ಮಂಗಳೂರು: ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮಂಗಳೂರು ಹೊರವಲಯದ ವಾಮಂಜೂರು ಸಮೀಪದ ಕೆತ್ತಿಕಲ್ ಗುಡ್ಡ ಕುಸಿದಿದೆ. ರಾಷ್ಟ್ರೀಯ ಹೆದ್ದಾರಿ 169ರ ಮಂಗಳೂರು-ಮೂಡುಬಿದಿರೆ-ಕಾರ್ಕಳವನ್ನು ಸಂಪರ್ಕಿಸುವ ಈ ರಸ್ತೆಯಲ್ಲೀಗ ವಾಹನ ಸವಾರರು ಆತಂಕದಲ್ಲೇ ಪ್ರಯಾಣ ಮಾಡುವಂತಾಗಿದೆ.
ರಿಕ್ಷಾವೊಂದು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗಲೇ ಏಕಾಏಕಿ ಗುಡ್ಡದ ಮಣ್ಣು ಕುಸಿದು ಬಿದ್ದಿದೆ. ಆಟೋದ ಮುಂಭಾಗದಲ್ಲೇ ಮಣ್ಣು ಬಿದ್ದಿದ್ದು ಸ್ವಲ್ಪದರಲ್ಲೇ ದುರಂತ ತಪ್ಪಿದೆ. ಒಂದು ಬದಿಯ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ಇದೀಗ ಇನ್ನೊಂದು ಬದಿಯ ರಸ್ತೆಯಲ್ಲಿ ಎರಡೂ ಕಡೆಯ ವಾಹನಗಳು ಸಂಚರಿಸುತ್ತಿವೆ.
ನಗರದ ರಸ್ತೆಗಳು ಜಲಾವೃತ: ಶನಿವಾರದಿಂದ ಅಬ್ಬರದ ಮಳೆ ಸುರಿಯುತ್ತಿದ್ದು, ಮಂಗಳೂರಿನ ಪಂಪ್ವೆಲ್, ಪಾಂಡೇಶ್ವರ, ಪಡೀಲ್, ಕೊಟ್ಟಾರ, ಕಾರ್ ಸ್ಟ್ರೀಟ್ ಸೇರಿದಂತೆ ನಗರದ ವಿವಿಧೆಡೆ ರಸ್ತೆಗಳು ಜಲಾವೃತವಾಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಇದ್ದು, ಬಿರುಸಿನ ಮಳೆಯಾಗುತ್ತಿರುವುದರಿಂದ ತಗ್ಗು ಪ್ರದೇಶಗಳಲ್ಲಿನ ಕೃತಕ ನೆರೆಯಿಂದ ಹಲವು ಮನೆಗಳು, ಅಂಗಡಿಗಳು ಜಲಾವೃತವಾಗಿದೆ.

ಕುಸಿದ ಬೃಹತ್ ತಡೆಗೋಡೆ: ಕಂಕನಾಡಿಯ ಸುವರ್ಣಲೇನ್ ಬಳಿಯ ಬೃಹತ್ ತಡೆಗೋಡೆ ಕುಸಿದಿದ್ದು, ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತಡೆಗೋಡೆ ರಸ್ತೆ ಮೇಲೆ ಬಿದ್ದು, ಮುಂಭಾಗದ ಮನೆಯ ಕಾಂಪೌಂಡ್ಗೆ ಹಾನಿಯಾಗಿದೆ. ಗೇಟ್ ಕಿತ್ತು ಹೋಗಿದೆ. ವಿದ್ಯುತ್ ಕಂಬ ಬಿದ್ದು ಎರಡು ತುಂಡಾಗಿ ಶಾರ್ಟ್ ಸರ್ಕ್ಯೂಟ್ ಆಗಿದೆ. ಅದೃಷ್ಟವಶಾತ್ ರಸ್ತೆಯಲ್ಲಿ ಜನ, ವಾಹನ ಸಂಚಾರವಿಲ್ಲದ ಕಾರಣ ದುರಂತ ತಪ್ಪಿದೆ.
