ಬೆಂಗಳೂರು : ನಮ್ಮ ಕ್ಷೇತ್ರಕ್ಕೆ ಲಾ ಕಾಲೇಜ್, ಪಾಲಿಟೆಕ್ನಿಕಲ್ ಕಾಲೇಜ್ ಕೊಡಿ ಎಂದು ಕೇಳಲು ಹೋದರೆ ಕಾಂಗ್ರೆಸ್ಗೆ ಬರುವಂತೆ ಆಹ್ವಾನ ನೀಡಿದ್ದರು ಎಂದು ಜೆಡಿಎಸ್ ಶಾಸಕ ಎಂ. ಟಿ. ಕೃಷ್ಣಪ್ಪ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಪಕ್ಷದ ವತಿಯಿಂದ ಫ್ರೀಡಂ ಪಾರ್ಕ್ನಲ್ಲಿ ಇಂದು ಹಮ್ಮಿಕೊಂಡಿರುವ 'ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ' ಅಭಿಯಾನದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಾನು ಕಾಲೇಜ್ ಕೇಳಿದರೆ, ಪಕ್ಷಕ್ಕೆ ಕರೆಯುತ್ತಾರೆ. ನಾನ್ಯಾಕೆ ಕಾಂಗ್ರೆಸ್ಗೆ ಹೋಗಲಿ, ಕಾಂಗ್ರೆಸ್ ಮುಳುಗುವ ಹಡಗು. ಜೆಡಿಎಸ್ ನಮ್ಮ ಪಕ್ಷ. ಕಳೆದ 25 ವರ್ಷಗಳಿಂದ ಇಲ್ಲೇ ಇದ್ದೇನೆ. ಮುಂದೆಯೂ ಇರುತ್ತೇನೆ ಎಂದು ತಿರುಗೇಟು ನೀಡಿದರು.
ಜೆಡಿಎಸ್ ಅನ್ನು ಹೋರಾಟದ ಮೂಲಕ ಹೆಚ್. ಡಿ. ದೇವೇಗೌಡರು ಕಟ್ಟಿದ್ದಾರೆ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಜನರ ಮೇಲೆ ಹೆಚ್ಚು ತೆರಿಗೆ ವಿಧಿಸದೆ ಹಲವು ಕಾರ್ಯಕ್ರಮಗಳನ್ನು ನೀಡಿದ್ದರು. ಆದರೆ, ಈ ಕಾಂಗ್ರೆಸ್ ಸರ್ಕಾರ ಬಂದು ಇನ್ನೂ ಎರಡು ವರ್ಷ ಆಗಿಲ್ಲ. ಆಗಲೇ ಹಾಲಿನ ದರ ಏರಿಕೆ, ವಿದ್ಯುತ್, ನೀರಿನ ಬಿಲ್ ಏರಿಕೆ ಮಾಡಿದೆ. ಹಳ್ಳಿಗಳಲ್ಲಿ ವಿದ್ಯುತ್ ಸರಿಯಾಗಿ ಸಿಗುತ್ತಿಲ್ಲ. ಕಾಫಿ, ಟೀ ಬೆಲೆಯೂ ಹೆಚ್ಚಾಗಿದೆ. ಮಹಿಳೆಯರಿಗೆ 2 ಸಾವಿರ ರೂ. ಕೊಟ್ಟು, ಜನಸಾಮಾನ್ಯರ ಮೇಲೆ 23 ಸಾವಿರ ರೂ. ಹೊರೆ ಹಾಕಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರ 40 ಪರ್ಸೆಂಟ್ನಿಂದ 60 ಪರ್ಸೆಂಟ್ಗೆ ಹೋಗಿದೆ. ನಿಮಗೂ ಎಸ್ಐಟಿ ಮಾಡಿಕೊಳ್ಳಿ. ನಿಮ್ಮದು ಲೂಟಿ ಮಾಡುವ ಸರ್ಕಾರ, ದರಿದ್ರ ಸರ್ಕಾರ. ಹೆಣ್ಣು ಮಕ್ಕಳಿಗೆ ಅನುಕೂಲ ಮಾಡಬೇಕೆಂಬುದು ಸರ್ಕಾರಕ್ಕಿಲ್ಲ. ಕೇವಲ ಚುನಾವಣೆಯಲ್ಲಿ ವೋಟ್ ತೆಗೆದುಕೊಳ್ಳಲು 2 ಸಾವಿರ ರೂ. ಕೊಟ್ಟಿದ್ದಾರೆ. ಸರ್ಕಾರ ನಡೆಸಲು ನಿಮಗೆ ಬರುವುದಿಲ್ಲ. ಮಾತೆತ್ತಿದರೆ ಟ್ಯಾಕ್ಸ್ ಹಾಕುತ್ತಿದ್ದಿರಾ? ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕುರ್ಚಿ ಬಿಟ್ಟು ಇಳಿಯಿರಿ : ಜೆಡಿಎಸ್ನ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರು ಮಾತನಾಡಿ, ಕಾಂಗ್ರೆಸ್ ಓಟ್ ಹಾಕಿಸಿಕೊಳ್ಳಲು ಮಾತ್ರವೇ ಈ ಭಾಗ್ಯ ಎನ್ನುವಂತೆ ಮಾಡ್ತಿದೆ. ಎಲ್ಲ ದರ ಏರಿಕೆ ಮಾಡಿದ್ದಾರೆ. ಟ್ರಾನ್ಸ್ ಫಾರ್ಮರ್ (ಟಿಸಿ) ಹಾಕಿಸಿಕೊಳ್ಳುವ ರೈತರು 2 ರಿಂದ 3 ಲಕ್ಷ ರೂ. ಹಣ ಖರ್ಚು ಮಾಡಬೇಕು. ಹಣ ಕ್ರೋಢೀಕರಣ ಮಾಡುವ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ. ಕುರ್ಚಿ ಬಿಟ್ಟು ಕೆಳಗಿಳಿಯಿರಿ. ಬೊಕ್ಕಸದ ಹಣ ಇಲಾಖೆಗಳಿಗೆ ಮಾರಾಟಕ್ಕೆ ಇಟ್ಟಿದ್ದಾರೆ. ಅಭಿವೃದ್ಧಿಗೆ ಹಣ ಇಲ್ಲ, ಜನ ಛೀಮಾರಿ ಹಾಕ್ತಾರೆ. ಈ ಭ್ರಷ್ಟ ಸರ್ಕಾರ ಕಿತ್ತೊಗೆಯುವವರೆಗೆ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ನವರು ಗ್ಯಾರಂಟಿ ಭಾಗ್ಯಗಳನ್ನು ಚುನಾವಣೆಗಾಗಿ ಮಾತ್ರ ಕೊಟ್ಟಿದ್ದಾರೆ. ದಿನನಿತ್ಯ ದರ ಏರಿಕೆ ಮಾಡುತ್ತಿದ್ದಾರೆ. ದರಗಳು ಗಗನಕ್ಕೇರಿದೆ. ವಿಶೇಷ ಅನುದಾನಕ್ಕೆ ಶಾಸಕರು ಮನವಿ ಮಾಡಿದ್ದರೂ ನೀಡಿಲ್ಲ. ನಾವು ನೇಣುಹಾಕೋಬೇಕು ಅಂತ ಕಾಂಗ್ರೆಸ್ ಶಾಸಕರೇ ಹೇಳ್ತಾರೆ. ಭ್ರಷ್ಟಾಚಾರದಲ್ಲಿ ನಂಬರ್ 1 ಸ್ಥಾನವನ್ನ ಕಾಂಗ್ರೆಸ್ ಶಾಸಕರೇ ಕೊಡ್ತಾರೆ. ಇದು ಇಡೀ ರಾಜ್ಯದ ಜನತೆ ಹೋರಾಟ. ಕ್ಷೇತ್ರದಲ್ಲಿ ಮತ ಕೇಳೋದಕ್ಕೆ ಹೋಗದಂತೆ ಮಾಡಿದ್ದಾರೆ. ಬೆಲೆ ಏರಿಕೆ ವಿರುದ್ಧ ನಾವೆಲ್ಲಾ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.
ಬೆಲೆ ಏರಿಕೆ ಹೆಚ್ಚಾಗಿದೆ : ಮಾಜಿ ಶಾಸಕ ಹೆಚ್. ಕೆ. ಕುಮಾರಸ್ವಾಮಿ ಮಾತನಾಡಿ, ಗ್ಯಾರಂಟಿ ಯೋಜನೆಗಳಿಗೆ ಬಡವರ, ಪರಿಶಿಷ್ಟ ಜಾತಿ, ವರ್ಗದವರ ಹಣ ಬಳಕೆ ಮಾಡುತ್ತಿದ್ದಾರೆ. ಈ ಹಣ ