ಮೈಸೂರು: ಕೇಂದ್ರ ಸರ್ಕಾರ ದಲಿತ ನಾಯಕರನ್ನು ಟಾರ್ಗೆಟ್ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರ ಮೇಲೆ ಇ.ಡಿಯಿಂದ ದಾಳಿ ಮಾಡಿಸಿ ಹೆದರಿಸುವ ತಂತ್ರಗಾರಿಕೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ಕಾಂಗ್ರೆಸ್ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಇಂತಹ ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಯಲ್ಲಿ ಏನಾದರೂ ಭ್ರಷ್ಟಾಚಾರ ನಡೆದರೆ ಸಂಬಂಧಿಸಿದ ಶಿಕ್ಷಣ ಇಲಾಖೆ ಮೇಲೆ ತನಿಖೆ ನಡೆಸಬೇಕು. ಆದರೆ ಇ.ಡಿಗೆ ಈ ರೀತಿಯ ದಾಳಿ ಮಾಡಲು ಅಧಿಕಾರ ಇಲ್ಲ ಎಂದು ಹರಿಹಾಯ್ದರು.
ಡಾ.ಜಿ.ಪರಮೇಶ್ವರ್ ಅವರು ತಮ್ಮ ತಂದೆ ಕಾಲದಿಂದಲೂ ಶಿಕ್ಷಣ ಸಂಸ್ಥೆ ನಡೆಸುತ್ತಾ ಬಂದಿದ್ದಾರೆ. ಅವರು ಪ್ರಾಮಾಣಿಕವಾಗಿಯೇ ರಾಜಕೀಯ ಹಾಗೂ ವ್ಯವಹಾರವನ್ನು ಮಾಡಿಕೊಂಡು ಬಂದವರು. ಇನ್ನೂ ಏಳೆಂಟು ದಲಿತ ಮುಖಂಡರ ಪಟ್ಟಿ ಮಾಡಿದ್ದು, ಇವರನ್ನೂ ಟಾರ್ಗೆಟ್ ಮಾಡಿ ದಾಳಿ ಮಾಡುವ ಸಾಧ್ಯತೆ ಇದೆ. ಜಾತಿ ಗಣತಿ ವರದಿ ಬಂದರೆ ದಲಿತರು ತಮ್ಮ ಪರವಾಗಿ ಇರುವುದಿಲ್ಲ ಎಂಬುದೇ ಇದಕ್ಕೆ ಕಾರಣವಾಗಿದೆ. ಆದರೆ, ನಾವೆಲ್ಲ ಪರಮೇಶ್ವರ್ ಪರ ಇದ್ದೇವೆ ಎಂದು ಸ್ಪಷ್ಟಪಡಿಸಿದರು.
ಇ.ಡಿ ದಾಳಿ ಮಾಡಿರುವ ಬಗ್ಗೆ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಇದುವರೆಗೆ ಕೇಂದ್ರ ಸರ್ಕಾರ 28,878 ಇ.ಡಿ ದಾಳಿ ಮಾಡಿದೆ. ಅದರಲ್ಲಿ ಕೇವಲ 992 ಪ್ರಕರಣಗಳಿಗೆ ಮಾತ್ರ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ. ಶಿಕ್ಷೆ ಆಗಿರುವುದು ಕೇವಲ 23 ಪ್ರಕರಣಗಳಲ್ಲಿ ಮಾತ್ರ. ಶೇಕಡಾ 98ರಷ್ಟು ವಿರೋಧ ಪಕ್ಷಗಳನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿರುವ ಭಾಷಣವನ್ನು ತಿರುಚಿ ತಪ್ಪಾಗಿ ಅರ್ಥೈಸಲಾಗಿದೆ. ಒಬ್ಬ ಸಕ್ರಿಯ ರಾಜಕಾರಣದಲ್ಲಿರುವ ಮುತ್ಸದ್ದಿ ರಾಜಕಾರಣಿಯನ್ನು ಇಲ್ಲಿನ ಮಾಜಿ ಸಂಸದ ಪ್ರತಾಪ್ ಸಿಂಹ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾನೆ. ಇವನಿಗೆ ದಲಿತ ಸಮುದಾಯದ ಜನ ತಕ್ಕ ಬುದ್ಧಿ ಕಲಿಸಬೇಕು ಎಂದರು.
