ಬೆಂಗಳೂರು: "ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆಯಲು ಬಂದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದು ನಿಜವೇ ಆಗಿದ್ದರೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಹೇಳಿದರು.
ಬುಧವಾರ ಶಿವಮೊಗ್ಗದಲ್ಲಿ ನಡೆದ ಪರೀಕ್ಷೆಯ ವೇಳೆ ವಿದ್ಯಾರ್ಥಿಯೊಬ್ಬರಿಗೆ ಜನಿವಾರ ತೆಗೆದು ಪರೀಕ್ಷೆಗೆ ಹೋಗುವಂತೆ ಒತ್ತಾಯಿಸಿದ ಆರೋಪ ಕೇಳಿಬಂದಿತ್ತು. ಇದೇ ವೇಳೆ, ಜನಿವಾರ ವಿಷಯವಾಗಿ ಬೀದರ್‌ನಲ್ಲೂ ವಿದ್ಯಾರ್ಥಿಯೊಬ್ಬ ಪರೀಕ್ಷೆಗೆ ಗೈರಾಗುವಂತಾಯಿತೆಂದು ಪೋಷಕರು ಆರೋಪಿಸಿದ್ದರು.
ಈ ಕುರಿತು ನಗರದಲ್ಲಿಂದು ಮಾತನಾಡಿದ ಸಚಿವರು, "ನಾನು ಈ ರೀತಿಯ ಕ್ರಮಗಳನ್ನು ಪ್ರೋತ್ಸಾಹಿಸುವುದಿಲ್ಲ. ಅಧಿಕಾರಿಗಳಿಂದ ವರದಿ ಪಡೆಯುತ್ತೇನೆ. ಸಿಇಟಿ ಅಭ್ಯರ್ಥಿಯ ಜನಿವಾರ ತೆಗೆಸಿದ್ದು ನಿಜವೇ ಆಗಿದ್ದರೆ, ಅದೊಂದು ಅತಿರೇಕದ ವರ್ತನೆಯಾಗುತ್ತದೆ. ಮುಂದೆ ಏನು ಮಾಡಬಹುದು ಎಂದು ಯೋಚಿಸುತ್ತೇನೆ" ಎಂದರು.
"ಎಲ್ಲಾ ಜಾತಿ, ಧರ್ಮಗಳ ಆಚರಣೆ, ಸಂಪ್ರದಾಯಗಳಿಗೆ ಗೌರವ ಕೊಡಬೇಕು. ಈ ವಿಚಾರವಾಗಿ ರಾಜಕೀಯ ಲಾಭ ಮಾಡುವುದಲ್ಲ. ಯಾವುದೇ ಸಮುದಾಯವನ್ನು ನೋಯಿಸುವ ಉದ್ದೇಶ ನಮ್ಮದಲ್ಲ. ಹಿಜಾಬ್ ಪ್ರಕರಣ ತರಹ ನಾವು ರಾಜಕೀಯ ಲಾಭ ಮಾಡಲ್ಲ. ನಾನೇ ಇದನ್ನು ಖಂಡಿಸುತ್ತೇನೆ. ಎಲ್ಲರ ಭಾವನೆಗಳನ್ನೂ ನಾವು ಗೌರವಿಸುತ್ತೇವೆ" ಎಂದು ಸ್ಪಷ್ಟಪಡಿಸಿದರು.
"ಪರೀಕ್ಷೆಯ ಜವಾಬ್ದಾರಿ ಆಯಾ ಡಿ.ಸಿಗಳಿಗೆ ಇರುತ್ತದೆ. ಜನಿವಾರ ತೆಗೆಯಬೇಕು ಎಂಬ ರೂಲ್ಸ್ ಇಲ್ಲ. ಪರೀಕ್ಷೆ ಬರೆಯದ ಹುಡುಗನಿಗೆ ಏನು ಪರ್ಯಾಯ ಮಾಡಬಹುದು?. ಈ ಬಗ್ಗೆ ಚರ್ಚಿಸುತ್ತೇವೆ. ಇದು ವಿಕೃತ ಮನಃಸ್ಥಿತಿ. ಅವರ ಸಂಪ್ರದಾಯ ಅವರ ಹಕ್ಕು. ಈ ಕುರಿತು ಮಾರ್ಗಸೂಚಿ ನಮ್ಮಿಂದ ಹೋಗಿಲ್ಲ. ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ" ಎಂದು ಹೇಳಿದರು.
ಶಿವಮೊಗ್ಗ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, "ಈ ಘಟನೆ ನನ್ನ ಜಿಲ್ಲೆಯಲ್ಲಿ ಆಗಿರುವುದರಿಂದ ಕ್ರಮಕ್ಕೆ ಸೂಚನೆ ನೀಡುತ್ತೇವೆ. ವಿದ್ಯಾರ್ಥಿಗಳ ವಿಚಾರದಲ್ಲಿ ಈ ರೀತಿ ಮಾಡುವುದು ಸರಿಯಲ್ಲ. ಇಂಥ ಸೂಚನೆಯನ್ನು ಅಧಿಕಾರಿಗಳಿಗೆ ಕೊಟ್ಟಿಲ್ಲ. ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಆ ನಂತರ ಕ್ರಮ ಕೈಗೊಳ್ಳುತ್ತೇವೆ" ಎಂದರು.
