ವಿಶೇಷ ವರದಿ- ವೆಂಕಟ್ ಪೊಳಲಿ
ಬೆಂಗಳೂರು: ನಗರೀಕರಣದ ವೇಗಕ್ಕೆ ರಾಜ್ಯದ ಕೆರೆಗಳ ಒತ್ತುವರಿ ಹೆಚ್ಚುತ್ತಲೇ ಇದೆ. ಪ್ರಭಾವಿಗಳ ಪ್ರಭಾವದಿಂದ ಕೆರೆ ಒತ್ತುವರಿ ಎಗ್ಗಿಲ್ಲದೆ ನಡೆಯುತ್ತಿರುತ್ತದೆ. ಸರ್ಕಾರ ರಾಜ್ಯದಲ್ಲಿನ ಕೆರೆ ಒತ್ತುವರಿಗಳ ಸರ್ವೆ ನಡೆಸುತ್ತಿದ್ದು, ಈವರೆಗೆ ಅಪಾರ ಸಂಖ್ಯೆಯಲ್ಲಿ ಒತ್ತುವರಿ ಪತ್ತೆಯಾಗಿವೆ. ಆದರೆ ಅವುಗಳ ಪೈಕಿ ತೆರವು ಮಾಡಿರುವ ಕೆರೆಗಳ ಸಂಖ್ಯೆ ಮಾತ್ರ ಅತ್ಯಲ್ಪವಾಗಿದೆ. ಅತಿಕ್ರಮಣ ತೆರವಿಗೆ ವಿಳಂಬ ಧೋರಣೆ ಅನುಸರಿಸುತ್ತಿರುವುದು ಅಂಕಿ-ಅಂಶಗಳಿಂದ ಸ್ಪಷ್ಟವಾಗುತ್ತಿದೆ. ಅಷ್ಟಕ್ಕೂ ಕೆರೆ ಒತ್ತುವರಿ, ತೆರವಿನ ಸ್ಥಿತಿಗತಿ ಏನಿದೆ ಎಂಬ ವಿಶೇಷ ವರದಿ ಇಲ್ಲಿದೆ.
ಕೆರೆಗಳು ನೀರಿನ ಸೆಳೆಗೆ ಮೂಲವಾಗಿದೆ. ಆದರೆ ರಾಜ್ಯದಲ್ಲಿನ ಕೆರೆಗಳು ನಗರೀಕರಣ, ಅಭಿವೃದ್ಧಿ ಹೆಸರಲ್ಲಿ ಮಾಯವಾಗುತ್ತಿವೆ. ಅಭಿವೃದ್ಧಿ ಕಾರಣಕ್ಕೆ ಕೆರೆಗಳ ಒತ್ತುವರಿ ರಾಜ್ಯಾದ್ಯಂತ ವ್ಯಾಪಕವಾಗಿ ನಡೆಯುತ್ತಿದೆ. ನಗರ ಪ್ರದೇಗಳಲ್ಲಿ ಒತ್ತುವರಿಯಾದ ಕೆರೆಗಳ ಸಂಖ್ಯೆ ಅತಿ ಹೆಚ್ಚಿದೆ. ಪ್ರಭಾವಿಗಳ ಪ್ರಭಾವಕ್ಕೆ ಕೆರೆಗಳು ತಮ್ಮ ಅಸ್ತಿತ್ವವನ್ನು ನಿರಂತರವಾಗಿ ಕಳೆದುಕೊಳ್ಳುತ್ತಿವೆ. ಕೆರೆ ಒತ್ತುವರಿ ತೆರವಿಗೆ ಸರ್ಕಾರ ಕಾರ್ಯಕ್ರಮ ರೂಪಿಸಿದರೂ ಅದು ವಾಸ್ತವದಲ್ಲಿ ಹೆಚ್ಚಿನ ಫಲ ನೀಡುತ್ತಿಲ್ಲ. ಕೆರೆಗಳನ್ನು ಮನೆ, ಕಟ್ಟಡಗಳ ನಿರ್ಮಾಣಕ್ಕಾಗಿ ಹಂತ ಹಂತವಾಗಿ ಒತ್ತುವರಿ ಮಾಡಲಾಗುತ್ತಿದೆ.