ಜಮ್ಮು-ಕಾಶ್ಮೀರದ ಪಹಲ್ಗಾಮ್ ದಾಳಿ ವಿಷಯದಲ್ಲಿ ಜನರನ್ನು ಮೂರ್ಖರನ್ನಾಗಿ ಮಾಡಿದರು. ಅಂತಹ ವಿಚಾರಗಳನ್ನು ನಾವು ಪ್ರಶ್ನೆ ಮಾಡುವುದೇ ತಪ್ಪೇನು?. ಮಾಹಿತಿ ಕೇಳುವುದು, ಕದನ ವಿರಾಮ ಯಾವಾಗ, ಏಕೆ ಘೋಷಣೆ ಮಾಡಿದಿರಿ ಎಂದು ಕೇಳುವುದು ತಪ್ಪೇ?. ನಾವು ದೇಶ ದ್ರೋಹಿಗಳೇ?. ಕೊಂದವರು ಯಾರು ಎಂದು ಇನ್ನೂ ಕಂಡುಹಿಡಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರತಾಪ್ ಸಿಂಹ ಪಪ್ಪು ಎಂದು ಲೇವಡಿ ಮಾಡಿರುವುದಕ್ಕೆ ಪ್ರತಿಕ್ರಿಯಿಸಿ, ಬೀದಿಯಲ್ಲಿ ನಿಂತು ಪ್ರೆಸ್ ಮೀಟ್ ಮಾಡಿ ಹೋಗ್ತೀಯಲ್ಲಪ್ಪ ಪ್ರತಾಪ್ ಸಿಂಹ. ನಿನಗೆ ನಯಾ ಪೈಸೆ ಬೆಲೆ ಇಲ್ಲ. ಬಿಜೆಪಿ ಕಚೇರಿಗೂ ಸೇರಿಸಲ್ಲ. ನಾನು ಐದು ಬಾರಿ ಸೋತಿದ್ದರೂ ಕಾಂಗ್ರೆಸ್ ಕಚೇರಿಯಲ್ಲಿ ಕುಳಿತು ಪ್ರೆಸ್ ಮೀಟ್ ಮಾಡುತ್ತೇನೆ. ನನಗೆ ನಮ್ಮ ಪಕ್ಷದ ಮುಖಂಡರು ಬೆಲೆ ಕೊಡ್ತಾರೆ. ನಿನಗೆ ಬಿಜೆಪಿ ಕಚೇರಿಯಲ್ಲಿ ಕೂರಲು ಜಾಗ ಕೊಡಲ್ಲ. ನೀನು ಅಚಾನಕ್ಕಾಗಿ ಎರಡು ಬಾರಿ ಗೆದ್ದು ಬಂದಿದ್ದೀಯ. ನೀನು ನಮ್ಮ ನಾಯಕರ ಬಗ್ಗೆ ಹಗುರವಾಗಿ ಮಾತನಾಡುತ್ತೀಯ. ಅವರ ರಾಜಕೀಯ ಅನುಭವದಷ್ಟು ನಿನಗೆ ವಯಸ್ಸಾಗಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಕೆ.ಮಹೇಶ್ ಮತ್ತಿತರರು ಇದ್ದರು.
ಇದನ್ನೂ ಓದಿ: ಗೃಹ ಸಚಿವ ಜಿ.ಪರಮೇಶ್ವರ್ ಪ್ರಾಮಾಣಿಕರು, ಯಾವುದೇ ತಪ್ಪು ಮಾಡಿಲ್ಲ; ಡಿಸಿಎಂ ಡಿ ಕೆ ಶಿವಕುಮಾರ್ - DCM DK SHIVAKUMAR