ಬೀದರ್: ಸಿಎಂ ಸಿದ್ದರಾಮಯ್ಯ ವಿರುದ್ಧ 500 ಕೋಟಿ ರೂ. ಕಿಕ್ ಬ್ಯಾಕ್ ಆರೋಪಕ್ಕೆ "ಥೂ ಎಲ್ಲಾ ಸುಳ್ಳು ಆರೋಪಗಳು. ಇವರಿಗೆಲ್ಲ ಕೆಲಸ ಇಲ್ಲ. ಬಿಜೆಪಿ ಅವರು ಮಾಡಿರುವ ಅಕ್ರಮಗಳು, ಅವ್ಯವಹಾರಗಳು ಮುಚ್ಚಿಕೊಳ್ಳಲು ಈ ರೀತಿ ನಾಟಕ ಆಡುತ್ತಿದ್ದಾರೆ" ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಬೀದರ್ನಲ್ಲಿ ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, "ಬಿಜೆಪಿ ಅವರು ತಮ್ಮ ಹುಳುಕು ಹೊರಬರಬಾರದು ಎಂದು ಈ ರೀತಿ ವರ್ತನೆ ಮಾಡುತ್ತಿದ್ದಾರೆ. ರಾಜ್ಯಪಾಲರ ಹುದ್ದೆ ಸಾಂವಿಧಾನಾತ್ಮಕ ಹುದ್ದೆ. ಆ ಹುದ್ದೆಯ ಪಾವಿತ್ರತೆ ಕಾಪಾಡಿಕೊಳ್ಳಬೇಕು, ರಾಜ್ಯಪಾಲರ ಹುದ್ದೆ ಬಿಜೆಪಿ ಕಚೇರಿ ತರ ಆಗಬಾರದು. ಅದು ಆಗಲು ರಾಜ್ಯಪಾಲರು ಅವಕಾಶ ಕೊಡಬಾರದು" ಎಂದರು.
ಭ್ರಷ್ಟಾಚಾರದಲ್ಲಿ ಕರ್ನಾಟಕ ನಂ.01 ರಾಯರೆಡ್ಡಿ ಹೇಳಿಕೆ: "ಬಿಜೆಪಿ ಸರ್ಕಾರದ ವೇಳೆ ಭ್ರಷ್ಟಾಚಾರದಲ್ಲಿ ರಾಜ್ಯ ನಂ.01 ಇತ್ತು. ರಾಯರೆಡ್ಡಿ ಅವರಿಗೆ ಬಿಜೆಪಿ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರದಲ್ಲಿ ನಂ.01 ಇತ್ತು ಎಂಬುದೇ ಅವರ ತಲೆಯಲ್ಲಿ ಇದೆ.. ಅದನ್ನೇ ಅವರು ಬಾಯ್ತಪ್ಪಿ ಹೇಳಿರಬಹುದು" ಎಂದು ಖಂಡ್ರೆ ಸಮಜಾಯಿಸಿ ನೀಡಿದರು.
ಗುತ್ತಿಗೆದಾರರ ಸಂಘದಿಂದ ಬಿಲ್ ಪಾವತಿಸುವಂತೆ ಸರ್ಕಾರಕ್ಕೆ ಪತ್ರ ವಿಚಾರ: "ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಆರ್ಥಿಕ ಅನುಮೋದನೆ ಇಲ್ಲದೆ ಸಾವಿರಾರು ಕೋಟಿ ಟೆಂಡರ್ ಮಾಡಿಸಿದ್ದಾರೆ. ಹಣ ಮೀಸಲಿಡದೇ ಟೆಂಡರ್ ಮಾಡಿಸಿದಕ್ಕೆ ಈ ರೀತಿ ಸಮಸ್ಯೆಯಾಗುತ್ತಿದೆ. ಬಿಜೆಪಿ ಪಕ್ಷ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಲಿ. ಬೆಲೆ ಏರಿಕೆ ಕೇಂದ್ರ ಸರ್ಕಾರ ಮಾಡಿದ್ದು, ಇದಕ್ಕೆ ಹೊಣೆಗಾರಿಕೆ ಯಾರು..?. ಕೇಂದ್ರದ ವಿರುದ್ಧ ಹೋರಾಟ ಮಾಡಲಿ ನಾವು ಸಹಕಾರ ಮಾಡುತ್ತೇವೆ. ಪೆಟ್ರೋಲ್, ಡಿಸೇಲ್, ಸಿಲಿಂಡರ್ ಬೆಲೆ ಹೆಚ್ಚು ಮಾಡಿದ್ದಾರೆ. ಅವರು ದ್ವೇಷ, ಜಾತಿ, ಧರ್ಮದ ರಾಜಕಾರಣ ಮಾಡುತ್ತಾರೆ" ಎಂದು ತಿರುಗೇಟು ನೀಡಿದರು.
"ನಿರುದ್ಯೋಗದ ಸಮಸ್ಯೆ ಇದೆ. ಅದನ್ನು ಬಗೆ ಹರಿಸುವ ಕೆಲಸ ಮಾಡಲ್ಲ. ಇವತ್ತು ಯಾರ್ಯಾರು ಅತಿ ಶ್ರೀಮಂತ ಇರುವ ಅವರ ಸ್ನೇಹಿತರಿಗೆ ಸರ್ಕಾರದ ಆಸ್ತಿ ಮಾರಾಟ ಮಾಡುತ್ತಾರೆ. ದೇಶದ ಆರ್ಥಿಕತೆ ಹಾಳು ಮಾಡುತ್ತಾರೆ, ಅದಕ್ಕೆ ಉತ್ತರ ಕೊಡಬೇಕಲ್ಲ" ಎಂದು ಟಾಂಗ್ ನೀಡಿದರು.
ಇದನ್ನೂ ಓದಿ: ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಏ.17ರಂದು ರಾಜ್ಯದಲ್ಲಿ ಕಾಂಗ್ರೆಸ್ ಪ್ರತಿಭಟನೆ: ಡಿಸಿಎಂ ಡಿಕೆಶಿ