ಚಾಮರಾಜನಗರ: ಇಂದು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಲಾರಿ ಮಾಲೀಕರು ಮತ್ತು ಚಾಲಕರು ಮುಷ್ಕರಕ್ಕೆ ಕರೆ ಕೊಟ್ಟಿದ್ದು ಬಲವಂತದ ಮುಷ್ಕರ ನಡೆಸದಂತೆ ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ.
ಚಾಮರಾಜನಗರದ ಬೈಪಾಸ್ ರಸ್ತೆಯಲ್ಲಿ ಸಂಘಟನೆ ಮುಖಂಡರಿಗೆ ತಿಳಿ ಹೇಳಿದ ಪೊಲೀಸರು, ಬಲವಂತದ ಮುಷ್ಕರ ಬೇಡ, ಸ್ವಯಂ ಪ್ರೇರಣೆಯಿಂದ ಲಾರಿ ನಿಲ್ಲಿಸಿಕೊಂಡರೆ ಅಭ್ಯಂತರವಿಲ್ಲ, ಬಲವಂತದಿಂದ ಲಾರಿ ನಿಲ್ಲಿಸಿದರೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಕೊಟ್ಟರು.
ಜಿಲ್ಲೆಯಲ್ಲಿ ನೂರಾರು ಲಾರಿಗಳು ನಿಂತರೆ ಸರಕು ಸಾಗಾಟದಲ್ಲಿ ವ್ಯತ್ಯಯ ಆಗಲಿದ್ದು, ಬೆಳಗ್ಗೆಯಿಂದ ಲಾರಿ ಸಂಚಾರ ವಿರಳವಾಗಿರುವುದು ಕಂಡು ಬಂದಿದೆ.
ದಿಂಬಂ ರಸ್ತೆ ಖಾಲಿ-ಖಾಲಿ : ರಾಜ್ಯದಲ್ಲಿ ಲಾರಿ ಮುಷ್ಕರದ ಹಿನ್ನೆಲೆ, ತಮಿಳುನಾಡು ಗಡಿಯಲ್ಲಿ ಲಾರಿಗಳು ನಿಂತಲ್ಲೇ ನಿಂತಿದ್ದ ದೃಶ್ಯ ಮಂಗಳವಾರ ಬೆಳಗ್ಗೆ ಕಂಡುಬಂದಿತು. ರಾಜ್ಯಕ್ಕೆ ಬರದೇ ತಮಿಳುನಾಡಿನಲ್ಲೇ ನೂರಾರು ಲಾರಿಗಳು ನಿಂತಿವೆ. ಗಡಿಭಾಗದ ಚೆಕ್ ಪೋಸ್ಟ್ನಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಬಿಕೋ ಎನ್ನುತ್ತಿದೆ.

ದಿಂಬಂ ಘಟ್ಟದಲ್ಲಿ ಲಾರಿ ಸಂಚಾರವಿಲ್ಲದೇ ರಸ್ತೆ ಖಾಲಿ ಖಾಲಿಯಾಗಿದ್ದು, ಇಲ್ಲಿ ನಿತ್ಯ ನೂರಾರು ಲಾರಿಗಳ ಸಂಚಾರ ಮಾಡುತ್ತಿದ್ದವು. ತಮಿಳುನಾಡಿನಿಂದ ನಿತ್ಯ ಸಾವಿರಾರು ಲಾರಿಗಳು ದಿಂಬಂ ಮೂಲಕ ರಾಜ್ಯಕ್ಕೆ ಬರುತ್ತಿತ್ತು. ಆದರೆ, ಮುಷ್ಕರದಿಂದ ಲಾರಿಗಳು ನಿಂತಲ್ಲೇ ನಿಂತಿದೆ.
ಮಧ್ಯರಾತ್ರಿಯಿಂದಲೇ ಮುಷ್ಕರ ಆರಂಭ, ಹೆದ್ದಾರಿಗಳ ಪಕ್ಕ ಸಾಲು ಸಾಲು ಲಾರಿಗಳು: ಇಂಧನ ದರ ಏರಿಕೆ, ಟೋಲ್ ಶುಲ್ಕ ಹೆಚ್ಚಳ ವಿರೋಧಿಸಿ ಲಾರಿ ಮಾಲೀಕರ ಸಂಘ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರ ಸೋಮವಾರ ಮಧ್ಯರಾತ್ರಿಯಿಂದ ಪ್ರಾರಂಭವಾಗಿದ್ದು, ಹೆದ್ದಾರಿಗಳ ಪಕ್ಕ, ಮಾರುಕಟ್ಟೆ, ಯಶವಂತಪುರದ ಟ್ರಕ್ ಟರ್ಮಿನಲ್ನಲ್ಲಿ ಲಾರಿಗಳು ಸಾಲು ಸಾಲಾಗಿ ನಿಂತಿದ್ದು, ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿವೆ. ಮಾರುಕಟ್ಟೆ ಮತ್ತಿತರ ಸ್ಥಳಗಳಿಗೆ ಅಗತ್ಯವಸ್ತುಗಳು, ಎಲೆಕ್ಟ್ರಾನಿಕ್ಸ್, ಗೂಡ್ಸ್ ಸಾಗಾಟ ಮಾಡುವ ಸುಮಾರು 6 ಲಕ್ಷ ಲಾರಿಗಳು ರಾಜ್ಯಾದ್ಯಂತ ಸಂಚಾರ ಸ್ಥಗಿತಗೊಳಿಸಿವೆ.
ತಕ್ಷಣಕ್ಕಿಲ್ಲ ಯಾವುದೇ ವ್ಯತ್ಯಯ - ಮುಂದೆ ತಟ್ಟಬಹುದು ಬಿಸಿ; ''ಲಾರಿಗಳ ಮುಷ್ಕರದಿಂದ ತಕ್ಷಣಕ್ಕೆ ವ್ಯತ್ಯಯಗಳು ಆಗದಿದ್ದರೂ ಸಹ ಅನಿರ್ದಿಷ್ಟಾವಧಿಗೆ ಕರೆ ನೀಡಿರುವುದರಿಂದ ಮೂರ್ನಾಲ್ಕು ದಿನಗಳಲ್ಲಿ ಮುಷ್ಕರದ ಬಿಸಿ ತಟ್ಟಬಹುದು. ರಾಜ್ಯ ಸರ್ಕಾರ ಮಾತುಕತೆಗೆ ಕರೆದರೆ ನಾವು ಸಿದ್ಧರಿದ್ದೇವೆ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ ಆರ್ ಷಣ್ಮುಖಪ್ಪ ತಿಳಿಸಿದ್ದಾರೆ.