ಕೆರೆಗಳ ಒತ್ತುವರಿ ತೆರವುಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆಯ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಅಪೆಕ್ಸ್ ಸಮಿತಿಯನ್ನು ಹಾಗೂ ಡಿಸಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚನೆ ಮಾಡಲಾಗಿದೆ. ಎರಡೂ ಸಮಿತಿಗಳು ನ್ಯಾಯಾಲಯದ ಆದೇಶದ ಅನ್ವಯ ಕೆರೆಗಳ ಸಂರಕ್ಷಣೆ, ಅಭಿವೃದ್ಧಿ ಹಾಗೂ ನಿರ್ವಹಣೆ ಬಗ್ಗೆ ಕೆಲಸ ಮಾಡುತ್ತಿವೆ. ಇದಕ್ಕಾಗಿ ಒತ್ತುವರಿಯಾದ ಕೆರೆಗಳ ಸರ್ವೆ ಕಾರ್ಯವೂ ನಡೆಯುತ್ತಿದೆ. ಅದರಂತೆ ಬಹುತೇಕ ಕೆರೆಗಳು ಒತ್ತುವರಿಯಾಗಿರುವುದು ಪತ್ತೆಯಾಗಿದೆ. ಆದರೆ, ಅವುಗಳ ತೆರವು ಕಾರ್ಯ ಕಾರ್ಯ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ.
ರಾಜ್ಯದಲ್ಲಿರುವ ಒಟ್ಟು ಕೆರೆಗಳು, ಅಳತೆಯಾಗಿರುವುದೆಷ್ಟು?: ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ಸುಮಾರು 41,849 ಕೆರೆಗಳಿವೆ. ಈ ಪೈಕಿ ಅತಿ ಹೆಚ್ಚು ಕೆರೆಗಳು ಹಾಸನದಲ್ಲಿವೆ. ಸುಮಾರು 6,861 ಕೆರೆಗಳಿವೆ. ಶಿವಮೊಗ್ಗದಲ್ಲಿ 4,792 ಕೆರೆಗಳಿವೆ. ಕೋಲಾರದಲ್ಲಿ 3,232 ಕೆರೆಗಳಿವೆ. ಹಾವೇರಿಯಲ್ಲಿ 2,058 ಕೆರೆಗಳಿವೆ. ತುಮಕೂರಿನಲ್ಲಿ 2,047 ಕೆರೆಗಳಿವೆ. ಮೈಸೂರಲ್ಲಿ 2,991 ಕೆರೆಗಳು ಇವೆ. ರಾಮನಗರದಲ್ಲಿ 1,475 ಕೆರೆಗಳು ಇವೆ. ಚಿಕ್ಕಬಳ್ಳಾಪುರದಲ್ಲಿ 1,533 ಕೆರೆಗಳು ಇವೆ.
ಉತ್ತರ ಕನ್ನಡದಲ್ಲಿ 2,118 ಕೆರೆಗಳಿದ್ದರೆ, ಬೆಳಗಾವಿಯಲ್ಲಿ 1,132 ಇವೆ. ಧಾರವಾಡದಲ್ಲಿ 1,323 ಕೆರೆಗಳಿವೆ. ಚಿಕ್ಕಮಗಳೂರಲ್ಲಿ 1,810 ಕೆರೆಗಳಿದ್ದರೆ, ಕೊಡಗಿನಲ್ಲಿ 1,127 ಇವೆ. ಉಡುಪಿಯಲ್ಲಿ ಒಟ್ಟು ಸುಮಾರು 2,030 ಕೆರೆಗಳು ಇವೆ. ಬೆಂಗಳೂರು ನಗರದಲ್ಲಿ 837 ಕೆರೆಗಳು ಇವೆ. ಬೆಂಗಳೂರು ಗ್ರಾಮಾಂತರದಲ್ಲಿ 710 ಕೆರೆಗಳಿವೆ. ದ.ಕನ್ನಡದಲ್ಲಿ 633 ಕೆರೆಗಳಿವೆ. ಮಂಡ್ಯದಲ್ಲಿ 962 ಕೆರೆಗಳಿವೆ. ದಾವಣಗೆರೆಯಲ್ಲಿ 533 ಕೆರೆಗಳಿವೆ. ಚಾಮರಾಜನಗರದಲ್ಲಿ 606 ಕೆರೆಗಳಿವೆ.

