ಕಾರ ಬದ್ಧವಾಗಿದ್ದು. ಈಗಾಗಲೇ ಸ್ಥಳೀಯ ಶಾಸಕ ಹೆಚ್. ಕೆ. ಸುರೇಶ್ ಅವರ ಒತ್ತಾಸೆಯ ಮೇರೆಗೆ ಮೊದಲ ಹಂತದಲ್ಲಿ ಹೊಳೆಬೀದಿ ಅಭಿವೃದ್ಧಿಪಡಿಸಲು ಸೇತುವೆ ನಿರ್ಮಾಣಕ್ಕೆ ನಮ್ಮ ತಾಂತ್ರಿಕ ಅಧಿಕಾರಿಗಳು ಪರಿಶೀಲಿಸಿ, ಅದಕ್ಕೆ ಸಂಪೂರ್ಣ ಅನುದಾನ ನೀಡಲಾಗುತ್ತಿದೆ. ಎರಡು ವರ್ಷಗಳ ಅವಧಿಯಲ್ಲಿ ಸೇತುವೆ ನಿರ್ಮಾಣ ಕಾರ್ಯವನ್ನು ಸಂಪೂರ್ಣಗೊಳಿಸಿದ ನಂತರ ತಾಲೂಕಿನ ಎಲ್ಲಾ ಗ್ರಾಮಗಳ ರಸ್ತೆಗೆ ಅನುದಾನ ನೀಡಲು ಬದ್ಧರಾಗಿದ್ದೇವೆ" ಎಂದು ತಿಳಿಸಿದರು.
"ಹೊಳೆಬೀದಿ ರಸ್ತೆ ಅಭಿವೃದ್ಧಿ ಆದ ನಂತರ ಹಲವಾರು ವರ್ಷಗಳಿಂದ ಅಭಿವೃದ್ಧಿಯಾಗದ ಬಸ್ ನಿಲ್ದಾಣ ನಿರ್ಮಾಣ ಹಾಗೂ ಮುಖ್ಯರಸ್ತೆ ಅಗಲೀಕರಣಕ್ಕೆ ಕಾಯಕಲ್ಪ ಕೊಡಲಾಗುತ್ತದೆ. ಶಾಸಕರು ಹಾಗೂ ಸಾರ್ವಜನಿಕರ ಅಭಿಪ್ರಾಯದಂತೆ ಬಸ್ ನಿಲ್ದಾಣಕ್ಕೆ ನಮ್ಮ ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗವನ್ನು ನೀಡಲು ಕಾನೂನಿನಲ್ಲಿ ಅವಕಾಶ ಇದ್ದರೆ ಅದನ್ನು ಗಮನಿಸಿ ನಮ್ಮ ಅಧಿಕಾರಿಗಳ ಜೊತೆ ಚರ್ಚಿಸಿ, ಜಾಗ ಸಹ ನೀಡಲು ಬದ್ಧರಾಗಿದ್ದೇವೆ ಎಂದು ಹೇಳಿದರು. ಅಲ್ಲದೆ ಹೊಳೆಬೀದಿ ವಿಶ್ವ ಪ್ರವಾಸಿ ತಾಣವಾಗಿರುವುದರಿಂದ ಹೆಚ್ಚುವರಿ ಬಸ್ ನಿಲ್ದಾಣಕ್ಕೆ ಎಲ್ಲಿ ಜಾಗವಿದೆ ಎಂದು ಮಾನ್ಯ ಸಾರಿಗೆ ಸಚಿವರ ಜೊತೆ ಚರ್ಚಿಸಿ, ಬಸ್ ನಿಲ್ದಾಣ ಹಾಗೂ ಹೆಚ್ಚುವರಿ ಬಸ್ ಒದಗಿಸಲು ಕ್ರಮ ಕೈಗೊಳ್ಳಲಾಗುವುದು" ಎಂದು ಭರವಸೆ ನೀಡಿದರು.
ಬೇಲೂರು ಪಟ್ಟಣದ ಹೊಳೆ ಬೀದಿ, ಬಸ್ ನಿಲ್ದಾಣ ಮುಖ್ಯರಸ್ತೆ ಹಾಗೂ ತಾಲೂಕು ಕಚೇರಿಯನ್ನು ವೀಕ್ಷಿಸಿದರು. ಹೊಳೆಬೀದಿ ಸೇತುವೆ ನಿರ್ಮಾಣ ಹಾಗೂ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲು ಕ್ರಿಯಾಯೋಜನೆ ಸಿದ್ಧವಾಗಿದ್ದು, ಅತಿ ಶೀಘ್ರದಲ್ಲಿ ಚಾಲನೆಗೊಳ್ಳಲಿದೆ. ಜಿಲ್ಲೆಯಲ್ಲಿ ಎರಡು ದಿನಗಳ ಅಧಿಕೃತ ಭೇಟಿ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಸಚಿವರು ಮಾಹಿತಿ ಸಂಗ್ರಹಿಸಿದರು.
ಮಹಾತ್ಮಗಾಂಧಿ ವೃತ್ತದಲ್ಲಿ ಮಹಾತ್ಮಗಾಂಧಿ ಪ್ರತಿಮೆಗೆ ಸಂಸದೆ ಪ್ರಿಯಾಂಕ ಜಾರಕಿಹೊಳಿ ಅವರು ಮಾಲಾರ್ಪಣೆ ಮಾಡಿದರು. ಸಂಸದರಾದ ಶ್ರೇಯಸ್ ಎಂ.ಪಟೇಲ್ ಹಾಗೂ ಪ್ರಿಯಾಂಕಾ ಜಾರಕಿಹೊಳಿ, MLA ಚಂದ್ರಪ್ಪ, ಮುಖಂಡ ಲಖನ್ ಜಾರಕಿಹೋಳಿ, ಹೆಚ್.ವಿ. ಪುಟ್ಟರಾಜು, ಲಕ್ಷ್ಮಣ, ಶೃತಿ ಗುಂಡಣ್ಣ, ಡೊನಾಲ್ಡ್, ಬಾಗಿವಾಳು ಮಂಜೇಗೌಡ, ಪ್ರಜ್ವಲ್, ಇತರರು ಇದ್ದರು.
ಇದನ್ನೂ ಓದಿ: ಕುಂಭಮೇಳದಲ್ಲಿ ಕಾಲ್ತುಳಿತದಿಂದ ಜನ ಸಾವನ್ನಪ್ಪಿದಾಗ ಹೆಚ್ಡಿಕೆಯವರು ಮೋದಿ ರಾಜೀನಾಮೆ ಕೇಳಿದ್ರಾ: ಸಿಎಂ ಸಿದ್ದರಾಮಯ್ಯ ಪ್ರಶ್ನೆ