ಬೆಂಗಳೂರು: ಹದಿನಾರು ವರ್ಷಗಳಿಂದ ಚುನಾವಣೆ ನಡೆಸದೇ, ಒಂದಿಲ್ಲೊಂದು ಸಬೂಬು ಕೊಡುತ್ತಾ, ಸರ್ಕಾರಿ ಅಧಿಕಾರಿಗಳ ದಿಕ್ಕು ತಪ್ಪಿಸುತ್ತಾ ತಮ್ಮದೇ ಆದ ಕೋಟೆ ಕಟ್ಟಿಕೊಂಡು ಆಡಳಿತ ನಡೆಸುತ್ತಿದ್ದ ಕರ್ನಾಟಕ ಫಾರ್ಮಸಿ ಕೌನ್ಸಿಲ್ ಆಡಳಿತ ಮಂಡಳಿಯನ್ನು ರಾಜ್ಯ ಸರ್ಕಾರ ರದ್ದುಪಡಿಸಿದೆ.
ರಾಜ್ಯ ಫಾರ್ಮಸಿ ಕೌನ್ಸಿಲ್ನಲ್ಲಿ ನಡೆಯುತ್ತಿದ್ದ ಅಕ್ರಮಗಳ ಬಗ್ಗೆ ಸಲ್ಲಿಕೆಯಾದ ದೂರುಗಳ ಬಗ್ಗೆ ಹಿರಿಯ ಅಧಿಕಾರಿಗಳಿಂದ ವರದಿ ತರಿಸಿಕೊಂಡ ಬಳಿಕ ರಾಜ್ಯ ಸರ್ಕಾರವು ಅಂತಿಮವಾಗಿ ಫಾರ್ಮಸಿ ಕೌನ್ಸಿಲ್ ಆಡಳಿತ ಮಂಡಳಿಯನ್ನು ರದ್ದುಪಡಿಸಿ, ಚುನಾವಣೆ ನಡೆಸಲು ಆದೇಶ ಮಾಡಿದೆ.
ನೋಂದಾಯಿತ ಔಷಧ ತಜ್ಞರ ಪಟ್ಟಿ ತಯಾರಿಕೆ ಮತ್ತು ನೋಂದಾಯಿಸಲ್ಪಡದ ವ್ಯಕ್ತಿಗಳು ಔಷಧ ಸರಬರಾಜು ಮಾಡುವುದನ್ನು ತಡೆಗಟ್ಟುವುದು ರಾಜ್ಯ ಫಾರ್ಮಸಿ ಪರಿಷತ್ತಿನ ಪ್ರಮುಖ ಕಾರ್ಯವಾಗಿದೆ. ಆದರೆ, ಇದನ್ನು ಸಮರ್ಪಕವಾಗಿ ನಿರ್ವಹಿಸಲು ಫಾರ್ಮಸಿ ಕೌನ್ಸಿಲ್ ವಿಫಲವಾಗಿದ್ದರಿಂದ ಆಡಳಿತ ಮಂಡಳಿಯನ್ನೇ ವಿಸರ್ಜನೆ ಮಾಡಿ, ಫಾರ್ಮಸಿ ಕೌನ್ಸಿಲ್ನಲ್ಲಿ ವರ್ಷಾನುಗಟ್ಟಲೆ ಬೀಡುಬಿಟ್ಟಿದ್ದ ಮಂಡಳಿಯ ಸದಸ್ಯರಿಗೆ ಬಿಸಿ ಮುಟ್ಟಿಸಿದೆ.



ಆಡಳಿತಾಧಿಕಾರಿ ನೇಮಕ: ಸರ್ಕಾರವು ಫಾರ್ಮಸಿ ಕೌನ್ಸಿಲ್ಗೆ ಹೊಸದಾಗಿ ಚುನಾವಣೆ ನಡೆಸಿ, ಆಡಳಿತ ಮಂಡಳಿ ರಚನೆಯಾಗುವವರೆಗೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿದೆ. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಡುವ ಆಹಾರ ಸುರಕ್ಷತೆ ಮತ್ತು ಔಷಧಿ ಇಲಾಖೆ ಆದೇಶ ಹೊರಡಿಸಿದೆ.
ಆದೇಶವಿಲ್ಲದೇ ಅಧಿಕಾರದಲ್ಲಿ ಮುಂದುವರಿಕೆ: ಕರ್ನಾಟಕ ಫಾರ್ಮಸಿ ಕೌನ್ಸಿಲ್ನಲ್ಲಿ ಒಟ್ಟು 6 ಜನ ಚುನಾಯಿತ ಸದಸ್ಯರಿದ್ದು, ಇವರಲ್ಲಿ ಇಬ್ಬರು ಸದಸ್ಯರು ಕಳೆದ 20 ವರ್ಷಗಳಿಂದ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದ ಐವರು ಸದಸ್ಯರ ಅವಧಿ 2021ರಲ್ಲಿಯೇ ಅಂತ್ಯಗೊಂಡಿದ್ದರೂ, ಸರ್ಕಾರದಿಂದ ಸದಸ್ಯತ್ವ ಮುಂದುವರಿಕೆಗೆ ಸಂಬಂಧಿಸಿದ ಯಾವುದೇ ಆದೇಶ ಪಡೆಯದೇ, ಅಧಿಕಾರದಲ್ಲಿ ಮುಂದುವರೆದಿದ್ದರು. ಇದನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತರು ತನಿಖೆ ಸಂದರ್ಭದಲ್ಲಿ ಪತ್ತೆ ಹಚ್ಚಿ, ಸರ್ಕಾರಕ್ಕೆ ವರದಿ ನೀಡಿದ್ದರು.