"ವಿದ್ಯಾರ್ಥಿ ಮರುಪರೀಕ್ಷೆ ಬರೆಯುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಸಚಿವರಾದ ಎಂ.ಸಿ.ಸುಧಾಕರ್ ಜೊತೆ ಇದರ ಬಗ್ಗೆ ಚರ್ಚಿಸುತ್ತೇನೆ. ಈ ರೀತಿಯ ನಿರ್ದೇಶನವನ್ನು ಇಲಾಖೆಯಿಂದ ಕೊಟ್ಟಿಲ್ಲ. ಜನಿವಾರ ತೆಗೆಯೋ ಅವಕಾಶ ಕಾನೂನಿನಲ್ಲಿಲ್ಲ. ಈ ರೀತಿಯಾಗಿದ್ರೆ ಖಂಡಿತಾ ಕ್ರಮ ತೆಗೆದುಕೊಳ್ಳುತ್ತೇವೆ. ಸಂಬಂಧಿಸಿದ ಇಲಾಖೆ ಜೊತೆ ಚರ್ಚಿಸ್ತೇವೆ. ಇಂತಹ ವಿಷಯಗಳು ಬಹಳ ಸೂಕ್ಷ್ಮ. ಜಾತಿ-ಧರ್ಮಗಳಿಗೆ ಗೌರವ ಕೊಡಲೇಬೇಕು" ಎಂದು ಹೇಳಿದರು.
ಬೀದರ್‌ನಲ್ಲಿ ನಡೆದ ಘಟನೆ: ಬೀದರ್ ನಗರದ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ವಿಷಯವಾಗಿ ನಡೆದ ಘಟನೆಯ ಬಗ್ಗೆ ವಿದ್ಯಾರ್ಥಿಯ ತಾಯಿ ನೀತಾ ಕುಲಕರ್ಣಿ ಪ್ರತಿಕ್ರಿಯಿಸಿದ್ದಾರೆ. "ಪರೀಕ್ಷಾ ಕೊಠಡಿಗೆ ಹೋಗುವಾಗ ಅಲ್ಲಿ ಜನಿವಾರ ತೆಗೆಯುವಂತೆ ಹೇಳಿದ್ದಾರೆ. ಅದಕ್ಕೆ ನನ್ನ ಮಗ ಇದನ್ನು ತೆಗೆಯುವಂತಿಲ್ಲ ಎಂದಿದ್ದಾನೆ. ಅದಕ್ಕವರು ಜನಿವಾರ ತೆಗೆದಿಟ್ಟು ಬಾ ಎಂದಿದ್ದಾರೆ. ಆಗ ಇವನು ಪರೀಕ್ಷೆಗೆ ಸಮಯವಾಗಿದೆ, ಒಳಗೆ ಬಿಡಿ ಎಂದು ಬೇಡಿಕೊಂಡಿದ್ದಾನೆ. ಆದರೂ ಅವರು ಪರೀಕ್ಷೆ ಬರೆಯಲು ಬಿಟ್ಟಿಲ್ಲ. ನಂತರ ಅಳುತ್ತಾ ಮನೆಗೆ ಬಂದು ನನಗೆ ನಡೆದ ವಿಷಯ ಹೇಳಿದ. ನಂತರ ಅಲ್ಲಿಗೆ ಹೋಗಿ ಕೇಳಿಕೊಂಡಾಗ ಅನುಮತಿಸುವುದಾಗಿ ಹೇಳಿದರು. 15 ನಿಮಿಷದಲ್ಲಿ ಹೇಗೆ ಪರೀಕ್ಷೆ ಬರೆಯಲು ಸಾಧ್ಯ?. ಒಂದು ಪೇಪರ್ ಬರೆಯಲು ಆಗಿಲ್ಲ. ನಮಗೆ ನ್ಯಾಯ ಬೇಕು" ಎಂದರು.
"ಈ ದಾರ (ಜನಿವಾರ) ಹಾಕಿ ಪರೀಕ್ಷೆಗೆ ಬಂದರೆ ಹೇಗೆ?, ಒಳಗಡೆ ಹೋದಾಗ ನೀನು ಇದನ್ನೇ ಬಳಸಿಕೊಂಡು ಏನಾದರೂ ಮಾಡಿಕೊಂಡರೆ ಯಾರು ಹೊಣೆ? ಎಂಬಿತ್ಯಾದಿ ಅಸಂಬದ್ಧ ವಿಷಯ ಪ್ರಸ್ತಾಪಿಸಿ, ಇದನ್ನು ತೆಗೆದು ಬಾ ಎಂದು ಸೂಚಿಸಿದ್ದಾರೆ ಎಂದು ಆರೋಪಿಸಿದರು.
ಬ್ರಾಹ್ಮಣ ಮಹಾಸಭಾ ಆಕ್ರೋಶ: "ಜನಿವಾರ ಹಾಕಿದ್ದನ್ನು ಆಕ್ಷೇಪಿಸಿ ಸಿಇಟಿಯಂತಹ ಮಹತ್ವದ ಪರೀಕ್ಷೆಯಿಂದ ವಂಚಿತಗೊಳಿಸಿ ವಿದ್ಯಾರ್ಥಿಯ ಭವಿಷ್ಯದ ಜೊತೆಗೆ ಚೆಲ್ಲಾಟವಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ವೆಂಕಟೇಶ ಕುಲಕರ್ಣಿ ಹುಮನಾಬಾದ್ ಒತ್ತಾಯಿಸಿದ್ದಾರೆ.
ಶಿವಮೊಗ್ಗದಲ್ಲೂ ಸಹ ಬ್ರಾಹ್ಮಣ ಸಮುದಾಯದ ವತಿಯಿಂದ ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗಿದೆ.
ಇದನ್ನೂ ಓದಿ: ರಾಜ್ಯಾದ್ಯಂತ ಈಡುಗಾಯಿ ಒಡೆಯುವ ಚಳುವಳಿಗೆ ಕರೆ ನೀಡಿದ ವಾಟಾಳ್ ನಾಗರಾಜ್ - EDUGAYI CHALAVALI