ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್ಡಿಎಲ್) ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ದಕ್ಷಿಣ ಚಿತ್ರರಂಗದ ಖ್ಯಾತ ನಟಿ ತಮನ್ನಾ ಭಾಟಿಯಾ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಳ್ಳಲಾಗಿದೆ. ಆದರೆ, ಸರ್ಕಾರದ ನಿರ್ಧಾರಕ್ಕೆ ಭಾರಿ ವಿರೋಧಗಳು ವ್ಯಕ್ತವಾಗುತ್ತಿವೆ. ಸೋಷಿಯಲ್ ಮೀಡಿಯಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ಸೇರಿದಂತೆ ಬಹುತೇಕ ನೆಟ್ಟಿಗರು ತಮನ್ನಾ ಭಾಟಿಯಾ ನೇಮಕದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ಸೋಷಿಯಲ್ ಮೀಡಿಯಾದಲ್ಲಿ ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ತನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ತಮನ್ನಾ ಭಾಟಿಯಾ ಅವರನ್ನು 6.2 ಕೋಟಿ ರೂಪಾಯಿ ತೆತ್ತು ನೇಮಕ ಮಾಡಿದ್ದು, ಈ ನಿರ್ಧಾರ ಅವಿವೇಕದ, ಅಸಂಬದ್ಧ ಹಾಗೂ ಬೇಜವಾಬ್ದಾರಿಯುತ ತೀರ್ಮಾನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಚಿವರ ಸ್ಪಷ್ಟನೆ ಹೀಗಿದೆ: ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ''ಕೆಎಸ್ಡಿಎಲ್ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗಲೆಂಬ ಉದ್ದೇಶದಿಂದ ನಾವು ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿದ್ದೇವೆ. ಅದಕ್ಕೆ ಕಾರಣ ಕೂಡಾ ಇದೆ. ಕೆಎಸ್ಡಿಎಲ್ ಕನ್ನಡದ ಹೆಮ್ಮೆಯ ಸಂಸ್ಥೆ. ವಿಶ್ವೇಶ್ವರಯ್ಯನವರು ಸ್ಥಾಪಿಸಿದ ಸಂಸ್ಥೆ. ಮೊದಲು ಅವ್ಯವಹಾರ, ಅಶಿಸ್ತು ಇತ್ತು. ಆದ್ರೀಗ ಎಲ್ಲವನ್ನೂ ಬದಲಾವಣೆ ಮಾಡಲಾಗಿದೆ. ಮೊದಲು ಒಂದೇ ಶಿಫ್ಟ್ನಲ್ಲಿ ಕೆಲಸ ಆಗುತ್ತಿತ್ತು. ಆದ್ರೀಗ 3 ಶಿಫ್ಟ್ನಲ್ಲಿ ಕೆಲಸ ನಡೆಯುತ್ತಿದೆ. ಅನೇಕ ಅವ್ಯವಹಾರಗಳನ್ನು ತಡೆಯಲಾಗಿದೆ'' ಎಂದರು.
''ನಾನು ಕನ್ನಡದ ಅಸ್ಮಿತೆ ಬಗ್ಗೆ ಗೌರವವುಳ್ಳವನು. ಇದೊಂದು ಟ್ರೇಡ್ ಬ್ಯುಸಿನೆಸ್ ಇದ್ದಂತೆ. ಇದನ್ನು ವಿಶ್ವಕ್ಕೆ ಪ್ರಮೋಟ್ ಮಾಡಬೇಕಿದೆ. ಯುರೋಪ್ನಲ್ಲಿ ಜಾಸ್ಮಿನ್ಗೆ ಬೇಡಿಕೆ ಇದೆ. ಶೇ.23ರಷ್ಟು ಬೇಡಿಕೆ ಅಚೀವ್ ಮಾಡಲಾಗಿದೆ. ನಮ್ಮ ನಿರೀಕ್ಷೆ 5 ಸಾವಿರ ಕೋಟಿಗೆ ತಲುಪಬೇಕೆಂಬುದು. ತಮನ್ನಾ ಭಾಟಿಯಾ ಆಯ್ಕೆ ವಿಚಾರದಲ್ಲಿ ಕಮಿಟಿ ಮಾಡಲಾಗಿತ್ತು. ನಾವು ಕನ್ನಡದವರೇ ಆದ ರಶ್ಮಿಕಾ ಮಂದಣ್ಣ ಅವರನ್ನು ಕೇಳಿದ್ವಿ. ಆದ್ರೆ ಅವರು ಒಪ್ಪಲಿಲ್ಲ'' ಎಂದು ತಿಳಿಸಿದರು.
