ಬೆಂಗಳೂರು: ಹುಬ್ಬಳ್ಳಿ ಧಾರವಾಡ ನಡುವೆ ಪ್ರಾಯೋಗಿಕವಾಗಿ ವಿದ್ಯುತ್ ಚಾಲಿತ ಕ್ಷಿಪ್ರ ಸಾರಿಗೆ ಯೋಜನೆ 'ಎಲೆಕ್ಟ್ರಿಕ್ ರಾಪಿಡ್ ಟ್ರಾನ್ಸಿಟ್' (e-RT) ಆರಂಭಿಸಲು ಸರ್ಕಾರ ಮುಂದಾಗಿದೆ. ಅಂತೆಯೇ ಈ ಕುರಿತು HESS AG, HESS INDIA ಮತ್ತು SSB AG ಸಂಸ್ಥೆಗಳೊಂದಿಗೆ ಸರ್ಕಾರ ಪರಸ್ಪರ ಒಡಂಬಡಿಕೆಗೆ ಸಹಿ ಹಾಕಲಾಯಿತು.
ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಚಿವರು, ಹಿರಿಯ ಅಧಿಕಾರಿಗಳು ಮತ್ತು ಕಂಪನಿಗಳ ಪ್ರತಿನಿಧಿಗಳು ಹಾಜರಿದ್ದರು.
ಹುಬ್ಬಳ್ಳಿ ಧಾರವಾಡ ನಡುವಿನ ವಿದ್ಯುತ್ ಚಾಲಿತ ಕ್ಷಿಪ್ರ ಸಾರಿಗೆ ಯೋಜನೆ ಅನುಷ್ಠಾನ ಕುರಿತು ಮೂರು ತಿಂಗಳ ಒಳಗಾಗಿ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು. ಹುಬ್ಬಳ್ಳಿ ಧಾರವಾಡದಲ್ಲಿ ಈ ಯೋಜನೆ ಯಶಸ್ವಿಯಾದರೆ, ರಾಜ್ಯದ ಇತರ ಎರಡನೇ ಹಂತದ ನಗರಗಳಿಗೂ ಇದನ್ನು ವಿಸ್ತರಿಸಬಹುದಾಗಿದೆ ಎಂದು ಸಿಎಂ ತಿಳಿಸಿದರು.

ಯುರೋಪ್ನಲ್ಲಿ ಯಶಸ್ವಿ: ಕ್ಷಿಪ್ರ ಸಾರಿಗೆಯು ಸಂಪೂರ್ಣ ವಿದ್ಯುತ್ ಚಾಲಿತ ವ್ಯವಸ್ಥೆಯಾಗಿದ್ದು, ನಗರದಲ್ಲಿ ಎತ್ತರಿಸಿದ ರಸ್ತೆ ಹಾಗೂ ಇತರೆಡೆ ನೆಲದ ಮೇಲೆ ಸಂಚರಿಸಲಿದೆ. ಇದರಲ್ಲಿ 250 ಜನರು ಒಮ್ಮೆಗೆ ಪ್ರಯಾಣಿಸಬಹುದಾಗಿದೆ. ಕಳೆದ ಒಂದು ವರ್ಷದಿಂದ ಯೋಜನೆ ಕಾರ್ಯ ಸಾಧ್ಯತೆ ಬಗ್ಗೆ ಅಧ್ಯಯನ ನಡೆಸಲಾಗಿದೆ. ಮೆಟ್ರೋ ಮಾದರಿಯ ಈ ಸಂಚಾರಿ ವ್ಯವಸ್ಥೆ ಯುರೋಪಿನ ಹಲವು ರಾಷ್ಟ್ರಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಸಂಸ್ಥೆಗಳ ಪ್ರತಿನಿಧಿಗಳು ಮಾಹಿತಿ ನೀಡಿದರು.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಮಾಜ ಕಲ್ಯಾಣ ಸಚಿವ ಮಹಾದೇವಪ್ಪ, ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹೆಚ್ಇಎಸ್ಎಸ್ ಎಜಿ ಸಂಸ್ಥೆಯ ಸುಸಾನ್ ವಾನ್ ಸುರಿ, ಎಸ್ಎಸ್ಬಿ ಸಂಸ್ಥೆಯ ನಿರ್ದೇಶಕ ಬುರಾಕ್ ಸೆನಸರ್ ಮತ್ತಿತರರು ಉಪಸ್ಥಿತರಿದ್ದರು.
Glimpses from my visit to #France to check out the #HESS #LighTram manufacturing unit.
— Santosh Lad Official (@SantoshSLadINC) December 17, 2024
Looking forward to get the best of buses for our Hubbali - Dharwad route that ensures ease of travel and best of mobility for people between our twin cities. pic.twitter.com/TAFUzFfJ0S
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಸ್ವಿಜ್ವರ್ ಲ್ಯಾಂಡ್ ಹೋಗಿ ಯೋಜನೆಯ ಪ್ರಾಯೋಗಿಕ ಯಶಸ್ಸನ್ನು ಅಧ್ಯಯನ ನಡೆಸಿದ್ದರು. ಉದ್ದೇಶಿತ ಯೋಜನೆಯ ಸಾಧ್ಯಾ ಸಾಧ್ಯತೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಸಚಿವರು ವಿವರಿಸಿದ್ದರು.
ಜೊತೆಗೆ ಸಚಿವ ಸಂತೋಷ್ ಲಾಡ್ ಅವರು ಕಳೆದ ವರ್ಷ ಡಿಸೆಂಬರ್ನಲ್ಲಿ ಫ್ರಾನ್ಸ್ಗೆ ಭೇಟಿ ನೀಡಿ ಅಲ್ಲಿನ ಹೆಚ್ಇಎಸ್ಎಸ್ ಸಮಸ್ತೆಯ LighTram ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಜೊತೆಗೆ ಅಲ್ಲಿನ ವಿದ್ಯುತ್ ಚಾಲಿತ ವಾಹನಗಳಲ್ಲಿ ಸಂಚರಿಸಿದ್ದರು. ಈ ರೀತಿಯ ಸಾರಿಗೆ ವ್ಯವಸ್ಥೆ ಹುಬ್ಬಳ್ಳಿ ಧಾರವಾಡ ಪ್ರಯಾಣಿಕರಿಗೆ ನೀಡಬೇಕೆಂಬ ಉದ್ದೇಶವಿದೆ ಎಂದು ಡಿಸೆಂಬರ್ನಲ್ಲಿ ಸಚಿವ ಲಾಡ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ: 4 ತಿಂಗಳ ಹಿಂದೆ ಉದ್ಘಾಟನೆಯಾಗಿದ್ದ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ ಮತ್ತೆ 4 ತಿಂಗಳು ಬಂದ್: ನಿರ್ವಹಣೆಯೇ ದೊಡ್ಡ ಸವಾಲು!
ಇದನ್ನೂ ಓದಿ: ಹುಬ್ಬಳ್ಳಿ ಫ್ಲೈ ಓವರ್ ಕಾಮಗಾರಿ: ಚನ್ನಮ್ಮ ವೃತ್ತದ ಪ್ರಮುಖ ರಸ್ತೆಗಳು 4 ತಿಂಗಳು ಬಂದ್, ಬದಲಿ ಮಾರ್ಗಗಳ ವಿವರ ಇಲ್ಲಿದೆ