ಕೊಪ್ಪಳ: ಕೊಪ್ಪಳ ಜಿಲ್ಲೆಯಾದ್ಯಂತ ಮಂಗಳವಾರ ಮಧ್ಯಾಹ್ನ ಸುರಿದ ಮಳೆಗೆ ಸಿಡಿಲು ಬಡಿದು ಇಬ್ಬರು ಬಲಿಯಾಗಿದ್ದಾರೆ. ಕನಕಗಿರಿ ತಾಲೂಕಿನ ಹುಲಿಹೈದರದಲ್ಲಿ ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ರೈತ ಯಂಕಪ್ಪ ಜಾಡಿ(45) ಮೃತಪಟ್ಟಿದ್ದಾನೆ. ರೈತನೊಂದಿಗೆ ಬೆಲೆಬಾಳುವ ಎತ್ತು ಸಹ ಸಾವಿಗೀಡಾಗಿದೆ. ಇನ್ನೊಂದೆಡೆ ಅದೇ ಸಮಯಕ್ಕೆ ಕಾರಟಗಿ ತಾಲೂಕಿನ ಮೈಲಾಪುರದ ರೈತ ಬಸನಗೌಡ(39) ಮೃತ ಪಟ್ಟಿದ್ದಾನೆ. ಮೃತನು ಭತ್ತವನ್ನು ಕಟಾವು ಮಾಡಿ ಒಣಗಿಸಲು ಹಾಕಿದ್ದ. ಮಳೆ ಬಂದಿದ್ದಕ್ಕೆ ಭತ್ತಕ್ಕೆ ತಾಡಪಾಲು ಹಾಕಲು ಹೋದಾಗ ಸಿಡಿಲಿಗೆ ಬಲಿಯಾಗಿದ್ದಾನೆ.
ಹುಲಿಹೈದರದಲ್ಲಿ ಸಾವಿಗೀಡಾದ ರೈತನ ಮನೆಗೆ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸ್ಥಳಿಯ ರಾಜಕೀಯ ಮುಖಂಡರು ಭೇಟಿ ನೀಡಿ. ಮೃತನ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.
ರಾಯಚೂರಿನಲ್ಲೂ ಸಿಡಿಲಿಗೆ ವ್ಯಕ್ತಿ ಬಲಿ: ಸಿಡಿಲು ಬಡಿದು ವ್ಯಕ್ತಿಯೋರ್ವ ಹಾಗೂ ಎತ್ತು ಸ್ಥಳದಲ್ಲಿ ಸ್ವಾನ್ನಪ್ಪಿರುವ ಘಟನೆ ರಾಯಚೂರಿನ ಹರ್ವಾಪುರ ಗ್ರಾಮದಲ್ಲಿ ಜರುಗಿದೆ. ಜಿಲ್ಲೆಯ ಮಸ್ಕಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಹರ್ವಾಪೂರ ಗ್ರಾಮದಲ್ಲಿ ಮಂಗಳವಾರ ಸಂಜೆ ಘಟನೆ ಜರುಗಿದ್ದು, ರೈತ ನಿಂಗಪ್ಪ ರಾಮಣ್ಣ(35) ಮೃತ ವ್ಯಕ್ತಿಯೆಂದು ಗುರುತಿಸಲಾಗಿದೆ ಜೊತೆಗೆ ಓರ್ವ ಎತ್ತು ಸಹ ಸ್ಥಳದಲ್ಲಿ ಮೃತಪಟ್ಟಿದ್ದು, ಮತ್ತೊಂದು ಎತ್ತು ಸ್ವಲ್ಪದರಲ್ಲೇ ಸಾವಿನ ದವಡೆಯಿಂದ ಪಾರಾಗಿದೆ.
ಸಂಜೆ ವೇಳೆ ಗುಡುಗು-ಮಿಂಚಿನೊಂದು ಬಿರುಗಾಳಿ ಸಹಿತ ಮಳೆ ಸುರಿದಿದೆ. ಎತ್ತುಗಳನ್ನು ಬಿಡಿಸಲು ಹೋಗಿದ್ದ ವೇಳೆ ಸಿಡಿಲು ಬಡಿದಿದ್ದು, ನಿಂಗಪ್ಪ ಜೊತೆಗೆ ಎತ್ತು ಸಹ ಸ್ಥಳದಲ್ಲೇ ಮೃತಪಟ್ಟಿದೆ. ಮೃತ ವ್ಯಕ್ತಿಯನ್ನು ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ: ರೌಡಿಶೀಟರ್ ಕಣುಮನ ಕೊಲೆ ಪ್ರಕರಣದಲ್ಲಿ 20 ಜನರ ಬಂಧನ: ಎಸ್ಪಿ ಉಮಾ ಪ್ರಶಾಂತ್