ಒಟ್ಟು 41,849 ಕೆರೆಗಳ ಪೈಕಿ ಮೇ ತಿಂಗಳ ವರೆಗೆ ಸುಮಾರು 34,389 ಕೆರೆಗಳ ಅಳತೆ ಮಾಡಲಾಗಿದೆ. ಪ್ರಮುಖವಾಗಿ ಹಾಸನದಲ್ಲಿ 3,925 ಕೆರೆಗಳನ್ನು ಅಳತೆ ಮಾಡಲಾಗಿದೆ. ಶಿವಮೊಗ್ಗದಲ್ಲಿ 3,647 ಕೆರೆಗಳ ಅಳತೆ ಮಾಡಲಾಗಿದೆ. ಕೋಲಾರದಲ್ಲಿ 1,666 ಕೆರೆಗಳ ಅಳತೆ ಮಾಡಲಾಗಿದೆ. ಹಾವೇರಿಯಲ್ಲಿ 1,341 ಕೆರೆಗಳನ್ನು ಅಳತೆ ಮಾಡಲಾಗಿದೆ. ತುಮಕೂರಿನಲ್ಲಿ 2,047 ಕೆರೆಗಳು, ಮೈಸೂರಲ್ಲಿ 2,639 ಕೆರೆಗಳನ್ನು ಅಳತೆ ಮಾಡಲಾಗಿದೆ.
ರಾಮನಗರದಲ್ಲಿ 1,430 ಕೆರೆಗಳನ್ನು ಅಳತೆ ಮಾಡಲಾಗಿದೆ. ಉತ್ತರ ಕನ್ನಡದಲ್ಲಿ 2,118 ಕೆರೆಗಳು, ಬೆಳಗಾವಿಯಲ್ಲಿ 1,132, ಧಾರವಾಡದಲ್ಲಿ 1,248, ಚಿಕ್ಕಮಗಳೂರಲ್ಲಿ 1,806 ಕೆರೆಗಳನ್ನು ಅಳತೆ ಮಾಡಲಾಗಿದೆ. ಕೊಡಗಿನಲ್ಲಿ 1,127, ಉಡಪಿಯಲ್ಲಿ ಎಲ್ಲಾ 2030 ಕೆರೆಗಳನ್ನು ಅಳತೆ ಮಾಡಲಾಗಿದೆ. ಮಂಡ್ಯದಲ್ಲಿ ಎಲ್ಲಾ 962, ಚಿಕ್ಕಬಳ್ಳಾಪುರದಲ್ಲಿ 916 ಕೆರೆಗಳು, ಚಾಮರಾಜನಗರದಲ್ಲಿ 606, ದಾವಣಗೆರೆಯಲ್ಲಿ 533, ಬೆಂಗಳೂರು ನಗರದಲ್ಲಿ ಎಲ್ಲಾ 817, ಬೆಂಗಳೂರು ಗ್ರಾಮಾಂತರದಲ್ಲಿ 710, ದಕ್ಷಿಣ ಕನ್ನಡದಲ್ಲಿ 633 ಕೆರೆಗಳನ್ನು ಗುರುತಿಸಲಾಗಿದೆ.
