ವರದಿ : ಕಿರಣ್
ಶಿವಮೊಗ್ಗ : ಹಾಲಿನ ದರವನ್ನು ರಾಜ್ಯ ಸರ್ಕಾರ ಕೆಎಂಎಫ್ ಮೂಲಕ ಏರಿಕೆ ಮಾಡಿದೆ. ಇದು ರಾಜ್ಯದ ಆಯಾ ಹಾಲು ಉತ್ಪಾದಕ ಸಹಕಾರ ಮಂಡಳಿಗಳ ಮೂಲಕ ಜಾರಿ ಮಾಡಿದೆ. ಹಾಗಿದ್ರೆ ಜಿಲ್ಲೆಯ ಶಿಮೂಲ್ನಲ್ಲಿ ಹಾಲಿನ ದರ ಏರಿಕೆ ಆದ ಮೇಲೆ ಹಾಲಿನ ಬೇಡಿಕೆ ಹೇಗಿದೆ?. ಹೆಚ್ಚಾಗಿದೆಯೊ ಅಥವಾ ಕಡಿಮೆ ಆಗಿದೆಯೇ? ಎಂಬುದರ ಬಗೆಗಿನ ಮಾಹಿತಿ ಇಲ್ಲಿದೆ.
ಹಾಲು ಪ್ರತಿಯೊಬ್ಬ ಮನುಷ್ಯನ ಬಳಕೆಗೆ ಬೇಕೇ ಬೇಕು. ಹಾಲನ್ನ ಕಿರಿಯರಿಂದ ಹಿಡಿದು ಹಿರಿಯರ ತನಕ ಸೇವಿಸುತ್ತಾರೆ. ಇದು ದಿನನಿತ್ಯದ ಬಳಕೆಯ ವಸ್ತು. ಈ ಹಾಲಿನ ದರವನ್ನು ರಾಜ್ಯ ಸರ್ಕಾರ ಏರಿಕೆ ಮಾಡುತ್ತಲೇ ಇದೆ. ಗ್ರಾಹಕರು ಸಹಿಸಿಕೊಂಡು ತೆಗೆದುಕೊಳ್ಳುತ್ತಲೇ ಇದ್ದಾರೆ. ನಮ್ಮ ರಾಜ್ಯದ ಹಾಲಿನ ದರ ಇತರೆ ರಾಜ್ಯದ ಹಾಲಿನ ದರಕ್ಕಿಂತ ಕಡಿಮೆ ಇದೆ ಎನ್ನುತ್ತಲೇ ಏರಿಕೆ ಮಾಡಲಾಗುತ್ತಿದೆ.
ಶಿವಮೊಗ್ಗದ ಶಿಮೂಲ್ ಹಾಲು ಒಕ್ಕೂಟದಲ್ಲಿ ಪ್ರತಿ ತಿಂಗಳು 7 ಲಕ್ಷ ಲೀಟರ್ನಷ್ಟು ಹಾಲು ಉತ್ಪಾದನೆ ಆಗುತ್ತದೆ. ಆದರೆ ಮಾರಾಟವಾಗುವುದು ಶೇ. 50 ರಷ್ಟು ಮಾತ್ರ. ಉಳಿದ ಹಾಲಿನಲ್ಲಿ ನಂದಿನಿಯ ಇತರೆ ಉತ್ಪಾದನೆಗಳನ್ನು ಮಾಡಲಾಗುತ್ತದೆ. ಇದರಲ್ಲಿ ಸಿಂಹಪಾಲು ಹಾಲಿನ ಪುಡಿಗೆ ಬಳಕೆ ಆಗುತ್ತದೆ. ಆದರೆ ಹಾಲಿನ ಖರೀದಿಗೆ ಶಿಮೂಲ್ ಪೂರ್ಣ ಪ್ರಮಾಣದ ಹಣ ಪಾವತಿ ಮಾಡಿಕೊಂಡು ಬಂದಿದೆ.

ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 1332 ಹಾಲು ಉತ್ಪಾದಕ ಸಹಕಾರ ಸಂಘ ಇದೆ. ಇದರಲ್ಲಿ 1.72 ಲಕ್ಷ ಸದಸ್ಯ ರೈತರಿದ್ದಾರೆ. 84 ಸಾವಿರ ರೈತರು ಪ್ರತಿನಿತ್ಯ ಹಾಲನ್ನು ಪೂರೈಕೆ ಮಾಡುತ್ತಿದ್ದಾರೆ. 2024-25 ರಲ್ಲಿ ಒಕ್ಕೂಟದ ಸರಾಸರಿ 7.10 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಈಗ ಬೇಸಿಗೆ ಆಗಿರುವ ಕಾರಣಕ್ಕೆ 6.78 ಲಕ್ಷ ಲೀಟರ್ ಹಾಲು ಒಕ್ಕೂಟಕ್ಕೆ ಬರುತ್ತಿದೆ.

ಹಾಲಿನ ರೂಪದಲ್ಲಿ 2.78 ಲಕ್ಷ ಲೀಟರ್ ಮಾರಾಟವಾಗುತ್ತಿದೆ. ಅಲ್ಲದೆ ಪ್ರತಿನಿತ್ಯ 85 ಸಾವಿರ ಕೆ.ಜಿ ಮೊಸರು ಪ್ರತಿನಿತ್ಯ ಮಾರಾಟವಾಗುತ್ತಿದೆ. ಸುಮಾರು 8 ಸಾವಿರ ಲೀಟರ್ ಹಾಲನ್ನು ಇತರೆ ಉತ್ಪನ್ನಗಳಿಗೆ ಬಳಕೆ ಮಾಡಲಾಗುತ್ತಿದೆ. ಉಳಿದ 1.50 ಲಕ್ಷ ಲೀಟರ್ ಹಾಲು ಅಂತರ್ ಡೈರಿ ವಿಚಾರದಲ್ಲಿ 70 ಸಾವಿರ ಲೀಟರ್ ಹಾಲನ್ನು ದಕ್ಷಿಣ ಕನ್ನಡ ಹಾಲು ಡೈರಿಗೆ ರವಾನೆ ಮಾಡಲಾಗುತ್ತಿದೆ. ಧಾರವಾಡಕ್ಕೆ 70 ಸಾವಿರ ಲೀಟರ್ ಹಾಗೂ 75 ಲೀಟರ್ ಹಾಲನ್ನು ಕೆಎಂಎಫ್ನ ಮದರ್ ಡೈರಿಗೆ ರವಾನೆ ಮಾಡಲಾಗುತ್ತಿದೆ.

ಹೆಚ್ಚುವರಿ 1.35 ಲಕ್ಷ ಲೀಟರ್ ಹಾಲನ್ನು ಹಾಲಿನ ಪುಡಿ ಪರಿವರ್ತನೆಗೆ ರವಾನೆ ಮಾಡಲಾಗುತ್ತಿದೆ. ಕೆನೆಭರಿತ ಹಾಲಿನ ಪುಡಿಯನ್ನು ಸರ್ಕಾರಿ ಶಾಲೆಗಳಿಗೆ ಕ್ಷೀರ ಭಾಗ್ಯ ಯೋಜನೆಯಡಿ ರವಾನೆ ಮಾಡಲಾಗುತ್ತದೆ. 300 ಟನ್ ಹಾಲಿನ ಪುಡಿಯನ್ನು ರವಾನೆ ಮಾಡಲಾಗುತ್ತಿದೆ. ಉತ್ತರ ಕರ್ನಾಟಕದ ಹಾಲಿನ ಡೈರಿಗಳಿಗೆ ಪ್ರತಿನಿತ್ಯ 300 ಟನ್ ಹಾಲಿನಪುಡಿ ರವಾನೆ ಮಾಡಲಾಗುತ್ತದೆ. ಹಾಲಿನ ಮಾರಾಟ ದರ 4 ರೂ ಏರಿಕೆ ಮಾಡಲಾಗಿದೆ. ಅದರಂತೆ ಶಿಮೂಲ್ನಲ್ಲೂ ಸಹ ಪ್ರತಿ ಲೀಟರ್ ಹಾಲು ಹಾಗೂ ಮೊಸರಿನ ಮಾರಾಟಕ್ಕೆ 4 ರೂ ಏರಿಕೆ ಮಾಡಲಾಗಿದೆ. ಬೇಸಿಗೆ ಕಾಲವಾಗಿದ್ದು, ಹೈನುಗಾರಿಕೆ ಕಷ್ಟಕರವಾಗಿರುತ್ತದೆ. ಇದರಿಂದ ಹಾಲಿನ ಏರಿಕೆಯ ದರವನ್ನು ರೈತರಿಗೆ ನೀಡಲಾಗುತ್ತಿದೆ.
