ಮತಗಳ್ಳತನ ಕುರಿತು ವ್ಯತಿರಿಕ್ತ ಹೇಳಿಕೆ; ಸಂಪುಟದಿಂದ ಸಚಿವ ಕೆ.ಎನ್ ರಾಜಣ್ಣ ವಜಾ
ಸಿಎಂ ಸಿದ್ದರಾಮಯ್ಯ ಶಿಫಾರಸು ಹಿನ್ನೆಲೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಧಿಸೂಚನೆ ಹೊರಡಿಸಿದ್ದು, ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಲಾಗಿದೆ.

Published : August 11, 2025 at 4:32 PM IST
|Updated : August 11, 2025 at 4:47 PM IST
ಬೆಂಗಳೂರು: ಮತಗಳ್ಳತನ ಆರೋಪದ ವಿರುದ್ಧ ವ್ಯತಿರಿಕ್ತ ಹೇಳಿಕೆ ನೀಡಿದ್ದ ಸಚಿವ ಕೆ.ಎನ್.ರಾಜಣ್ಣ ಅವರನ್ನು ಸಂಪುಟದಿಂದ ಪದಚ್ಯುತಿಗೊಳಿಸಲಾಗಿದೆ.
ತುಮಕೂರಿನಲ್ಲಿ ಮಾತನಾಡಿದ್ದ ಸಚಿವ ಕೆ.ಎನ್.ರಾಜಣ್ಣ, ವೋಟರ್ ಲಿಸ್ಟ್ ಯಾವ ಕಾಲದಲ್ಲಿ ಮಾಡಿದ್ದು? ನಮ್ಮದೇ ಸರ್ಕಾರ ಇರುವಾಗ ಮಾಡಿರೋದು ಅಲ್ವಾ? ಆವಾಗ ಎಲ್ಲಾ ಕಣ್ಮುಚ್ಚಿ ಕುಳಿತಿದ್ರಾ? ಎಂದು ತಮ್ಮ ಸರ್ಕಾರವನ್ನೇ ಪ್ರಶ್ನಿಸಿದ್ದರು. ಮತಪಟ್ಟಿ ಅಕ್ರಮಗಳು ನಡೆದಿರುವುದು ಸತ್ಯ. ಆದರೆ, ಆ ಅಕ್ರಮಗಳು ನಮ್ಮ ಕಣ್ಮುಂದೆನೆ ನಡೆದಿದ್ದಲ್ಲ. ನಮಗೆ ಅವಮಾನ ಆಗಬೇಕು. ನಾವು ನೋಡಿಕೊಳ್ಳಲಿಲ್ಲವಲ್ಲ ಅಂತ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಕಾಂಗ್ರೆಸ್ಗೆ ತೀವ್ರ ಮುಜುಗರ ಉಂಟಾಗಿತ್ತು.
ರಾಜೀನಾಮೆ ಪತ್ರ ನೀಡಿದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ರಾಜ್ಯಪಾಲರಿಗೆ ಸಚಿವ ಕೆ.ಎನ್.ರಾಜಣ್ಣ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಶಿಫಾರಸು ಮಾಡಿ ಪತ್ರ ಬರೆದಿದ್ದರು. ಸಿಎಂ ಸಿದ್ದರಾಮಯ್ಯ ಶಿಫಾರಸು ಹಿನ್ನೆಲೆ ಇದೀಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದು, ಕೆ.ಎನ್.ರಾಜಣ್ಣರನ್ನು ಸಚಿವ ಸಂಪುಟದಿಂದ ವಜಾ ಗೊಳಿಸಲಾಗಿದೆ. ಈ ಸಂಬಂಧ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ರಾಜ್ಯಪಾಲರು, ಕೆ.ಎನ್.ರಾಜಣ್ಣರನ್ನು ತಕ್ಷಣದಿಂದ ಪದಚ್ಯತಿಗೊಳಿಸಲಾಗಿರುವುದಾಗಿ ಮಾಹಿತಿ ನೀಡಿದ್ದಾರೆ.