ರೈಲ್ವೆ ಹಳಿಯಲ್ಲಿ ಬಂಡೆ ಕುಸಿತ-ಸಂಚಾರಕ್ಕೆ ತೊಡಕು: ಪಡೀಲ್, ಜೋಕಟ್ಟೆ ಮಧ್ಯೆ ರೈಲ್ವೆ ಹಳಿಯಲ್ಲಿ ಭಾರಿ ಮಳೆಗೆ ಬಂಡೆ ಮತ್ತು ಮರ ಬಿದ್ದು ರೈಲು ಸಂಚಾರಕ್ಕೆ ತೊಡಕುಂಟಾಗಿದೆ. ಉತ್ತರ ಭಾರತದಿಂದ ಮಂಗಳೂರು ಮೂಲಕ ಕೇರಳಕ್ಕೆ ಸಂಪರ್ಕಿಸುವ ಈ ರೈಲ್ವೆ ಮಾರ್ಗದಲ್ಲಿ ಒಂದು ಹಳಿಗೆ ಬಂಡೆ ಮತ್ತು ಮರ ಬಿದ್ದ ಕಾರಣ ಇರುವ ಇನ್ನೊಂದು ಹಳಿಯಲ್ಲಿ ರೈಲುಗಳು 50 ಕೆಎಂಪಿಎಚ್ ವೇಗದಲ್ಲಿ ನಿಧಾನವಾಗಿ ಸಂಚರಿಸುತ್ತಿದೆ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಸಂಪೂರ್ಣ ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚನೆ: ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಎಲ್ಲಾ ತಹಶೀಲ್ದಾರರು ಹಾಗೂ ಇನ್ಸಿಡೆಂಟ್ ಕಮಾಂಡರ್ಗಳು ಅಪಾಯದಂಚಿನಲ್ಲಿರುವ ಮನೆಗಳ ಕುಟುಂಬಗಳನ್ನು ಕಾಳಜಿ ಕೇಂದ್ರ, ಸುರಕ್ಷಿತ ಸ್ಥಳಗಳಿಗೆ ಕೂಡಲೇ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ.
ನೆರೆ ಉಂಟಾಗುವ ಪ್ರದೇಶಗಳ ಮೇಲೆ ತೀರಾ ನಿಗಾವಹಿಸಿ ಎಲ್ಲಾ ರಕ್ಷಣಾ ಸಾಮಗ್ರಿ ಸನ್ನದ್ಧವಾಗಿರಿಸಬೇಕು. ಯಾವುದೇ ಸಾವು, ನೋವು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು. ಎಲ್ಲಾ ತಾಲೂಕು ಹಾಗೂ ಮಹಾನಗರಪಾಲಿಕೆ ಕಂಟ್ರೋಲ್ ರೂಂ ನಿರಂತರ ಕಾರ್ಯಾಚರಣೆಯಲ್ಲಿರಬೇಕು ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪ್ರಾಕೃತಿಕ ವಿಕೋಪ ಕಾರ್ಯಾಚರಣೆಯಲ್ಲಿ ಯಾವುದೇ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಮಳೆ ಅನಾಹುತ ಸ್ಥಳಗಳಿಗೆ ಭೇಟಿ: ಜಿಲ್ಲಾಧಿಕಾರಿ ಮತ್ತು ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಅವರು ಮಳೆ ನೀರು ನಿಂತು ಸಮಸ್ಯೆಗೀಡಾದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಪಂಪ್ವೆಲ್ಗೆ ಭೇಟಿ ನೀಡಿ, ಮಳೆ ನೀರು ಸರಾಗ ಹರಿವಿನ ಸಮಸ್ಯೆಗಳ ಬಗ್ಗೆ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದರು.