ಶಿಮೂಲ್ ವ್ಯವಸ್ಥಾಪಕ ನಿರ್ದೇಶಕರಾದ ಎಸ್. ಜೆ. ಶೇಖರ್ ಹೇಳಿದ್ದೇನು?: 'ಕಳೆದ ವರ್ಷ 7.10 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿತ್ತು. ಇದರಲ್ಲಿ ಹಾಲು, ಮೊಸರು ಸೇರಿ 3.50 ಲಕ್ಷ ಲೀಟರ್ ಮಾರಾಟವಾಗುತ್ತಿದೆ. ಉಳಿದ 3.60 ಲಕ್ಷ ಲೀಟರ್ ಹಾಲಿಗೂ ಒಕ್ಕೂಟ ಹಣವನ್ನು ಭರಿಸುತ್ತದೆ. ಇದರಿಂದ ಶಿಮೂಲ್ಗೆ ಪ್ರತಿ ತಿಂಗಳು 4.50 ಕೋಟಿ ರೂ ಹೊರೆ ಬೀಳುತ್ತದೆ. ದರ ಹೆಚ್ಚು ಮಾಡಿದ್ದರಿಂದ ಹಾಲು ಮಾರಾಟದಲ್ಲಿ ಸುಮಾರು 8 ಸಾವಿರ ಲೀಟರ್ ಮಾರಾಟ ಕಡಿಮೆ ಆಗಿದೆ. ಬೇಸಿಗೆ ರಜೆ ಇರುವುದರಿಂದ ಕುಟುಂಬಗಳು ಬೇರೆ ಬೇರೆ ಕಡೆ ಹೋಗುವುದರಿಂದ ಹಾಲಿನ ಮಾರಾಟ ಕಡಿಮೆ ಆಗುತ್ತಿದೆ' ಎಂದರು.

ನಾವು ದರ ಏರಿಕೆ ಮಾಡಿದ್ದರಿಂದ ಮಾರಾಟ ಕಡಿಮೆ ಆಗಿಲ್ಲ. ಬದಲಿಗೆ ಬೇರೆ ಬೇರೆ ಕಾರಣಕ್ಕೆ ಮಾರಾಟ ಕಡಿಮೆ ಆಗಿದೆ. ಆದರೆ, ಹಾಲಿನ ಮಾರಾಟ ಕ್ರಮೇಣ ಹೆಚ್ಚಾಗಿದೆ. ಬೇಸಿಗೆ ಕಾಲವಾಗಿರುವ ಕಾರಣಕ್ಕೆ ಮೊಸರಿಗೆ ಬೇಡಿಕೆ ಹೆಚ್ಚಾಗಿದೆ. ಈಗ ಪ್ರತಿ ತಿಂಗಳು 90 ಸಾವಿರ ಕೆಜಿ ಮೊಸರು ಮಾರಾಟವಾಗುತ್ತಿದೆ. ಕಳೆದ ವರ್ಷ ಒಂದು ತಿಂಗಳಲ್ಲಿ 1.10 ಲಕ್ಷ ಕೆಜಿ ಮೊಸರು ಮಾರಾಟವಾಗಿತ್ತು. ಈ ಬಾರಿಯು ಮೊಸರು ಹೆಚ್ಚು ಮಾರಾಟವಾಗುವ ವಿಶ್ವಾಸವಿದೆ. ಇಲ್ಲಿ ರೈತರಿಗೆ ಹೆಚ್ಚಿನ ದರದ ಹಣ ನೀಡಲಾಗುತ್ತಿದೆ. ನಂದಿನಿಯಲ್ಲಿ 150 ಉತ್ಪನ್ನಗಳಿವೆ. ಕಲಬೆರಕೆ ರಹಿತ ಉತ್ಪನ್ನಗಳಿವೆ. ನಮ್ಮ ರಾಜ್ಯದ ಹಾಲಿನ ದರ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ಇದೆ ಎಂದರು.