ಅನೇಕ ದೂರುಗಳು ಸಲ್ಲಿಕೆ: ಫಾರ್ಮಸಿ ಪರಿಷತ್ತಿನಲ್ಲಿ ನಡೆಯುತ್ತಿರುವ ಅಧಿಕಾರ ದುರ್ಬಳಕೆ, ಕರ್ತವ್ಯಲೋಪದ ಆರೋಪದ ಬಗ್ಗೆ ಹಲವಾರು ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಸಂಘಟನೆಗಳು ಆರೋಗ್ಯ ಇಲಾಖೆಗೆ ದೂರು ಸಲ್ಲಿಸಿದ್ದವು. ಪರಿಷತ್ತಿನ ರಿಜಿಸ್ಟ್ರಾರ್ ಅವರ ಆಡಳಿತ ದೋಷಗಳು, ಏಕಪಕ್ಷೀಯ ನಿರ್ಧಾರಗಳು, ನೋಂದಣಿ ನವೀಕರಣ ಮಾಡುವ ಸಂದರ್ಭದಲ್ಲಿ ಫಾರ್ಮಾಸಿಸ್ಟ್ಗಳಿಗೆ ಹಿಂಸೆ, ಕಿರುಕುಳ ನೀಡುತ್ತಿರುವ ಆರೋಪಗಳ ಬಗ್ಗೆ ಅನೇಕ ದೂರುಗಳು ಸಲ್ಲಿಕೆಯಾಗಿದ್ದವು.
ಸರ್ಕಾರಕ್ಕೆ ವರದಿ ನೀಡಿದ್ದ ಔಷಧಿ ನಿಯಂತ್ರಕರು: ರಾಜ್ಯ ಸರ್ಕಾರದ ಅನುಮತಿಯಿಲ್ಲದೆ ಫಾರ್ಮಸಿ ಕೌನ್ಸಿಲ್ನ ಹಣವನ್ನು ಮುಚ್ಯುವಲ್ ಫಂಡ್ನಲ್ಲಿ ಹೂಡಿಕೆ ಮಾಡಿದ್ದನ್ನು ಔಷಧ ನಿಯಂತ್ರಕರು ತನಿಖೆ ವೇಳೆ ಪತ್ತೆ ಹಚ್ಚಿ, 2024ರ ಜನವರಿ ಅಂತ್ಯದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಅಲ್ಲದೆ, ಅಧಿಕಾರ ದುರ್ಬಳಕೆ ಬಗ್ಗೆಯೂ ವರದಿಯಲ್ಲಿ ಪ್ರಸ್ತಾಪ ಮಾಡಿದ್ದರು. ಫಾರ್ಮಸಿ ಕೌನ್ಸಿಲ್ನ ರಿಜಿಸ್ಟ್ರಾರ್ ಅವರು ಸರ್ಕಾರದ ಅನುಮತಿಯಿಲ್ಲದೇ, ನೇಮಕಗೊಂಡು ಕಾರ್ಯನಿರ್ವಹಣೆ ಮಾಡುತ್ತಿರುವ ಬಗ್ಗೆಯೂ ಔಷಧಿ ನಿಯಂತ್ರಕರು ಕಳೆದ ವರ್ಷ ಜೂನ್ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.
ಫಾರ್ಮಸಿ ಪರಿಷತ್ತಿಗೆ ಚುನಾವಣೆ ನಡೆಸಲು ಸರ್ಕಾರವು ಪ್ರಯತ್ನಪಟ್ಟು ನಾಲ್ಕು ಬಾರಿ (ದಿನಾಂಕ 26-10-2016, 23-5-2017, 19-6-2017 ಮತ್ತು 2-9-2022) ಹಲವಾರು ಅಧಿಕಾರಿಗಳನ್ನು ನೇಮಕ ಮಾಡಿತ್ತು. ಈ ಅಧಿಕಾರಿಗಳಿಗೆ ಫಾರ್ಮಸಿ ಕೌನ್ಸಿಲ್ನ ಆಡಳಿತ ಮಂಡಳಿ ಸದಸ್ಯರು ಅಗತ್ಯ ಮಾಹಿತಿ ಹಾಗೂ ಸಹಕಾರ ನೀಡಲು ವಿಫಲವಾಗಿದ್ದರಿಂದ ಸರ್ಕಾರ ಚುನಾವಣೆ ನಡೆಸಿ, ಹೊಸ ಆಡಳಿತ ಮಂಡಳಿ ರಚಿಸಲು ಸಾಧ್ಯವಾಗಿರಲಿಲ್ಲ.
ಆರೋಗ್ಯ ಇಲಾಖೆಯು ಫಾರ್ಮಸಿ ಕೌನ್ಸಿಲ್ನ ಆಡಳಿತ ಮಂಡಳಿಯ ಲೋಪದೋಷ, ಕರ್ತವ್ಯಲೋಪ, ಏಕಪಕ್ಷೀಯ ತೀರ್ಮಾನ, ಅಧಿಕಾರ ದುರುಪಯೋಗ ಆರೋಪಗಳ ಬಗ್ಗೆ ಸಮಗ್ರ ವರದಿಯನ್ನು ಪಡೆದು, ವಿಸರ್ಜನೆ ಮಾಡುವುದರೊಂದಿಗೆ ಆಡಳಿತ ಮಂಡಳಿಗೆ ಗೇಟ್ ಪಾಸ್ ನೀಡಿದೆ.
ಇದನ್ನೂ ಓದಿ: ವಿಧಾನ ಸೌಧಕ್ಕೆ 'Guided Tour' ವ್ಯವಸ್ಥೆ; ಸಾರ್ವಜನಿಕರಿಗೆ ಶುಲ್ಕ ನಿಗದಿಗೊಳಿಸಲು ಸರ್ಕಾರ ತೀರ್ಮಾನ