ವಿಜಯನಗರ: ಹಳೆ ದ್ವೇಷದ ಹಿನ್ನೆಲೆಯಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಆರೋಪಿ, ಸ್ಥಳ ಪಂಚನಾಮೆ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಈ ವೇಳೆ ಆತನ ಬಲಗಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿಬಾಬು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೊನ್ನೂರ ಅಲಿಯಾಸ್ ಹೊನ್ನೂರ ಸ್ವಾಮಿ (28) ಎನ್ನುವವನನ್ನು ಕೊಲೆ ಮಾಡಿರುವ ಘಟನೆ ಹೊಸಪೇಟೆ ನಗರದ ಜಂಬುನಾಥ ರಸ್ತೆಯ ಅಂಬೇಡ್ಕರ್ ನಗರದ 4ನೇ ಕ್ರಾಸ್‌ನಲ್ಲಿ ಬುಧವಾರ ರಾತ್ರಿ ನಡೆದಿತ್ತು. ಆರೋಪಿ ಕಾಳಿ ಅಲಿಯಾಸ್ ಹುಚ್ಚ ಕಾಳಿ(30)ಯನ್ನು ರಾತ್ರಿಯೇ ಪೊಲೀಸರು ಬಂಧಿಸಿದ್ದರು. ಸ್ಥಳ ಪಂಚನಾಮೆಗೆಂದು ಹೊಸಪೇಟೆ ಹೊರವಲದ ಮಹದೇವ ಇಂಡಸ್ಟ್ರೀಸ್ ಪ್ರದೇಶಕ್ಕೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಆರೋಪಿ ಕಾಳಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆತನ ಬಲಗಾಲಿಗೆ ಪಟ್ಟಣ ಠಾಣೆ ಪಿಐ ಹುಲಗಪ್ಪ ತುಪಾಕಿಯಿಂದ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಮುಖ್ಯ ಕಾನ್ಸ್ ಟೇಬಲ್ ಲಿಂಗರಾಜ್ ಹಾಗೂ ಕಾನ್ಸ್ ಟೇಬಲ್ ಕೊಟ್ರೇಶ್ ಎಂಬವರು ಗಾಯಗೊಂಡಿದ್ದಾರೆ. ಸದ್ಯ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದರು.
ದಾವಣಗೆರೆಯಲ್ಲಿ ವಾಸವಾಗಿದ್ದ ಹೊನ್ನೂರು ಸ್ವಾಮಿ ಜಂಬುನಾಥ ಜಾತ್ರೆಯ ಹಿನ್ನೆಲೆಯಲ್ಲಿ ಹೊಸಪೇಟೆ ನಗರಕ್ಕೆ ಭೇಟಿ ನೀಡಿದ್ದನು. ಈ ಸಂದರ್ಭದಲ್ಲಿ ಈತನೊಂದಿಗೆ ಜಗಳಕ್ಕಿಳಿದ ಆರೋಪಿ ಕಾಳಿ, ಚಾಕುವಿನಿಂದ ಚುಚ್ಚಿ ಬಳಿಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿದ್ದಾನೆ ಎಂದು ತಿಳಿಸಿದರು.
2015ರಲ್ಲಿ ನಡೆದ ಕೊಲೆ ಪ್ರಕರಣಯೊಂದರಲ್ಲಿ ಮೃತ ಹೊನ್ನೂರು ಸ್ವಾಮಿ, ಆರೋಪಿ ವಿರುದ್ಧ ಕೋರ್ಟ್ನಲ್ಲಿ ಸಾಕ್ಷಿ ನುಡಿದಿದ್ದನು ಎಂದು ಹೇಳಲಾಗುತ್ತಿದ್ದು, ಇದನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದ ಆರೋಪಿ ಕಾಳಿ, ಈತನ ಕೊಲೆಗೆ ಸಂಚು ರೂಪಿಸಿದ್ದನು. 2021ರಲ್ಲಿಯೂ ಸಹ ಹೊನ್ನೂರಸ್ವಾಮಿಯನ್ನು ಕೊಲೆ ಮಾಡಲು ಯತ್ನಿಸಿದ್ದನು. ಈ ಪ್ರಕರಣ ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದೆ ಎಂದು ವಿವರಿಸಿದರು.
ಇದನ್ನೂ ಓದಿ: ವಿಜಯನಗರ: ಹಳೆ ದ್ವೇಷದ ಹಿನ್ನೆಲೆ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಹತ್ಯೆ