ಇದು ರೈತರ ಅಭ್ಯುದಯಕ್ಕೆ ಇರುವ ಸಂಸ್ಥೆಯಾಗಿದೆ. ಇದರಿಂದಾಗಿ ಎಲ್ಲರೂ ನಮಗೆ ಸಹಕಾರ ನೀಡಬೇಕೆಂದು ವಿನಂತಿಸಿಕೊಂಡರು. ಹಾಲು ಹಾಲಿಗೆ ಮಾರಾಟವಾದ್ರೆ ನಮಗೆ ಲಾಭ ಸಿಗುತ್ತದೆ. ಆದರೆ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವುದರಿಂದ ಈ ಉತ್ಪನ್ನದ ಮೇಲೆ ತಕ್ಷಣದ ಲಾಭ ನಮಗೆ ಸಿಗುವುದಿಲ್ಲ. ಉಳಿದ ಹಾಲನ್ನು ಪುಡಿ ಮಾಡಿ ಇಡುವುದರಿಂದ 6 ರೂ ಹೆಚ್ಚಿನ ಹೊರೆ ಬರುತ್ತದೆ. ಪುಡಿಗೆ ಬೇಡಿಕೆ ಬಂದಾಗ ಮಾರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.

ಕೆಎಂಎಫ್ನಂತಹ ಸಂಸ್ಥೆಗಳು ತಮ್ಮ ನಿರ್ವಹಣಾ ವೆಚ್ಚ ಕಡಿಮೆ ಮಾಡಿಕೊಳ್ಳಬೇಕು : ಭಾರತೀಯ ಕಿಸಾನ್ ಸಂಘದ ಪ್ರಾಂತ್ಯ ಅಧ್ಯಕ್ಷ ಖಾಂಡ್ಯ ರಮೇಶ್ ಅವರು ಈಟಿವಿ ಭಾರತ್ ಜೊತೆ ಮಾತನಾಡಿ, 'ಸರ್ಕಾರ ಹಾಲಿನ ದರ ಏರಿಕೆ ಮಾಡಿದ ಹಣವನ್ನು ರೈತರಿಗೆ ನೀಡುತ್ತಿದ್ದೇವೆ ಎಂದು ರೈತರಿಗೂ, ಗ್ರಾಹಕರಿಬ್ಬರಿಗೂ ಮೋಸ ಮಾಡುತ್ತಿದೆ. ಈ ಸರ್ಕಾರ ಬಂದು ಒಂದು ಲೀಟರ್ ಹಾಲಿನ ಮೇಲೆ 9 ರೂ ದರ ಏರಿಕೆ ಮಾಡಿದೆ. ಆದರೆ ಈಗ ನಾಲ್ಕು ರೂ ನೀಡುತ್ತೇವೆ ಎಂದು ನಾಟಕ ಮಾಡುತ್ತಿದೆ. ಕೆಎಂಎಫ್ ಕಷ್ಟದಲ್ಲಿದೆ ಎಂದು ಕೆಲವು ಕಡೆ 2,3,4 ಹೀಗೆ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಹಾಲಿಗೆ ಕಡಿಮೆ ಹಣ ನೀಡುತ್ತಿತ್ತು. ಈಗ ದರ ಏರಿಕೆ ಮಾಡಿರಬಹುದು. ಆದರೆ ಮುಂದೆ ಪಶು ಆಹಾರದ ದರ ಸಹ ಏರಿಕೆ ಮಾಡಬಹುದು. ಇದರ ಬದಲಿಗೆ ಕೆಎಂಎಫ್ ತನ್ನ ನಿರ್ವಹಣಾ ವೆಚ್ಚವನ್ನು ತಗ್ಗಿಸಬೇಕು' ಎಂದು ಒತ್ತಾಯಿಸಿದರು.