12 ಕುಟುಂಬಗಳು ಪುನರ್ವಸತಿ ಕೇಂದ್ರಕ್ಕೆ: ಮಂಗಳೂರು ನಗರದ ಅತ್ತಾವರ ಸೇರಿದಂತೆ ಕೇಂದ್ರ ಭಾಗದ ವಿವಿಧೆಡೆ ಮಳೆ ನೀರು ಮನೆಗಳಿಗೆ ನುಗ್ಗಿ ತೊಂದರೆಗೀಡಾದ 12 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಇವರಿಗೆ ಮಹಾನಗರಪಾಲಿಕೆ ವತಿಯಿಂದ ಪುರಭವನ ಆವರಣದಲ್ಲಿ ತಾತ್ಕಾಲಿಕ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ನೀಡಿ, ಆಹಾರ ಮತ್ತು ಅಗತ್ಯ ಸಾಮಾಗ್ರಿಗಳನ್ನು ಒದಗಿಸಲಾಗಿದೆ. ನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಅವರು ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮಳೆ ವರದಿ (14 ಜೂನ್ 2025 ಬೆಳಗ್ಗೆ 08:30ರಿಂದ-15 ಜೂನ್ 2025ರ ಬೆಳಗ್ಗೆ 08:30ರವರೆಗೆ):
ಮಳೆ ಪ್ರಮಾಣ (ಕಳೆದ 24 ಗಂಟೆಗಳಲ್ಲಿ)
ಗರಿಷ್ಠ ಮಳೆಯಾದ ಸ್ಥಳಗಳು (ಕಳೆದ 24 ಗಂಟೆಗಳಲ್ಲಿ) ಮಿ. ಮೀ.ಗಳಲ್ಲಿ
- ಬಂಟ್ವಾಳ-ಪುದು |189.5|
- ಮಂಗಳೂರು-ನೀರುಮಾರ್ಗ |180.5 |
- ಬಂಟ್ವಾಳ-ಮೇರಮಜಲು | 174 |
- ಮಂಗಳೂರು-ಬಾಲ | 165.5 |
- ಬೆಳ್ತಂಗಡಿ-ಪಟ್ರಮೆ | 162.5 |
- ಬಂಟ್ವಾಳ-ಅಮ್ಟಾಡಿ | 159.5 |
- ಬಂಟ್ವಾಳ-ಬಡಗಬೆಳ್ಳೂರು | 150 |
- ಬಂಟ್ವಾಳ-ಸರಪಾಡಿ | 149.5 |
- ಬೆಳ್ತಂಗಡಿ-ಮಚ್ಚಿನ | 149 |
- ಬಂಟ್ವಾಳ-ಕವಲಪಾಡೂರು | 147.5 |
- ಬಂಟ್ವಾಳ-ಕವಲಮುದೂರು | 143.5 |
- ಬೆಳ್ತಂಗಡಿ-ಮಡಂತ್ಯಾರು | 138 |
- ಮಂಗಳೂರು-ಶಿರ್ತಾಡಿ | 136.5 |
- ಬೆಳ್ತಂಗಡಿ-ಕಾಶಿಪಟ್ನ | 133.5 |
- ಬಂಟ್ವಾಳ-ಬಾಳ್ತಿಲ | 133 |
- ಬಂಟ್ವಾಳ-ಮಂಚಿ | 129.5 |
- ಬೆಳ್ತಂಗಡಿ-ಲಾಯಿಲ | 129.5 |
- ಬೆಳ್ತಂಗಡಿ-ಮಾಲಡಿ | 128.5 |
- ಮಂಗಳೂರು-ಎಕ್ಕಾರು | 127 |
- ಬೆಳ್ತಂಗಡಿ-ಕಲ್ಮಂಜ | 126.5 |
- ಮಂಗಳೂರು-ಪಡುಮರ್ನಾಡ್ | 125.5 |
- ಬೆಳ್ತಂಗಡಿ-ಮರೋಡಿ | 123.5 |
