ಹಾವೇರಿ: ಶಿಕ್ಷಕರೊಬ್ಬರ ಬಾಕಿ ವೇತನ ಸಂದಾಯ ಮಾಡಲು 30 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಡಿ ಹಾವೇರಿ ಬಿಇಒ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಹಾವೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಅಧಿಕಾರಿ.
ಹಾವೇರಿಯ ಬಸವೇಶ್ವರ ನಗರದ 13ನೇ ಕ್ರಾಸ್ ನಲ್ಲಿರುವ ಮನೆಯಲ್ಲಿ 15 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರು ದಾಳಿ ನಡೆಸಿ ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ. ಶಿಕ್ಷಕ ಪ್ರತಾಪ್ ಬಾರ್ಕಿ ಎಂಬುವರಿಂದ ಲಂಚ ಪಡೆಯುತ್ತಿದ್ದ ವೇಳೆ ಬಿಇಒ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ಮೌನೇಶ್ 30 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರ ಮುಂಗಡವಾಗಿ 15 ಸಾವಿರ ರೂಪಾಯಿ ಹಣ ಪಡೆಯುತಿದ್ದ ವೇಳೆ ಲೋಕಾ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಡಿಎಸ್ಪಿ ಮಧುಸೂದನ್, ಸಿಪಿಐ ಬಸವರಾಜ್ ಹಲಬಣ್ಣನವರ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

ಬಿಇಒ ಮೌನೇಶ ಬಡಿಗೇರ, ಶಿಕ್ಷಕ ಮಲ್ಲಿಕಾರ್ಜುನ ಕಂಬಾರಗೇರಿ ಹಾಗೂ ಬಿಇಒ ವಾಹನ ಚಾಲಕ ಪಾಪು ಪೂಮಪ್ಪ ಉದಾಯತ್ ವಿರುದ್ಧ ಸಹ ದೂರು ದಾಖಲಾಗಿದೆ. ಮೂವರು ಸೇರಿಕೊಂಡು ಶಿಕ್ಷಕ ಪ್ರತಾಪ್ ಬಾರ್ಕಿಯವರ ಬಾಕಿ ವೇತನ ಸಂದಾಯ ಮಾಡಲು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ : ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಆರೋಪದಡಿ ಇಬ್ಬರು ಅಮಾನತು : ಜಿಲ್ಲಾಧಿಕಾರಿ ಗುರುದತ್ತ ಹೆಗಡೆ