ಹುಬ್ಬಳ್ಳಿ: ಸಮೀಪದ ದಿಗಂಬರ ಜೈನ ನವಗ್ರಹ ತೀರ್ಥಕ್ಷೇತ್ರದಲ್ಲಿ ಬುಧವಾರ ಸಂಜೆ ಒಂಭತ್ತು ತೀರ್ಥಂಕರರಿಗೆ ಏಕಕಾಲಕ್ಕೆ ಮಹಾಮಸ್ತಕಾಭಿಷೇಕ ನೆರವೇರಿಸಲಾಯಿತು.
ಎತ್ತರದ ಸ್ಥಾನದಲ್ಲಿ ಕಮಲಗಳ ನಡುವೆ ಪ್ರತಿಷ್ಠಾಪಿತಗೊಂಡ ನವಗ್ರಹ ಪ್ರತಿಮೆಗಳ ಎದುರು ಸೇರಿದ್ದ ಸಾವಿರಾರು ಭಕ್ತರು 12 ವರ್ಷಗಳಿಗೊಮ್ಮೆ ಜರುಗುವ ಮಹಾಮಸ್ತಕಾಭಿಷೇಕ ವೈಭವದ ದೃಶ್ಯಗಳನ್ನು ಕಣ್ತುಂಬಿಕೊಂಡು ಹರ್ಷಪಟ್ಟರು.

ಆರಂಭದಲ್ಲಿ ಇಂದ್ರ ಸಹಿತ ಅಷ್ಟದಿಕ್ಪಾಲಕರು, ಆದಿತ್ಯಾದಿ ನವಗ್ರಹಗಳನ್ನು ಆಮಂತ್ರಿಸಿ, ವಿಘ್ನನಿವಾರಣೆಗಾಗಿ ಅರ್ಘ್ಯ ನೀಡಿ ಪ್ರಾರ್ಥಿಸಲಾಯಿತು. ಆಚಾರ್ಯ ಗುಣಧರ ನಂದಿ ಮಹಾರಾಜರು ಹಸಿರು ನಿಶಾನೆ ತೋರಿದ ಮೇಲೆ ಜಲಾಭಿಷೇಕದೊಂದಿಗೆ ಮಹಾಮಸ್ತಕಾಭಿಷೇಕವು ಆರಂಭಗೊಂಡಿತು.

ಇಂದ್ರ ಇಂದ್ರಾಣಿಯರು ಮೊದಲು ಭಗವಾನ್ ಪಾರ್ಶ್ವನಾಥರು ಹಾಗೂ ಅದೇ ಕಾಲಕ್ಕೆ ಇತರ ತೀರ್ಥಂಕರರ ಮಸ್ತಕದ ಮೇಲೆ ಎಳನೀರು ಅಭಿಷೇಕ ಮಾಡಿದರು. ಹಳದಿ, ಕುಂಕುಮ, ಚಂದನ, ಕರ್ಪೂರ, ಗಿಡಮೂಲಿಕೆಗಳ ಮಿಶ್ರಿತ ಜಲಗಳಿಂದ ಮಸ್ತಕಾಭಿಷೇಕವು ನೆರವೇರಿತು. ಗುರುದೇವ ಆಚಾರ್ಯ ಕುಂತುಸಾಗರ ಮಹಾರಾಜರು, ಅನೇಕಾಂತ ಆಚಾರ್ಯರು ಮೊದಲಾದವರು ಮಾತನಾಡಿದರು.
ಮಹಿಳೆಯರ ಡೊಳ್ಳು ಕುಣಿತ, ಗೊಂಬೆಗಳ ಕುಣಿತ ಚಂಡೆವಾದನ ಹಾಡುಗಳಿತ್ತು. ತೀರ್ಥಂಕರ ಗುರುದೇವ ಕುಂತುಸಾಗರ ಮಹಾರಾಜ, ಆಚಾರ್ಯ ಗುಣಧರ ನಂದಿ ಮಹಾರಾಜ ಹಾಗೂ ಇತರೆ ನಂದಿ ಆಚಾರ್ಯರು ಉಪಸ್ಥಿತರಿದ್ದರು.