ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಪ್ರಕರಣ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ (ಕೆಎಸ್ಸಿಎ)ಯ ಆಡಳಿತ ಸಮಿತಿ ಸದಸ್ಯರ ವಿರುದ್ಧ ಮುಂದಿನ ವಿಚಾರಣೆವರೆಗೂ ಆತುರದ ಕ್ರಮ ಬೇಡ ಎಂದು ಹೈಕೋರ್ಟ್ ಸೂಚನೆ ನೀಡಿದೆ.
ಸಮಿತಿಯ ಅಧ್ಯಕ್ಷರಾದ ರಘುರಾಮ್ ಭಟ್, ಕಾರ್ಯದರ್ಶಿ ಎ.ಶಂಕರ್, ಖಜಾಂಚಿ ಇ.ಎಸ್.ಜಯರಾಮ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿ ನ್ಯಾಯಮೂರ್ತಿ ಕೃಷ್ಣ ಕುಮಾರ್ ಅವರ ಪೀಠ ಈ ಸೂಚನೆ ನೀಡಿದೆ. ಅಲ್ಲದೆ, ಅರ್ಜಿದಾರರು ತನಿಖೆಗೆ ಸಹಕರಿಸಬೇಕು. ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೋಗಬಾರದು ಎಂಬುದಾಗಿ ತಿಳಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಮುಂದಿನ ಆದೇಶದವರೆಗೂ ಆತುರದ ಕ್ರಮಕ್ಕೆ ಮುಂದಾಗಬಾರದು ಎಂದು ನ್ಯಾಯಪೀಠ ಆದೇಶಿಸಿ, ಜೂನ್ 16ಕ್ಕೆ ವಿಚಾರಣೆ ಮುಂದೂಡಿತು.
ಘಟನೆ ಸಂಬಂಧ ಸರ್ಕಾರ ನ್ಯಾಯಾಂಗ ತನಿಖೆ, ಜಿಲ್ಲಾ ಮ್ಯಾಜಿಸ್ಟ್ರೇಟ್ ತನಿಖೆ ನಡೆಸುತ್ತಿದೆ. ಜೊತೆಗೆ, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಹೈಕೋರ್ಟ್ ಸಹ ಸ್ವಯಂಪ್ರೇರಿತವಾಗಿ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ ಎಂಬ ಅರ್ಜಿದಾರರ ವಾದವನ್ನು ಪೀಠ ಆದೇಶದಲ್ಲಿ ತಿಳಿಸಿದೆ.
ಅರ್ಜಿಯಲ್ಲಿದ್ದ ಅಂಶಗಳೇನು?; ಎಫ್ಐಆರ್ ದಾಖಲಾಗುತ್ತಿದ್ದಂತೆ ಕೆಎಸ್ಸಿಎ ಸಮಿತಿಯ ಅಧ್ಯಕ್ಷರಾದ ರಘುರಾಮ್ ಭಟ್, ಕಾರ್ಯದರ್ಶಿ ಎ.ಶಂಕರ್, ಖಜಾಂಚಿ ಇ.ಎಸ್.ಜಯರಾಮ್ ಅರ್ಜಿ ಸಲ್ಲಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಯುಡಿಆರ್ ದಾಖಲಿಸಿಕೊಳ್ಳಲಾಗಿದೆ. ಇದೀಗ ಅರ್ಜಿದಾರರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಈ ಒಂದೇ ಪ್ರಕರಣ ಸಂಬಂಧ ಎರಡು ರೀತಿಯಲ್ಲಿ ತನಿಖೆ ನಡೆಸಲಾಗುತ್ತಿದ್ದು, ಕಾನೂನು ಬಾಹಿರವಾಗಲಿದೆ.
ಇದನ್ನೂ ಓದಿ: ಕಾಲ್ತುಳಿತ ದುರಂತ: ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿ ಐವರು ಅಧಿಕಾರಿಗಳು ಅಮಾನತು
ಪ್ರಕರಣ ಸಂಬಂಧ ಹೈಕೋರ್ಟ್ ಈಗಾಗಲೇ ಸ್ವಯಂಪ್ರೇರಿತವಾಗಿ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಈ ನಡುವೆ ಮತ್ತೊಂದು ಎಫ್ಐಆರ್ ದಾಖಲಿಸಿ ವಿಚಾರಣೆಗೊಳಪಡಿಸುವುದಕ್ಕೆ ಅವಕಾಶವಿಲ್ಲ. ಜೊತೆಗೆ, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವ ಸರ್ಕಾರದ ಕ್ರಮವು, ಅಧಿಕಾರಿಗಳ ವೈಫಲ್ಯವನ್ನು ತೋರಿಸುತ್ತದೆ. ಘಟನೆ ಆಕಸ್ಮಿಕ ಮತ್ತು ಉದ್ದೇಶಪೂರ್ವಕವಲ್ಲದ ಕೃತ್ಯವಾಗಿದೆ. ಆದರೂ ಅರ್ಜಿದಾರರನ್ನು ಆರೋಪಿಗಳನ್ನಾಗಿ ಮಾಡಿ ಎಫ್ಐಆರ್ ದಾಖಲಿಸಿರುವುದು ಕಾನೂನಿನ ದುರ್ಬಳಕೆಯಾಗಲಿದೆ.