- ಬಂಟ್ವಾಳ-ಪಿಲತಬೆಟ್ಟು | 122.5 |
- ಮಂಗಳೂರು-ಬಜ್ಪೆ | 121 |
- ಬಂಟ್ವಾಳ-ಬಾಳೆಪುಣಿ | 117.5 |
- ಉಳ್ಳಾಲ-ಮುನ್ನೂರು | 117.5 |
- ಬೆಳ್ತಂಗಡಿ-ಮಲವಂತಿಗೆ | 116 |
- ಬಂಟ್ವಾಳ-ಕುಕ್ಕಿಪಾಡಿ | 111.5 |
- ಬಂಟ್ವಾಳ-ಗೊಲ್ತಮಜಲು | 109.5 |
- ಉಳ್ಳಾಲ-ಬೊಲಿಯಾರು | 108 |
- ಬೆಳ್ತಂಗಡಿ-ಬಾರ್ಯ | 104.5 |
- ಮೂಲ್ಕಿ-ಐಕಲ | 103 |
- ಬಂಟ್ವಾಳ-ಇರಾ | 102.5 |
- ಉಳ್ಳಾಲ-ಕೊಟೆಕಾರ್ | 100 |
- ಬಂಟ್ವಾಳ-ರಾಯಿ | 97.5 |
- ಪುತ್ತೂರು-ಬಡಗನ್ನೂರು | 96.5 |
- ಮಂಗಳೂರು-ಅಬಕಾರಿ ಭವನ | 95 |
- ಮಂಗಳೂರು-ವೆಟರಿನರಿ ಆಸ್ಪತ್ರೆ ಸುರತ್ಕಲ್ | 94 |
- ಉಳ್ಳಾಲ-ಕಿನ್ಯ | 92.5 |
- ಬೆಳ್ತಂಗಡಿ-ಪುದುವೆಟ್ಟು | 91 |
- ಬೆಳ್ತಂಗಡಿ-ಇಳಂತಿಲ | 89 |
- ಬಂಟ್ವಾಳ-ವಿಟ್ಲಪಡ್ನೂರು | 82.5 |
- ಪುತ್ತೂರು-ಪಾಣಾಜೆ | 82 |
- ಮೂಲ್ಕಿ-ಕಿಲ್ಪಾಡಿ | 81.5 |
- ಉಳ್ಳಾಲ-ಹರೇಕಳ | 79 |
- ಪುತ್ತೂರು-ಕೊಲ್ತಿಗೆ | 78 |
- ಪುತ್ತೂರು-ಅರಿಯಾಡ್ಕ | 76.5 |
- ಪುತ್ತೂರು-ರಾಮಕುಂಜ | 73.5 |
- ಬಂಟ್ವಾಳ-ಪುಣಚ | 72.5 |
- ಬಂಟ್ವಾಳ-ಇಡ್ಕಿಡು | 72 |
- ಬಂಟ್ವಾಳ-ಕೇಪು | 72 |
- ಸುಳ್ಯ-ಬೆಳ್ಳಾರೆ | 71 |
- ಪುತ್ತೂರು-ಬೆಳಂದೂರು | 69 |
- ಸುಳ್ಯ-ಜಾಲ್ಸೂರು | 68.5 |
- ಪುತ್ತೂರು-ಅಲಂಕಾರು | 68 |
- ಸುಳ್ಯ-ದೇವಚಳ್ಳ | 67.5 |
- ಸುಳ್ಯ-ಐವರ್ನಾಡು | 65 |
- ಬಂಟ್ವಾಳ-ಕನ್ಯಾನ | 64.5 |
- ಸುಳ್ಯ-ಗುತ್ತಿಗಾರು | 61.5 |
- ಮಂಗಳೂರು-ಮಲ್ಲೂರು | 55.5 |
- ಸುಳ್ಯ-ಎಡಮಂಗಲ | 54.5 |
- ಸುಳ್ಯ-ಬಲ್ಪ | 45.5 |
- ಪುತ್ತೂರು-ಕೆದಂಬಾಡಿ | 40.5 |
- ಗರಿಷ್ಠ ಮಳೆ ದಾಖಲಾಗಿರುವ ಸ್ಥಳ- ಬಂಟ್ವಾಳದ ಪುದು-189.5 ಮಿ.ಮೀ.
ಇದನ್ನೂ ಓದಿ: ಆಗುಂಬೆ ಘಾಟಿಯಲ್ಲಿ ಜೂನ್ 15ರಿಂದ ಭಾರಿ ವಾಹನ ಸಂಚಾರ ನಿಷೇಧ