ಇದನ್ನೂ ಓದಿ: 'ದಯವಿಟ್ಟು ವದಂತಿ ಹರಡಬೇಡಿ': ವಿಘ್ನಗಳ ಬೆನ್ನಲ್ಲೇ ಕಾಂತಾರ ರಿಲೀಸ್ ಡೇಟ್ ಮುಂದೂಡಿಕೆ?; ರಿಷಬ್ ಶೆಟ್ಟಿ ಸ್ಪಷ್ಟನೆ ಏನು?
ಹಾಗೇ ಪೂಜಾ ಹೆಗ್ಡೆ, ಕಿಯಾರಾ ಅಡ್ವಾಣಿ ಆಗಲ್ಲ ಅಂದ್ರು. ದೀಪಿಕಾ ಪಡುಕೋಣೆ ನಮ್ಮ ಬಜೆಟ್ಗೆ ಆಗ್ಲಿಲ್ಲ. ತಮನ್ನಾ ಭಾಟಿಯಾ 2.8 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಕನ್ನಡ ಕಲಾವಿದರ ಬಗ್ಗೆ ನಮಗೆ ಗೌರವ ಇದೆ. ಇದು ಟೆಂಡರ್ ವರ್ಕ್ ಅಲ್ಲ. ಎಲ್ಲರೂ ಅರ್ಥೖಸಿಕೊಳ್ಳಬೇಕು. 5 ಸಾವಿರ ಕೋಟಿಗೆ ಉತ್ಪನ್ನಗಳನ್ನು ತೆಗೆದುಕೊಂಡು ಹೋಗಬೇಕು. ನಮ್ಮ ಕನ್ಮಡದ ಸಂಸ್ಥೆ ಬೆಳೆಯಲಿ ಎಂಬ ಕಾರಣಕ್ಕೆ ನಾವು ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿದ್ದೇವೆ ಎಂದರು.
ಇದನ್ನೂ ಓದಿ: KSDL ಉತ್ಪನ್ನಗಳಿಗೆ ನಟಿ ತಮನ್ನಾ ಭಾಟಿಯಾ ಬ್ರ್ಯಾಂಡ್ ರಾಯಭಾರಿ: ಸಂಭಾವನೆ ಎಷ್ಟು ಕೋಟಿ ಗೊತ್ತಾ?
ಮೈಸೂರು ಸ್ಯಾಂಡಲ್ ಸೋಪ್ ಕನ್ನಡದ ಹೆಮ್ಮೆ. ಗತವೈಭವ ಹೊಂದಿದ ನಿಗಮ. ಮೈಸೂರು ಸ್ಯಾಂಡಲ್ ಸಂಸ್ಥೆಯನ್ನು ಮತ್ತೆ ಕಟ್ಟಬೇಕು. ಪ್ರಾಮಾಣಿಕ ಅಧಿಕಾರಿಯನ್ನು ನೇಮಕ ಮಾಡಿದ್ದೇವೆ. ಶೇ.40ರಷ್ಟು ಉತ್ಪಾದನೆ ಹೆಚ್ಚಳ ಮಾಡಿದ್ದೇವೆ. ಪ್ರಸ್ತುತ 1,788 ಕೋಟಿ ವ್ಯಾಪಾರ ಮಾಡಲಾಗಿದೆ. ಈ ಬಾರಿ 415 ಕೋಟಿ ರೂ. ನಿವ್ವಳ ಲಾಭ ಮಾಡಿದ್ದೇವೆ. ಸಂಸ್ಥೆಯ ಗತವೈಭವವನ್ನು ಸ್ಥಾಪನೆ ಮಾಡ್ತೇವೆ. ವಚನ ಸಾಹಿತ್ಯದ ನೆಲೆಯಿಂದ ಬಂದವನು. ಕನ್ನಡದ ಬಗ್ಗೆ ಹೆಮ್ಮೆ ಇರುವವರು ನಾವು. ನನ್ನ ಅಧಿಕಾರಾವಧಿಯಲ್ಲಿ ಏನಾದ್ರು ಸಾಧಿಸಬೇಕು. ಅದಕ್ಕೆ ಈ ಪ್ರಯತ್ನ ಮಾಡ್ತಿದ್ದೇವೆ. ಕೇರಳದವರು ನಮ್ಮ ಮಾದರಿಯಲ್ಲೇ ಮಾಡಿದ್ದಾರೆ. ಮೈಸೂರು ಸ್ಯಾಂಡಲ್ ಸೋಪ್ ಮಾದರಿ ಮಾಡಿದ್ದಾರೆ. ನಮ್ಮದನ್ನು ಕಾಪಿ ಮಾಡಿದ್ದಕ್ಕೆ ಸುಪ್ರೀಂ ಮೆಟ್ಟಿಲೇರುತ್ತೇವೆ. ಡೂಪ್ಲಿಕೇಟ್ ತಡೆಗೆ ಬದ್ಧರಾಗಿದ್ದೇವೆಂದು ತಿಳಿಸಿದರು.