ದಾವಣಗೆರೆ: ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ(ದೂಡಾ) ನೂತನ ಬಡಾವಣೆ ನಿರ್ಮಿಸಲು ಜಮೀನು ಸಿಗುತ್ತಿಲ್ಲ ಎಂದು ಪ್ರಾಧಿಕಾರದ ಅಧಿಕಾರಿಗಳು ಪರದಾಡುತ್ತಿದ್ದಾರೆ. ಇತ್ತ, ನಿವೇಶನ ಕೊಡಿ ಎಂದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಜನರು ಇಪ್ಪತ್ತು ಸಾವಿರ ಅರ್ಜಿ ಹಾಕಿ ಕಾದು ಕುಳಿತಿದ್ದಾರೆ.
ಅರ್ಜಿ ಹಾಕಿ ಹಲವು ದಿನಗಳೇ ಉರುಳಿದರೂ ಸರ್ಕಾರದಿಂದ ನಿವೇಶನ ಭಾಗ್ಯ ಕಲ್ಪಿಸಲಾಗುತ್ತಿಲ್ಲ. ಈಗಾಗಲೇ ದಾವಣಗೆರೆ - ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಲೇಔಟ್ ಮಾಡಲು ಹರಿಹರ ಹಾಗೂ ದಾವಣಗೆರೆಯನ್ನು ಸುತ್ತು ಹಾಕಿದ್ದಾರೆ. ದಾವಣಗೆರೆ ನಗರ, ಬೂದಾಳ್ ರಸ್ತೆ, ಹರಿಹರ, ಅಮರಾವತಿ ಸೇರಿದಂತೆ ಹಲವೆಡೆ ಜಮೀನುಗಳನ್ನು ವೀಕ್ಷಣೆ ಮಾಡಿದ್ದಾರೆ. ಲೇಔಟ್ ಮಾಡಲು ಜಮೀನು ಸಿಗುವವರೆಗೂ ದೂಡಾ ಬಳಿ ಇರುವ ಸೈಟ್ಗಳಲ್ಲಿ ಐವತ್ತು- ನೂರು ಫ್ಲಾಟ್ಗಳನ್ನು ಕಟ್ಟಿ ಬಡವರಿಗೆ ಕೊಡಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷ ಕೆ.ದಿನೇಶ್ ಶೆಟ್ಟಿ ತಿಳಿಸಿದ್ದಾರೆ.
ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಲೇಔಟ್ ಮಾಡದೇ ವರ್ಷಗಳೇ ಉರುಳಿವೆ. ನಿವೇಶನಗಳನ್ನು ಕಡಿಮೆ ಬೆಲೆಗೆ ಸಿಗುತ್ತೆ ಎಂದು ಇಪ್ಪತ್ತು ಸಾವಿರ ಜನ ಅರ್ಜಿ ಹಾಕಿದ್ದಾರೆ. ಪ್ರಾಧಿಕಾರಕ್ಕೆ ಲೇಔಟ್ ಮಾಡಲು ಜಮೀನಿನ ಸಮಸ್ಯೆ ಎದುರಾಗಿದೆ. ಲೇಔಟ್ ಮಾಡಲು ರೈತರು ಜಮೀನು ಕೊಡಲು ಹಿಂದೇಟು ಹಾಕುತ್ತಿದ್ದರೆ, ಇನ್ನು ಕೆಲವರು ನ್ಯಾಯಲಯದ ಮೊರೆ ಹೋಗಿದ್ದಾರೆ. ಜಮೀನು ಕೊಡಲು ಇಷ್ಟಪಡದೆ ಇರುವ ಕಾರಣ 50:50 ಅನುಪಾತದಲ್ಲಿ ಜಮೀನು ಎಂದು ಮನವಿ ಮಾಡಿದ್ದಾರೆ.
ನಿವೇಶನಗಳನ್ನು ಮಾಡಿ ಅಭಿವೃದ್ಧಿ ಮಾಡಲು ರೈತರು ಜಮೀನು ಕೊಡಬೇಕು. ಸಿಕ್ಕ ಜಮೀನಿನಲ್ಲಿ ಬಡವರಿಗೆ, ಮಧ್ಯಮ ವರ್ಗದವರಿಗೆ, ಕೂಲಿ ಕಾರ್ಮಿಕರಿಗೆ, ಖಾಸಗಿ ಬಸ್ ಕಾರ್ಮಿಕರಿಗೆ ನಿವೇಶನಗಳನ್ನು ಕೊಡಲು ಪ್ರಾಧಿಕಾರ ನಿರ್ಧಾರ ಮಾಡಿದೆ. ಬಿಜೆಪಿ ಅವಧಿಯಲ್ಲಿ ಖಾಸಗಿ ಲೇಔಟ್ಗಳಿಗೆ ಹೆಚ್ಚು ಉತ್ತೇಜನ ಕೊಟ್ಟ ಕಾರಣ ದೂಡ ಲೇಔಟ್ ಮಾಡಲು ಆಸಕ್ತಿ ತೆಗೆದುಕೊಂಡಿಲ್ಲ ಎಂದು ಹೇಳಿದರು.