ಗುರುತಿಸಲಾದ ಒತ್ತುವರಿ ಕೆರೆಗಳ ಸಂಖ್ಯೆ 14,533: ಕಂದಾಯ ಇಲಾಖೆ ನೀಡಿದ ಅಂಕಿಅಂಶದ ಪ್ರಕಾರ ಅಳತೆ ಮಾಡಲಾದ 34,389 ಕೆರೆಗಳ ಪೈಕಿ ಈವರೆಗೆ 14,533 ಕೆರೆಗಳು ಒತ್ತುವರಿಯಾಗಿರುವುದು ಪತ್ತೆಯಾಗಿವೆ. ಹಾಸನದಲ್ಲಿ ಅಳತೆಯಾದ 3,924 ಕೆರೆಗಳ ಪೈಕಿ 1,629 ಕೆರೆಗಳ ಒತ್ತುವರಿ ಗುರುತಿಸಲಾಗಿದೆ. ಶಿವಮೊಗ್ಗದಲ್ಲಿ ಅಳತೆ ಮಾಡಿದ 3,647 ಕೆರೆಗಳ ಪೈಕಿ 1,537 ಕೆರೆಗಳ ಒತ್ತುವರಿ ಗುರುತಿಸಲಾಗಿದೆ. ಕೋಲಾರದಲ್ಲಿ ಅಳತೆಗೈದ 1,666 ಅಳತೆ ಮಾಡಿದ ಕೆರೆಗಳ ಪೈಕಿ 2,481 ಒತ್ತುವರಿಯಾಗಿದೆ. ತುಮಕೂರಿನಲ್ಲಿ 2,047 ಅಳತೆಗೈದ ಕೆರೆಗಳ ಪೈಕಿ 1,010 ಕೆರೆಗಳು ಒತ್ತುವರಿಯಾಗಿವೆ.
ಮೈಸೂರಲ್ಲಿ 2,639 ಅಳತೆಗೈದ ಕೆರೆಗಳ ಪೈಕಿ 1,346 ಕೆರೆಗಳು ಒತ್ತುವರಿಯಾಗಿವೆ. ರಾಮನಗರದಲ್ಲಿ ಅಳತೆಗೈದ 1,430 ಕೆರೆಗಳ ಪೈಕಿ 811 ಒತ್ತುವರಿಯಾಗಿವೆ. ಚಿಕ್ಕಬಳ್ಳಾಪುರದಲ್ಲಿ ಅಳತೆಗೈದ 916 ಕೆರೆಗಳ ಪೈಕಿ 415 ಒತ್ತುವರಿಯಾಗಿವೆ. ಮಂಡ್ಯದಲ್ಲಿ ಅಳತೆಗೈದ 962 ಕೆರೆಗಳ ಪೈಕಿ 448 ಒತ್ತುವರಿಯಾಗಿವೆ. ಉತ್ತರ ಕನ್ನಡದಲ್ಲಿ 2,118 ಅಳತೆಗೈದ ಕೆರೆಗಳ ಪೈಕಿ 454 ಒತ್ತುವರಿಯಾಗಿವೆ. ಬೆಳಗಾವಿಯಲ್ಲಿ ಅಳತೆಗೈದ 1,132 ಕೆರೆಗಳ ಪೈಕಿ 134 ಒತ್ತುವರಿಯಾಗಿವೆ. ಚಿಕ್ಕಮಗಳೂರಲ್ಲಿ ಅಳತೆಗೈದ 1,806 ಕೆರೆಗಳ ಪೈಕಿ 848 ಕೆರೆಗಳು ಒತ್ತುವರಿಯಾಗಿವೆ. ಬೆಂಗಳೂರು ನಗರದಲ್ಲಿ ಅಳತೆಗೈದ 837 ಕೆರೆಗಳ ಪೈಕಿ 733 ಕೆರೆಗಳು ಒತ್ತುವರಿಯಾಗಿವೆ. ಬೆಂಗಳೂರು ಗ್ರಾ.ದಲ್ಲಿ ಅಳತೆಗೈದ 710 ಕೆರೆಗಳ ಪೈಕಿ 643 ಒತ್ತುವರಿಯಾಗಿವೆ.

