ಬೆಂಗಳೂರು: ಸಂಭ್ರಮಾಚರಣೆ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಿಂದ ಆರ್‌ಸಿಬಿ ಅಭಿಮಾನಿಗಳು ಸಾವನ್ನಪ್ಪಿದ ಪ್ರಕರಣದಲ್ಲಿ ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದ್ದೇವೆ ಎಂದು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ಸಿಎ) ಅಧ್ಯಕ್ಷ ರಘುರಾಮ್ ಭಟ್ ತಿಳಿಸಿದ್ದಾರೆ.
ಪದಾಧಿಕಾರಿಗಳು, ಸದಸ್ಯರೊಂದಿಗೆ ಇಂದು ಸಂಜೆ ಸಭೆ ನಡೆಸಿದ ಬಳಿಕ ರಘುರಾಮ್ ಭಟ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಕೆಎಸ್ಸಿಎ ಕಾರ್ಯದರ್ಶಿ ಹಾಗೂ ಖಜಾಂಚಿ ಸಲ್ಲಿಸಿರುವ ರಾಜೀನಾಮೆಯನ್ನ ಅಂಗೀಕರಿಸುವುದರ ಕುರಿತು ಇಂದು ಸಭೆ ನಡೆಸಿದೆವು. ರಾಜೀನಾಮೆಗಳು ಅಂಗೀಕೃತವಾಗಿವೆ. ಆಗಿರುವ ಅವಘಡದ ಕುರಿತು ಹೆಚ್ಚು ಮಾತನಾಡುವುದು ಕಷ್ಟ, ಆದರೆ, ಸಿಐಡಿ ತನಿಖೆಗೆ ಸಂಪೂರ್ಣ ಸಹಕಾರವನ್ನ ಕೆಎಸ್ಸಿಎ ನೀಡಲಿದೆ ಎಂದು ಕೆಎಸ್ಸಿಎ ಅಧ್ಯಕ್ಷ ರಘುರಾಮ್ ಭಟ್ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಆರ್‌ಸಿಬಿ ತಂಡ ಈ ಬಾರಿ ಐಪಿಎಲ್ ಕಪ್ ಗೆದ್ದ ಹಿನ್ನೆಲೆಯಲ್ಲಿ ವಿಜಯೋತ್ಸವ ಆಯೋಜನೆ ಸಂಬಂಧ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಲಕ್ಷಾಂತರ ಅಭಿಮಾನಿಗಳು ಆಗಮಿಸಿದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಸಾವನ್ನಪ್ಪಿ, 56 ಜನ ಗಾಯಗೊಂಡಿದ್ದಾರೆ. ಈ ದುರಂತವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ನಗರ ಪೊಲೀಸ್ ಆಯುಕ್ತ ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.
ಹಾಗೆಯೇ ಈ ಸಂಬಂಧ ಎಫ್ಐಆರ್ಗಳು ದಾಖಲಾಗಿದ್ದು, ಆರ್‌ಸಿಬಿ ಹಾಗೂ ಡಿಎನ್ಎ ಸಂಸ್ಥೆಯ ನಾಲ್ವರನ್ನು ಜೂನ್ 19ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ನಗರದ 41ನೇ ಎಸಿಜೆಎಂ ನ್ಯಾಯಾಲಯಕ್ಕೆ ಬಂಧಿತ ಆರೋಪಿಗಳಾದ ಆರ್‌ಸಿಬಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ, ಸಿಬ್ಬಂದಿ ಸುಮಂತ್, ಡಿಎನ್ಎ ಸಂಸ್ಥೆಯ ಕಿರಣ್, ಸುನೀಲ್ ಮ್ಯಾಥ್ಯೂ ಅವರನ್ನ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಜೂನ್ 19ರವರೆಗೆ ನ್ಯಾಯಾಂಗ ಬಂಧನಕ್ಕೆ ವಿಧಿಸಿ ಶುಕ್ರವಾರ ಆದೇಶ ಹೊರಡಿಸಿದೆ.
ಕೆಎಸ್ಸಿಎಗೆ ರಿಲೀಫ್: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಪ್ರಕರಣ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ (ಕೆಎಸ್ಸಿಎ)ಯ ಆಡಳಿತ ಸಮಿತಿ ಸದಸ್ಯರ ವಿರುದ್ಧ ಮುಂದಿನ ವಿಚಾರಣೆವರೆಗೂ ಆತುರದ ಕ್ರಮ ಬೇಡ ಎಂದು ಹೈಕೋರ್ಟ್ ಶುಕ್ರವಾರ ಸೂಚನೆ ನೀಡಿದೆ.
ಸಮಿತಿಯ ಅಧ್ಯಕ್ಷರಾದ ರಘುರಾಮ್ ಭಟ್, ಕಾರ್ಯದರ್ಶಿ ಎ.ಶಂಕರ್, ಖಜಾಂಚಿ ಇ.ಎಸ್.ಜಯರಾಮ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿ ನ್ಯಾಯಮೂರ್ತಿ ಕೃಷ್ಣ ಕುಮಾರ್ ಅವರ ಪೀಠ ಶುಕ್ರವಾರ ಈ ಸೂಚನೆ ನೀಡಿದೆ. ಅಲ್ಲದೆ, ಅರ್ಜಿದಾರರು ತನಿಖೆಗೆ ಸಹಕರಿಸಬೇಕು. ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೋಗಬಾರದು ಎಂಬುದಾಗಿ ತಿಳಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಮುಂದಿನ ಆದೇಶದವರೆಗೂ ಆತುರದ ಕ್ರಮಕ್ಕೆ ಮುಂದಾಗಬಾರದು ಎಂದು ನ್ಯಾಯಪೀಠ ಆದೇಶಿಸಿ, ಜೂನ್ 16ಕ್ಕೆ ವಿಚಾರಣೆ ಮುಂದೂಡಿದೆ.
ಇದನ್ನೂ ಓದಿ: 'ಇದೆಲ್ಲ ನೋಡಿಕೊಂಡು ಮೌನವಾಗಿರಲು ಸಾಧ್ಯವಿಲ್ಲ'; ಕಾಲ್ತುಳಿತ ಘಟನೆಗೆ ಬಿಸಿಸಿಐ ಸೀರಿಯಸ್
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ ಪ್ರಕರಣ! KSCA ಕಾರ್ಯದರ್ಶಿ, ಖಜಾಂಚಿ ರಾಜೀನಾಮೆ!