ರಾಹುಲ್ ಗಾಂಧಿ ಅವರು ಬೆಂಗಳೂರಿಗೆ ಭೇಟಿ ನೀಡಿ ಮತಗಳ್ಳತನದ ವಿರುದ್ಧ ಧ್ವನಿ ಎತ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರು, ಸಂಸದರು, ಶಾಸಕರು ಹಾಗೂ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಪ್ರತಿಭಟಿಸಿದ್ದಾರೆ. ಹೀಗಿರುವಾಗ ಕಾಂಗ್ರೆಸ್‌ನ ಹಿರಿಯ ನಾಯಕರಾದ ರಾಜಣ್ಣ ಅವರೇ ಈ ಪ್ರತಿಭಟನೆಯನ್ನೇ ಪ್ರಶ್ನಿಸಿರುವುದು ಎಷ್ಟು ಸರಿ ಎಂದು ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ದೂರು ಸಲ್ಲಿಸಿದ್ದರು. ಹೀಗಾಗಿ ಸಚಿವ ಕೆ.ಎನ್.ರಾಜಣ್ಣ ಪಕ್ಷದಿಂದ ರಾಜೀನಾಮೆಗೆ ಒತ್ತಾಯ ಹೆಚ್ಚಾಗಿತ್ತು.
ಇತ್ತ ಕೆ.ಎನ್.ರಾಜಣ್ಣ ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಹೈ ಕಮಾಂಡ್ನಿಂದಲೂ ಸೂಚನೆ ಬಂದಿತ್ತು ಎಂದು ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ. ಈ ಸಂಬಂಧ ಸಚಿವ ಕೆ.ಎನ್.ರಾಜಣ್ಣ ಸಿಎಂ ಸಿದ್ದರಾಮಯ್ಯ ಆಪ್ತ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು ಎನ್ನಲಾಗಿದೆ. ವಿಧಾನಸೌಧದ ಮೊಗಸಾಲೆಯಲ್ಲಿನ ಸಿಎಂ ಚೇಂಬರ್ನಲ್ಲಿ ಈ ಸಂಬಂಧ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಜಿ.ಪರಮೇಶ್ವರ್ ತುರ್ತು ಸಭೆ ನಡೆಸಿದರು.
ಇತ್ತ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಸದನದಲ್ಲಿ ಚರ್ಚೆಗೆ ಗ್ರಾಸವಾಯಿತು. ಅಧಿವೇಶನ ಪುನರಾರಂಭವಾಗುತ್ತಿದ್ದ ಹಾಗೇ ಪ್ರತಿಪಕ್ಷಗಳಿಂದ ರಾಜೀನಾಮೆ ವಿಷಯ ಪ್ರಸ್ತಾಪಿಸಲಾಯಿತು. ಪ್ರತಿಪಕ್ಷ ನಾಯಕ ಆರ್.ಅಶೋಕ್ ವಿಷಯ ಪ್ರಸ್ತಾಪಿಸಿ, ರಾಜೀನಾಮೆ ಕೊಟ್ಟಿದ್ದಾರೆಯೇ ಎಂಬ ಬಗ್ಗೆ ಸ್ಪಷ್ಟಪಡಿಸಿ ಎಂದು ಒತ್ತಾಯಿಸಿದರು. ಅವರು ರಾಜೀನಾಮೆ ನೀಡಿದ್ದರೆ ಆ ಸ್ಥಳದಲ್ಲಿ ಕೂತಿರುವುದು ಸರಿಯಲ್ಲ ಎಂದು ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಅವರನ್ನು ನಾವು ಏನೂಂತ ಸಂಭೋದಿಸಬೇಕು ಎಂದು ಸುನಿಲ್ ಕುಮಾರ್ ಪ್ರಶ್ನಿಸಿದರು. ಅವರು ರಾಜೀನಾಮೆ ನೀಡಿದ್ದಾರೆಯೇ ಇಲ್ಲವೋ ಎಂಬ ಬಗ್ಗೆ ಸ್ಪಷ್ಟಪಡಿಸುವಂತೆ ಆಗ್ರಹಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಕೃಷ್ಣ ಬೈರೇಗೌಡ ಸದನ ಹಾಳಾಗುವುದು ಬೇಡ. ಪ್ರಶ್ನೋತ್ತರವನ್ನು ಕೈಗೊಳ್ಳಿ ಎಂದು ಒತ್ತಾಯಿಸಿದರು.