'ಈಗ ರೈತರಿಂದ ನೀವು 34 ರೂ ಗೆ ಹಾಲು ಖರೀದಿ ಮಾಡಿ, ಜನರಿಗೆ 54 ರೂ ಗೆ ಮಾರಾಟ ಮಾಡುತ್ತಿದ್ದೀರಿ. ಇಲ್ಲಿಗೆ ನಿಮ್ಮ ನಿರ್ವಾಹಣ ವೆಚ್ಚ ಶೇ. 65 ರಷ್ಟು ಆಯಿತು. ಇದು ಯಾವ ನ್ಯಾಯ?. ಯಾವುದೇ ಕಂಪನಿಗಳು ಶೇ.20 ರಷ್ಟು ಹೆಚ್ಚು ನಿರ್ವಾಹಣಾ ವೆಚ್ಚವಾದ್ರೆ ಅದು ರೋಗಗ್ರಸ್ಥ ಕಂಪನಿ ಆಗುತ್ತದೆ. ಆದರೆ ಇಲ್ಲಿ ನೀವು ಶೇ 65 ರಷ್ಟು ಹೆಚ್ಚುವರಿ ತೆಗೆದುಕೊಳ್ಳುತ್ತಿರುವುದರಿಂದ ನೀವು ರೋಗಗ್ರಸ್ಥ ಕಂಪನಿಗಳಾಗುತ್ತೀರಿ. ಇದರಿಂದ ನಿಮ್ಮಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ತಿಳಿದು ಬರುತ್ತದೆ. ಇದರ ಬದಲಾಗಿ ನಿಮ್ಮ ನಿರ್ವಾಹಣಾ ವೆಚ್ಚವನ್ನು ಶೇ,15 ರ ಒಳಗೆ ಇಳಿಸಿಕೊಳ್ಳಿ. ಉಳಿದ 45 ರಷ್ಟು ಪ್ರಮಾಣವನ್ನು ರೈತರಿಗೆ ನೀಡಿ ಗ್ರಾಹಕರಿಗೆ ದರ ಕಡಿಮೆ ಮಾಡಿ' ಎಂದರು.
ಜಿಡ್ಡಿನ ಅಂಶದ ಮೇಲಿನ ಸಹಾಯಧನ ಸರ್ಕಾರ ನಮಗೆ ನೀಡುತ್ತಿದೆ. ಜಿಡ್ಡಿನ ಅಂಶ ಎಷ್ಟಾದರೂ ಬರಲಿ, ಅದರ ಮೇಲೆ ಸಬ್ಸಿಡಿ ಧನ 5 ರೂ ನೀಡಬೇಕು. ಜಿಡ್ಡಿನ ಆಧಾರದ ಮೇಲೆ ನೀವು ನೀಡುತ್ತಿರುವುದು ವಂಚನೆ ಆಗಿದೆ ಎಂದು ಹೇಳಿದರು.
ಇದನ್ನೂ ಓದಿ : ಶಿಮುಲ್ನಿಂದ ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್ : ಪ್ರತಿ ಕೆಜಿ ಹಾಲಿಗೆ 2 ರೂ ಹೆಚ್ಚಳ - MILK PRICE INCREASE