ಬೀದರ್ನಲ್ಲಿ 31 ಕೆರೆಗಳು, ರಾಯಚೂರಲ್ಲಿ 46, ಧಾರವಾಡದಲ್ಲಿ 156 ಕೆರೆಗಳು ಒತ್ತುವರಿಯಾಗಿವೆ. ಚಿತ್ರದುರ್ಗದಲ್ಲಿ 50 ಕೆರೆಗಳು, ಗದಗದಲ್ಲಿ 97, ದ.ಕನ್ನಡದಲ್ಲಿ 97, ಕಲಬುರ್ಗಿಯಲ್ಲಿ 6, ದಾವಣಗೆರೆಯಲ್ಲಿ 283, ಚಾಮರಾಜನಗರದಲ್ಲಿ 281, ಕೊಡಗಿನಲ್ಲಿ 288, ವಿಜಯನಗರದಲ್ಲಿ 105, ಯಾದಗಿರಿಯಲ್ಲಿ 6, ಬಾಗಲಕೋಟೆಯಲ್ಲಿ 70, ಬಳ್ಳಾರಿಯಲ್ಲಿ 43, ಕೊಪ್ಪಳದಲ್ಲಿ 26, ಉಡುಪಿಯಲ್ಲಿ 59, ವಿಜಯಪುರದಲ್ಲಿ 85 ಕೆರೆಗಳ ಒತ್ತುವರಿ ಗುರುತು ಮಾಡಲಾಗಿದೆ.
ಒತ್ತುವರಿ ತೆರವು ಮಾಡಿದ ಕೆರೆಗಳ ಸಂಖ್ಯೆ ಕೇವಲ 6,808: ಮೇ ವರೆಗೆ ಗುರುತು ಮಾಡಲಾದ 14,533 ಒತ್ತುವರಿ ಕೆರೆಗಳ ಪೈಕಿ ಒತ್ತುವರಿ ತೆರವು ಮಾಡಿದ್ದು ಕೇವಲ 6,808 ಮಾತ್ರ. ಅಂದರೆ ಈವರೆಗೆ ಗುರುತಿಸಲಾದ ಒತ್ತುವರಿ ಕೆರೆಗಳ ಪೈಕಿ ಕೇವಲ 47% ಮಾತ್ರ ಕಬಳಿಕೆಯನ್ನು ತೆರವು ಮಾಡಲಾಗಿದೆ. ಕಂದಾಯ ಇಲಾಖೆ ನೀಡಿದ ಅಂಕಿಅಂಶದ ಪ್ರಕಾರ ಹಾಸನದಲ್ಲಿ 524 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ. ಶಿವಮೊಗ್ಗದಲ್ಲಿ 641 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ. ಕೋಲಾರದಲ್ಲಿ 706 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ. ಹಾವೇರಿಯಲ್ಲಿ 174 ಕೆರೆಗಳ ತೆರವುಗೊಳಿಸಲಾಗಿದೆ. ತುಮಕೂರಿನಲ್ಲಿ 131 ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ.