ಆರ್ಸಿಬಿ ತಂಡದ ಆಟಗಾರರನ್ನು ಸನ್ಮಾನಿಸಿರುವ ಕಾರ್ಯಕ್ರಮ ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಸೇರಿದಂತೆ ಸರ್ಕಾರದ ಸಚಿವರು, ಅಧಿಕಾರಿಗಳು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಆಟಗಾರರು ವಿಧಾನಸೌಧದಿಂದ ಕ್ರೀಡಾಂಗಣಕ್ಕೆ ಹೋದ ಪರಿಣಾಮ ಏಕಾಏಕಿ ನೂಕು ನುಗ್ಗಲು ಉಂಟಾಗಿದೆ. ಜತೆಗೆ, ಕ್ರೀಡಾಂಗಣದ ದ್ವಾರಗಳನ್ನು ನಿರ್ವಹಣೆ ಮಾಡುವ ಜವಾಬ್ದಾರಿ ಆರ್ಸಿಬಿ ಪ್ರಾಂಚೈಸಿ ಮತ್ತು ಪೊಲೀಸ್ ಅಧಿಕಾರಿಗಳದ್ದಾಗಿತ್ತು. ಕೆಎಸ್ಸಿಯು ಚಿನ್ನಸ್ವಾಮಿ ಕ್ರೀಡಾಂಗಣವನ್ನು ಬಾಡಿಗೆಗೆ ಮಾತ್ರ ನೀಡುತ್ತದೆ. ಆದರೆ, ಪ್ರೇಕ್ಷಕರು ಹಾಗೂ ಅಭಿಮಾನಿಗಳನ್ನು ಯಾವುದೇ ರೀತಿಯಲ್ಲಿಯೂ ನಿಯಂತ್ರಿಸುವುದಿಲ್ಲ.
ಆದ್ದರಿಂದ ಅರ್ಜಿದಾರರೇ ಘಟನೆಗೆ ಕಾರಣ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ, ಪೊಲೀಸರು ಒತ್ತಡಕ್ಕೆ ಮಣಿದು ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಿದ್ದು, ಸಂಪೂರ್ಣವಾಗಿ ಕಾನೂನು ಬಾಹಿರವಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಘಟನೆ ಸಂಬಂಧ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಅರ್ಜಿದಾರರನ್ನು ಬಂಧನ ಮಾಡಬೇಕು ಎಂಬ ಅಂಶ ತನಿಖಾಧಿಕಾರಿ ನಿರ್ಧರಿಸಬೇಕು. ಈ ರೀತಿಯ ಸೂಚನೆ ನೀಡುವುದಕ್ಕೆ ಮುಖ್ಯಮಂತ್ರಿಗಳಿಗೆ ಯಾವುದೇ ಅಧಿಕಾರವಿಲ್ಲ. ಆದರೂ ಮುಖ್ಯಮಂತ್ರಿಗಳು ಸೂಚನೆ ನೀಡಿರುವುದರಿಂದ ಅಧಿಕಾರಿಗಳು ಅದನ್ನು ಪಾಲಿಸಬೇಕಾಗುತ್ತದೆ. ಇದರಿಂದ ಸಮಾಜದಲ್ಲಿ ಘನತೆಯುಳ್ಳವರಾದ ಅರ್ಜಿದಾರರು ಅವಮಾನಕ್ಕೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ಎಫ್ಐಆರ್ ಮತ್ತು ಅದಕ್ಕೆ ಸಂಬಂಧಿಸಿದ ಮುಂದಿನ ವಿಚಾರಣಾ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು. ಹಾಗೂ ಎಫ್ಐಆರ್ ಕುರಿತ ವಿಚಾರಣೆಗೆ ತಡೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಕೆ.ಗೋವಿಂದರಾಜ್ಗೆ ಕೋಕ್
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ: ಸಿ.ಎ ಪರೀಕ್ಷೆ ಚಿನ್ನದ ಪದಕ ವಿಜೇತೆಯ ದುರಂತ ಅಂತ್ಯ; ಕುಟುಂಬದಲ್ಲಿ ಶೋಕಸಾಗರ