ಇದೇ ವೇಳೆ ಎದ್ದು ನಿಂತು ಮಾತನಾಡಿದ ಸಚಿವ ಕೆ.ಎನ್.ರಾಜಣ್ಣ, ಮಾತನಾಡಬಾರದು ಎಂದು ಸಂಸದೀಯ ವ್ಯವಹಾರ ಸಚಿವರು ಹೇಳಿದ್ದಾರೆ. ಸಿಎಂ ಅದರ ಬಗ್ಗೆ ಸದನದಲ್ಲಿ ಮಾತನಾಡುತ್ತಾರೆ. ಸಿಎಂ ಸದನಕ್ಕೆ ಬಂದ ಬಳಿಕ ಅವರು ಆ ಬಗ್ಗೆ ಹೇಳಿಕೆ ನೀಡಲಿದ್ದಾರೆ ಎಂದು ಸಂಸದೀಯ ವ್ಯವಹಾರ ಸಚಿವರು ಹೇಳಿದ್ದಾರೆ. ಆರ್.ಅಶೋಕ್ ನೀವು ಈ ಸ್ಥಾನದಲ್ಲಿ ಹೇಗೆ ಕೂತಿದ್ದಾರೆ ಎಂದು ಕೇಳುವುದು ಸರಿಯಲ್ಲ. ಈ ಸ್ಥಾನದಲ್ಲಿ ಕೂರಿಸಿದ್ದಾರೆ, ಹಾಗಾಗಿ ಇಲ್ಲಿ ಕೂತಿದ್ದೇನೆ. ಆ ರೀತಿ ಕೀಳು ಮಟ್ಟದಲ್ಲಿ ಮಾತನಾಡಬಾರದು. ಅಲ್ಲಿ ಕೂರಲು ನಾಚಿಕೆ ಆಗಲ್ವ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೇಳಿಕೆಗಳಿಂದ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾದ ರಾಜಣ್ಣ: ರಾಜಣ್ಣ ಈ ಮೊದಲು ಕೂಡ ಹೈಕಮಾಂಡ್ ವಿರುದ್ಧ ವ್ಯತಿರಿಕ್ತ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಇತ್ತೀಚೆಗೆ ಸಚಿವರ ಜೊತೆ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ಸಭೆ ನಡೆಸಿದ್ದರ ಬಗ್ಗೆಯೂ ರಾಜಣ್ಣ ಅಸಮಾಧಾನ ಹೊರಹಾಕಿದ್ದರು. 'ಸಚಿವರ ಜೊತೆ ಸುರ್ಜೇವಾಲಾ ಅವರು ಸಭೆ ಮಾಡುವುದು ಸರಿಯಲ್ಲ' ಎಂದು ರಾಜಣ್ಣ ಬಹಿರಂಗ ಹೇಳಿಕೆ ನೀಡಿದ್ದರು.
ಹಾಗೆಯೇ ಕಳೆದ ವಿಧಾನಸಭೆ ಅಧಿವೇಶನದ ವೇಳೆ ತಮ್ಮ ವಿರುದ್ಧ ಹನಿ ಟ್ರ್ಯಾಪ್ ಯತ್ನಗಳು ನಡೆಯುತ್ತಿವೆ ಎಂದು ದೂರಿದ್ದರು. ಜೊತೆಗೆ ರಾಜ್ಯದಲ್ಲಿ ಸಿಡಿ ಫ್ಯಾಕ್ಟರಿ ಇದ್ದು, ಹಲವು ನಾಯಕರನ್ನು ಟಾರ್ಗೆಟ್ ಮಾಡಲಾಗಿದೆ ಎಂದ ರಾಜಣ್ಣ ಅವರ ಹೇಳಿಕೆ ಭಾರೀ ಸದ್ದು ಮಾಡಿತ್ತು.
ಇದನ್ನೂ ಓದಿ: ಮತ ಕಳವು ಆರೋಪ; ಇಂಡಿಯಾ ಒಕ್ಕೂಟದ ಪ್ರತಿಭಟನಾ ಮೆರವಣಿಗೆ ತಡೆದ ಪೊಲೀಸರು, ರಾಹುಲ್ ಸೇರಿ ಹಲವರು ವಶಕ್ಕೆ