ಮೈಸೂರಲ್ಲಿ 818 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ. ರಾಮನಗರದಲ್ಲಿ 58 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ. ಚಿಕ್ಕಬಳ್ಳಾಪುರದಲ್ಲಿ 287, ಮಂಡ್ಯದಲ್ಲಿ 245, ಉತ್ತರ ಕನ್ನಡದಲ್ಲಿ 365, ಬೆಳಗಾವಿಯಲ್ಲಿ 47 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ. ಬೀದರ್ ನಲ್ಲಿ 28, ರಾಯಚೂರಿನಲ್ಲಿ 2, ಧಾರವಾಡದಲ್ಲಿ 124, ಚಿಕ್ಕಮಗಳೂರಲ್ಲಿ 373, ಚಿತ್ರದುರ್ಗದಲ್ಲಿ 48, ಗದಗದಲ್ಲಿ 22, ದಕ್ಷಿಣ ಕನ್ನಡದಲ್ಲಿ 68, ಕಲಬುರ್ಗಿಯಲ್ಲಿ 0, ದಾವಣಗೆರೆಯಲ್ಲಿ 240, ಚಾಮರಾಜನಗರದಲ್ಲಿ 235, ಕೊಡಗಿನಲ್ಲಿ 233, ವಿಜಯನಗರದಲ್ಲಿ 102 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ. ಇನ್ನು ಯಾದಗಿರಿಯಲ್ಲಿ 4, ಬಾಗಲಕೋಟೆಯಲ್ಲಿ 32, ಬಳ್ಳಾರಿಯಲ್ಲಿ 38, ಬೆಂಗಳೂರು ಗ್ರಾಮಾಂತರದಲ್ಲಿ 642, ಬೆಂಗಳೂರು ನಗರದಲ್ಲಿ 484, ಕೊಪ್ಪಳದಲ್ಲಿ 14, ಉಡುಪಿಯಲ್ಲಿ 55, ವಿಜಯಪುರದಲ್ಲಿ 68 ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ. ಪ್ರತಿ ಬಾರಿ ಒತ್ತುವರಿ ತೆರವು ತ್ವರಿತ ಗೊಳಿಸಲು ಸೂಚನೆ ನೀಡಿದರೂ ಅಧಿಕಾರಿಗಳು ವಿಳಂಬ ಧೋರಣೆ ತೋರುತ್ತಿರುವುದು ಕಂಡು ಬರುತ್ತಿದೆ.
30% ಗಿಂತ ಕಡಿಮೆ ನೀರು ತುಂಬಿರುವ ಕೆರೆಗಳು 16,660: ಸಣ್ಣ ನೀರಾವರಿ ವ್ಯಾಪ್ತಿಯಲ್ಲಿನ ಒಟ್ಟು 41,849 ಕೆರೆಗಳ ಪೈಕಿ 16,660 ಕೆರೆಗಳಲ್ಲಿ 30% ಗಿಂತಲೂ ಕಡಿಮೆ ನೀರು ತುಂಬಿಕೊಂಡಿದೆ ಎಂದು ಸಣ್ಣ ನೀರಾವರಿ ಇಲಾಖೆ ಮಾಹಿತಿ ನೀಡಿದೆ. ಅದರಂತೆ ಹಾಸನದಲ್ಲಿ 2,909 ಕೆರೆಗಳು, ಶಿವಮೊಗ್ಗದಲ್ಲಿ 1,502, ಕೋಲಾರದಲ್ಲಿ 1546, ಹಾವೇರಿಯಲ್ಲಿ 612, ತುಮಕೂರಿನಲ್ಲಿ 974, ಮೈಸೂರಲ್ಲಿ 934, ರಾಮನಗರದಲ್ಲಿ 629, ಚಿಕ್ಕಬಳ್ಳಾಪುರದಲ್ಲಿ 1,420 ಕೆರೆಗಳಲ್ಲಿ 30%ಗಿಂತಲೂ ಕಡಿಮೆ ನೀರು ತುಂಬಿವೆ.
ಇತ್ತ ಬೆಂಗಳೂರು ಗ್ರಾಮಾಂತರದಲ್ಲಿ 301 ಕೆರೆಗಳು, ಬೆಂಗಳೂರು ನಗರದಲ್ಲಿ 298, ಮಂಡ್ಯದಲ್ಲಿ 275, ಉತ್ತರ ಕನ್ನಡದಲ್ಲಿ 1,524, ಬೆಳಗಾವಿಯಲ್ಲಿ 393, ಬೀದರ್ ನಲ್ಲಿ 150, ರಾಯಚೂರಿನಲ್ಲಿ 175, ಧಾರವಾಡದಲ್ಲಿ 479, ಚಿಕ್ಕಮಗಳೂರಲ್ಲಿ 156, ಚಿತ್ರದುರ್ಗದಲ್ಲಿ 162, ಗದಗದಲ್ಲಿ 103, ದಕ್ಷಿಣ ಕನ್ನಡದಲ್ಲಿ 161, ಕಲಬುರ್ಗಿಯಲ್ಲಿ 82 ಕೆರೆಗಳಲ್ಲಿ 30% ಕ್ಕೂ ಕಡಿಮೆ ನೀರು ತುಂಬಿವೆ.
ದಾವಣಗೆರೆಯಲ್ಲಿ 104, ಚಾಮರಾಜನಗರದಲ್ಲಿ 467, ಕೊಡಗು 481, ವಿಜಯನಗರದಲ್ಲಿ 127, ಯಾದಗಿರಿಯಲ್ಲಿ 132, ಬಾಗಲಕೋಟೆಯಲ್ಲಿ 132, ಬಳ್ಳಾರಿಯಲ್ಲಿ 29, ಕೊಪ್ಪಳದಲ್ಲಿ 67, ಉಡುಪಿಯಲ್ಲಿ 220 ಮತ್ತು ವಿಜಯಪುರದಲ್ಲಿ 116 ಕೆರೆಗಳಲ್ಲಿ 30%ಕ್ಕಿಂತ ಕಡಿಮೆ ನೀರು ತುಂಬಿರುವುದಾಗಿ ಇಲಾಖೆ ಮಾಹಿತಿ ನೀಡಿದೆ.
ಕೆರೆ ಒತ್ತುವರಿ ತೆರವು ವಿಳಂಬಕ್ಕೆ ಸಿಎಂ ಗರಂ: ಕೆರೆಗಳ ಒತ್ತುವರಿ ತೆರವು ಕಾರ್ಯದಲ್ಲಿ ನಿರೀಕ್ಷಿತ ಪ್ರಗತಿ ಕಾಣದೇ ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ತಿಂಗಳು ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅದರಲ್ಲೂ ಒಂದೂ ಕೆರೆ ಒತ್ತುವರಿ ತೆರವುಗೊಳಿಸಿದ ಜಿಲ್ಲಾಧಿಕಾರಿ, ಸಿಇಒಗಳ ವಿರುದ್ಧ ಸೂಕ್ತ ಕ್ರಮಕ್ಕೆ ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿದ್ದಾರೆ.
ಎಲ್ಲಾ ಕೆರೆಗಳ ಸಮೀಕ್ಷೆ ನಡೆಸಿ ಒತ್ತುವರಿ ತೆರವುಗೊಳಿಸಲು ಕಳೆದ ಸಭೆಯಲ್ಲಿ ತಿಳಿಸಿದ್ದರೂ ನಿರೀಕ್ಷಿತ ಪ್ರಗತಿಯಾಗಿಲ್ಲ. ಕೂಡಲೇ ಇದರ ಬಗ್ಗೆ ಗಮನಹರಿಸಿ, ಎಲ್ಲಾ ಕೆರೆಗಳ ಸಮೀಕ್ಷೆ ನಡೆಸಿ, ಒತ್ತುವರಿ ತೆರವುಗೊಳಿಸಿ, ಮಳೆ ನೀರು ಸರಾಗವಾಗಿ ಕೆರೆಗೆ ಹರಿದು ಬರುವಂತೆ ವ್ಯವಸ್ಥೆ ಮಾಡಬೇಕು. ಕೆರೆಗಳ ಒತ್ತುವರಿ ವಿಷಯದಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಬೆಳಗಾವಿಯಲ್ಲೇ ಅತೀ ಹೆಚ್ಚು ಇ ಖಾತಾ ಅರ್ಜಿ; ಎ, ಬಿ ಖಾತಾ ಎಂದರೇನು? ಏನೆಲ್ಲಾ ದಾಖಲೆಗಳು ಬೇಕು?