ಬೆಂಗಳೂರು: ಆರ್‌ಸಿಬಿ ತಂಡದ ಸಂಭ್ರಮಾಚರಣೆ ವೇಳೆ ಎಂ.ಚಿನ್ನಸ್ವಾಮಿ ಮೈದಾನದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ ಪ್ರಕರಣದ ನೈತಿಕ ಹೊಣೆ ಹೊತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಎ.ಶಂಕರ್ ಮತ್ತು ಖಜಾಂಚಿ ಇ.ಎಸ್.ಜೈರಾಮ್ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
ತಮ್ಮ ಪಾತ್ರ ಸೀಮಿತವಾಗಿದ್ದರೂ ಸಹ ನೈತಿಕ ಜವಾಬ್ದಾರಿ ಹೊತ್ತು ರಾಜಿನಾಮೆ ನೀಡುತ್ತಿರುವುದಾಗಿ ಇಬ್ಬರೂ ಸಹ ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ಅವರಿಗೆ ಪತ್ರ ರವಾನಿಸಿದ್ದಾರೆ.

ಕಳೆದ 2 ದಿನಗಳ ಹಿಂದೆ ನಡೆದ ಅನಿರೀಕ್ಷಿತ ಮತ್ತು ದುರದೃಷ್ಟಕರ ಘಟನೆಯಲ್ಲಿ ನಮ್ಮ ಪಾತ್ರವು ಬಹಳ ಸೀಮಿತವಾಗಿದ್ದರೂ ಸಹ ನೈತಿಕ ಜವಾಬ್ದಾರಿಯಿಂದ ಜೂನ್ 6ರಂದು ರಾತ್ರಿಯಿಂದಲೇ ತಾವು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದೇವೆ ಎಂದು ಎ.ಶಂಕರ್ ಮತ್ತು ಖಜಾಂಚಿ ಇ.ಎಸ್.ಜೈರಾಮ್ ಅವರು ಪತ್ರದಲ್ಲಿ ವಿವರಿಸಿದ್ದಾರೆ.
ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಆರ್‌ಸಿಬಿ ಆಡಳಿತ ಮಂಡಳಿ, ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ವಿರುದ್ಧವೂ ಎಫ್ಐಆರ್ ದಾಖಲಾಗಿದೆ.
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಮ್ಯಾಜಿಸ್ಟ್ರೇಟ್ ಹಾಗೂ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಏಕಸದಸ್ಯ ಆಯೋಗದ ನೇತೃತ್ವದಲ್ಲಿ ನಡೆಸಲಾಗುತ್ತಿದೆ. ಜೊತೆಗೆ, ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದ್ದು, ತನಿಖೆ ಮುಂದುವರೆದಿದೆ.
ಈಗಾಗಲೇ ಸರ್ಕಾರವು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಸೇರಿದಂತೆ ಐವರು ಅಧಿಕಾರಿಗಳನ್ನು ಅಮಾನತು ಮಾಡಿದೆ. ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿಯನ್ನು ಕರ್ತವ್ಯದಿಂದ ತೆಗೆದುಹಾಕಲಾಗಿದೆ. ಗುಪ್ತಚರ ಇಲಾಖೆ ವೈಫಲ್ಯ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಎಡಿಜಿಪಿಯಾಗಿದ್ದ ಹೇಮಂತ್ ನಿಂಬಾಳ್ಕರ್ ಅವರನ್ನೂ ಎತ್ತಂಗಡಿ ಮಾಡಲಾಗಿದೆ.
ಪ್ರಕರಣ ಸಂಬಂಧ ಪೊಲೀಸರು ಆರ್‌ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸ್ಲೆ ಮತ್ತು ಡಿಎನ್‌ಎ ನಿರ್ವಹಣಾ ಪ್ರತಿನಿಧಿಗಳಾದ ಸುನಿಲ್ ಮ್ಯಾಥ್ಯೂ, ಕಿರಣ್ ಮತ್ತು ಸುಮಂತ್ ಅವರನ್ನು ಬಂಧಿಸಿದ್ದಾರೆ. ಅವರನ್ನು ಜೂನ್ 19ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮತ್ತೊಂದೆಡೆ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದು, ಆಡಳಿತ ಸಮಿತಿ ಸದಸ್ಯರ ವಿರುದ್ಧ ಮುಂದಿನ ವಿಚಾರಣೆವರೆಗೂ ಆತುರದ ಕ್ರಮ ಬೇಡ ಎಂದು ನ್ಯಾಯಾಲಯವು ಸೂಚನೆ ನೀಡಿದೆ.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ ಪ್ರಕರಣ: ವಿರಾಟ್ ಕೊಹ್ಲಿ ವಿರುದ್ಧ ಪೊಲೀಸರಿಗೆ ದೂರು