ಬೆಂಗಳೂರು: ಸಿಎಂ ಹುದ್ದೆ ಸಂಬಂಧ ಹಿರಿಯ ಸಚಿವರೂ ಸೇರಿ 6ಕ್ಕೂ ಹೆಚ್ಚು ನಾಯಕರು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವುದರ ಜೊತೆಗೆ ಎಚ್ಚರಿಕೆ ಕೊಡುವಂತೆ ಕೋರಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಗೆ ಕಾಂಗ್ರೆಸ್ ನಾಯಕರು ಪತ್ರ ಬರೆದಿದ್ದಾರೆ.
ವಿ.ಎಸ್.ಉಗ್ರಪ್ಪ, ಬಿ.ಎಲ್.ಶಂಕರ್, ಹೆಚ್.ಎಂ.ರೇವಣ್ಣ, ಎಲ್.ಹನುಮಂತಯ್ಯ, ಪ್ರಕಾಶ್ ರಾಥೋಡ್, ದ್ವಾರಕಾನಾಥ್ ಹಾಗು ರಾಣಿ ಸತೀಶ್ ಸೇರಿ 15 ಮಂದಿ ಹಿರಿಯ ಕಾಂಗ್ರೆಸ್ ಮುಖಂಡರು ಪತ್ರ ಬರೆದು, ಸಿಎಂ ಹುದ್ದೆ ಸಂಬಂಧ ಬಹಿರಂಗ ಹೇಳಿಕೆಗೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ. ಪಕ್ಷದ ಕಾರ್ಯಕರ್ತರು ಹಾಗೂ ನಾಯಕರ ಪರಿಶ್ರಮದಿಂದ ಕಾಂಗ್ರೆಸ್ 135 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ. ಭರವಸೆ ನೀಡಿದಂತೆ ಪಂಚ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಲಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಬಿಜೆಪಿ ಹಾಗೂ ಜೆಡಿಎಸ್ ಜಂಟಿಯಾಗಿ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿವೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ವಿಚಾರವನ್ನು ಎತ್ತಿದ್ದಾರೆ. ಈ ಸಂಬಂಧ ಸಿಎಂ ವಿರುದ್ಧ ರಾಜ್ಯಪಾಲರಿಂದ ತನಿಖೆಗೆ ಪೂರ್ವಾನುಮತಿ ಪಡೆಯುವಲ್ಲಿ ಯಶ ಕಂಡಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಮುಡಾ ವಿಚಾರವಾಗಿ ಸಿದ್ದರಾಮಯ್ಯರ ರಾಜೀನಾಮೆಗೆ ಒತ್ತಾಯಿಸುತ್ತಿವೆ ಎಂದು ತಿಳಿಸಿದ್ದಾರೆ.
ಈ ರಾಜಕೀಯ ಸನ್ನಿವೇಶದಲ್ಲಿ ಸಚಿವರೂ ಸೇರಿ ಆರಕ್ಕೂ ಅಧಿಕ ಹಿರಿಯ ಕಾಂಗ್ರೆಸ್ ನಾಯಕರು ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಹೋರಾಡುವ ಬದಲು ಸಿಎಂ ಹುದ್ದೆ ಸಂಬಂಧ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದರಿಂದ ನಮ್ಮ ಪಕ್ಷದ ಹಲವು ನಾಯಕರು, ಕಾರ್ಯಕರ್ತರು ಬೇಸರಗೊಂಡಿದ್ದಾರೆ. ಪಕ್ಷ ಹಾಗೂ ಸರ್ಕಾರದ ಮೇಲೆ ತಮ್ಮ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಜೊತೆಗೆ, ರಾಜ್ಯದ ಆಡಳಿತವೂ ದೊಡ್ಡ ಮಟ್ಟಿಗೆ ಹಿನ್ನಡೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಸಿಎಂ ಹುದ್ದೆ ಸಂಬಂಧ ಬಹಿರಂಗ ಹೇಳಿಕೆ ನೀಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಅವರಿಗೆ ಎಚ್ಚರಿಕೆ ನೀಡುವುದರ ಜೊತೆಗೆ ಮುಂದೆ ಪಕ್ಷದ ಹಿತದೃಷ್ಟಿಯಿಂದ ಇಂಥ ಹೇಳಿಕೆಗಳನ್ನು ನೀಡದಂತೆ ನಿರ್ದೇಶಿಸುವಂತೆ ಕೈ ನಾಯಕರು ಕೋರಿದ್ದಾರೆ.
ಇದನ್ನೂ ಓದಿ: ನಾನು ಸಿಎಂ ಆಕಾಂಕ್ಷಿಯೇ ಅಲ್ಲ: ಮಾಜಿ ಸಚಿವ ಆರ್.ವಿ.ದೇಶಪಾಂಡೆ ಮತ್ತೆ ಸ್ಪಷ್ಟನೆ - R V Deshapande