ಕಡಬ(ದಕ್ಷಿಣ ಕನ್ನಡ): ಮಂಗಳೂರು-ಬೆಂಗಳೂರು ರೈಲು ಮಾರ್ಗದ ಕೋಡಿಂಬಾಳ ಸಮೀಪದ ಕೋರಿಯರ್ ರೈಲ್ವೇ ಹಳಿ ಸಮೀಪ ಇತ್ತೀಚೆಗೆ ಅಣ್ಣನನ್ನೇ ತಮ್ಮ ಡೀಸೆಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದ. ಇದರಿಂದ ಗಂಭೀರ ಸ್ವರೂಪದ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಅಣ್ಣ ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ತಮ್ಮನ ವಿರುದ್ಧ ಪೊಲೀಸರು ಕೊಲೆ ಯತ್ನ ಬದಲು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ನಾಗರಹಳ್ಳಿ ನಿವಾಸಿ ಹನುಮಪ್ಪ (42) ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ಈತನ ಸಹೋದರ ನಿಂಗಪ್ಪ (21) ಕೃತ್ಯ ಎಸಗಿದ ಆರೋಪಿ. ಮೊದಲು ಕಡಬ ಪೊಲೀಸರ ವಶದಲ್ಲಿದ್ದ ಈತನನ್ನು ಜೂ.8ರ ರಾತ್ರಿ ಮಂಗಳೂರು ವಿಭಾಗದ ರೈಲ್ವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ವಶಕ್ಕೆ ಪಡೆದು ಬಂಧಿಸಿದ್ದರು.
ಆರಂಭದಲ್ಲಿ ಘಟನಾ ಸ್ಥಳಕ್ಕೆ ಕಡಬ ಠಾಣಾ ಎಸ್.ಐ. ಅಭಿನಂದನ್ ಮತ್ತು ಸಿಬ್ಬಂದಿ ಭೇಟಿ ನೀಡಿ, ಆರೋಪಿಯನ್ನು ಸ್ಥಳೀಯರ ಸಹಕಾರದೊಂದಿಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬಳಿಕ ಮಂಗಳೂರಿನಿಂದ ರೈಲ್ವೇ ಪೊಲೀಸರು ಆಗಮಿಸಿ ಮಾಹಿತಿ ಸಂಗ್ರಹಿಸಿ ತಮ್ಮ ವಶಕ್ಕೆ ಪಡೆದಿದ್ದರು.
ಕೊಲೆಗೆ ಕಾರಣ ತಿಳಿಸಿದ ತಮ್ಮ: "ಅಣ್ಣನಿಗೆ ವಿಪರೀತ ಕುಡಿತದ ಚಟವಿತ್ತು. ಆತನ ಕಾಟದಿಂದಲೇ 14 ವರ್ಷಗಳ ಹಿಂದೆ ಆತನ ಹೆಂಡತಿ ಮನೆ ಬಿಟ್ಟು ಹೋಗಿದ್ದಳು. ಇತ್ತೀಚೆಗೆ ಕುಡಿದ ಮತ್ತಿನಲ್ಲಿ ನಮ್ಮ ತಾಯಿಯನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲು ಯತ್ನಿಸಿದ್ದ. ಇಂದು ನನ್ನ ಜೊತೆಯೂ ಗಲಾಟೆ ಮಾಡಿದ್ದಾನೆ. ಈ ಎಲ್ಲಾ ಹಿಂಸೆಯಿಂದ ನಾವು ರೋಸಿ ಹೋಗಿ ಅವನನ್ನು ಕೊಲೆ ಮಾಡಲು ನಿರ್ಧರಿಸಿದ್ದೆವು" ಎಂದು ನಿಂಗಪ್ಪ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಇಂದು (ಜೂ.9) ಮಂಗಳೂರು ರೈಲ್ವೇ ಪೊಲೀಸರ ತಂಡ ಹಾಗು ವಿಧಿವಿಜ್ಞಾನ ತಂಡ ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಬಂದು ಮಹಜರು ನಡೆಸಿದ್ದಾರೆ.
ಮಂಗಳೂರು ರೈಲ್ವೇ ಪೊಲೀಸ್ ಠಾಣೆಯ ಉಪ ನಿರೀಕ್ಷಕರು ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿ, "ಕೌಟುಂಬಿಕ ಕಲಹದಿಂದ ಈ ಘಟನೆ ನಡೆದಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆರೋಪಿಯ ವಿರುದ್ದ ಕೊಲೆಯತ್ನ ಕೇಸು ದಾಖಲಿಸಿ ಬಂಧಿಸಲಾಗಿತ್ತು. ಇದೀಗ ಗಾಯಾಳು ಮೃತಪಟ್ಟ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ" ಎಂದು ತಿಳಿಸಿದರು.
ಘಟನೆಯ ಹಿನ್ನೆಲೆ: ಪುತ್ತೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸಹೋದರರಿಬ್ಬರು ಜೂ.8ರ ಭಾನುವಾರ ಮಧ್ಯಾಹ್ನ ತಮ್ಮ ಊರಿಗೆ ರೈಲಿನಲ್ಲಿ ಹೊರಟಿದ್ದರು. ಅಣ್ಣನನ್ನು ಮುಗಿಸಲು ಮೊದಲೇ ಸಂಚು ರೂಪಿಸಿದ್ದ ನಿಂಗಪ್ಪ, ಕೋಡಿಂಬಾಳ ರೈಲು ನಿಲ್ದಾಣದಲ್ಲಿ ರೈಲು ನಿಂತಾಗ ಆತನನ್ನು ಕೆಳಗಿಳಿಸಿದ್ದಾನೆ. ರೈಲು ಹೊರಟುಹೋದ ನಂತರ ನಿಲ್ದಾಣದಿಂದ ಒಂದು ಕಿ.ಮೀ ದೂರದ ಕೋಡಿಂಬಾಳ ಗ್ರಾಮದ ಕೋರಿಯಾರ್ ಎಂಬಲ್ಲಿಗೆ ಕರೆದೊಯ್ದು, ಏಕಾಏಕಿ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಹನುಮಪ್ಪ, ಪಕ್ಕದಲ್ಲೇ ಇದ್ದ ಚರಂಡಿಗೆ ಹಾರಿ ನೀರಿನಲ್ಲಿ ಹೊರಳಾಡಿದ್ದರಿಂದ ತಕ್ಷಣಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದ. ಚೀರಾಟ ಕೇಳಿ ಸ್ಥಳೀಯರು ಧಾವಿಸಿ ಬಂದು, ಗಂಭೀರ ಸ್ಥಿತಿಯಲ್ಲಿದ್ದವನನ್ನು ಮೊದಲು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದರು. ಇಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ, ಇಂದು ಬೆಳಗ್ಗೆ ಹನುಮಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಕಡಬ: ಅಣ್ಣನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಮ್ಮ - MURDER ATTEMPT