ಬೆಂಗಳೂರು: "ಹೊರ ರಾಜ್ಯದಿಂದ ಬಂದವರಿಂದಲೇ ಹೆಚ್ಚು ಅಪರಾಧ ಪ್ರಕರಣಗಳನ್ನು ನೋಡುತ್ತಿದ್ದೇವೆ" ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಹೊರ ರಾಜ್ಯದ ಸಾಕಷ್ಟು ಜನ ಬೆಂಗಳೂರಿಗೆ ಬರುತ್ತಾರೆ. ಹೀಗೆ ಬಂದವರಿಗೆ ಇಲ್ಲಿನ ಸಂಸ್ಕೃತಿ, ಜನರ ಭಾವನೆ ಅರ್ಥ ಆಗುವುದಿಲ್ಲವೋ ಗೊತ್ತಿಲ್ಲ. ಅವರು ಆ ರೀತಿ ವರ್ತಿಸುತ್ತಿದ್ದಾರೆ. ಸುಮಾರು ಕಡೆ ಕಟ್ಟಡ ಕಾರ್ಮಿಕರಿಂದ ಅಪರಾಧಗಳು ನಡೆದಿವೆ. ಈ ಬಗ್ಗೆ ಕ್ರಮಕ್ಕೆ ಕಾರ್ಮಿಕ ಇಲಾಖೆಯೊಂದಿಗೆ ಮಾತನಾಡುತ್ತೇನೆ. ಜಂಟಿಯಾಗಿ ಸಭೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ" ಎಂದರು.
ಹುಬ್ಬಳ್ಳಿಯಲ್ಲಿ ಬಾಲಕಿಯ ಕೊಲೆ ಆರೋಪಿಯ ಎನ್ಕೌಂಟರ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, "ಬಿಹಾರ ಮೂಲದ ವ್ಯಕ್ತಿ ಐದು ವರ್ಷದ ಮಗುವನ್ನು ಎತ್ತಿಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಆತನನ್ನು ಸ್ಥಳ ಪರಿಶೀಲನೆಗೆ ಕರೆದುಕೊಂಡು ಹೋಗುವಾಗ ಪೊಲೀಸರ ಮೇಲೆ ದಾಳಿ ಮಾಡಿದ್ದಾನೆ. ಪೊಲೀಸರು ಅವರ ಆತ್ಮರಕ್ಷಣೆ ಮಾಡಿಕೊಳ್ಳಬೇಕಲ್ವಾ?. ಹೀಗಾಗಿ ಕಾಲಿಗೆ ಫೈಯರ್ ಮಾಡಿದ್ದಾರೆ. ಅದು ಬೆನ್ನಿಗೆ ಬಿದ್ದಿದೆ. ಆತನನ್ನು ಆಸ್ಪತ್ರೆಗೆ ಸೇರಿಸಲು ಮುಂದಾಗಿದ್ದಾರೆ. ಆದರೆ, ಆಸ್ಪತ್ರೆಗೆ ಹೋಗುವಾಗಲೇ ತೀರಿಕೊಂಡಿದ್ದಾನೆ ಎಂದು ವರದಿ ಇದೆ. ನಾನು ತಕ್ಷಣ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ಮಾಡಲು ಸೂಚನೆ ನೀಡಿದ್ದೇನೆ. ತನಿಖೆ ಮಾಡಿದ ನಂತರದಲ್ಲಿ ಸತ್ಯಾಂಶ ಗೊತ್ತಾಗುತ್ತದೆ" ಎಂದು ಹೇಳಿದರು.
ಜಾತಿಗಣತಿ ವರದಿ ವಿಚಾರವಾಗಿ ಮಾತನಾಡಿ, "ವರದಿಯನ್ನು ಓದುತ್ತಿದ್ದೇನೆ. ನಾಲ್ಕೈದು ಪೇಜ್ ಓದಿದ್ದೇನೆ. ಒಟ್ಟಾರೆ ಇದರಲ್ಲಿ ಎರಡು ಮೂರು ವಿಚಾರಗಳಿವೆ. ಅದರ ಪರಿಣಾಮ, ಯೋಜನೆಗಳು, ಚರ್ಚೆ ಒಂದು ಭಾಗದಲ್ಲಿ ಇಡೋಣ. ವಸ್ತುಸ್ಥಿತಿ ಏನಿದೆ ಎಂದು ಗೊತ್ತಾಗಿದೆ. ಮುಂದೆ ಅದರ ಪರಿಣಾಮ, ಯೋಜನೆಗಳು, ಕಾರ್ಯಕ್ರಮಗಳನ್ನು ಈಗಲೇ ಹೇಳಲು ಆಗುವುದಿಲ್ಲ. ಕೊಟ್ಟಿರುವ ಪ್ರತಿಗಳನ್ನು ಎಲ್ಲಾ ಮಂತ್ರಿಗಳು ಓದಿಕೊಂಡು ಬರಬೇಕು. ಏ.17ರಂದು ಬೇರೆ ಯಾವುದು ವಿಷಯ ಬೇಡ. ಈ ಒಂದು ವಿಚಾರದ ಮೇಲೆ ಚರ್ಚೆ ಮಾಡೋಣ ಎಂದು ಸಿಎಂ ಹೇಳಿದ್ದಾರೆ. ಚರ್ಚೆ ಮಾಡಿದ ನಂತರದಲ್ಲಿ ಸ್ವೀಕರಿಸುವ ಬಗ್ಗೆ ತೀರ್ಮಾನ ಆಗಲಿದೆ" ಎಂದು ತಿಳಿಸಿದರು.
"ಈಗ ವರದಿಯ ಬಗ್ಗೆ ನಾವು ಏನೂ ಹೇಳಲು ಆಗುವುದಿಲ್ಲ. 2018ರಿಂದ ಪ್ರಾರಂಭವಾಗಿದ್ದು, 10 ವರ್ಷಗಳ ಬಳಿಕ ನಾವು ವರದಿಯನ್ನು ಆಚೆಗೆ ತರುತ್ತಿದ್ದೇವೆ. ಅಧ್ಯಯನ ಮಾಡಿ ಚರ್ಚೆ ಮಾಡಬೇಕಿದೆ. ರಾಜಕೀಯ ಟೀಕೆ-ಟಿಪ್ಪಣಿಗಳಿಗೆ ಉತ್ತರ ಕೊಡಲು ಹೋಗುವುದಿಲ್ಲ. ಸಮುದಾಯದ ಅಭಿಪ್ರಾಯಗಳು, ರಾಜಕಾರಣಿಗಳ ಅಭಿಪ್ರಾಯಗಳು, ಎಲ್ಲವೂ ಬರುತ್ತಿವೆ. ಚರ್ಚೆ ಮಾಡಿ ನಂತರ ನೋಡುತ್ತೇವೆ" ಎಂದು ಹೇಳಿದರು.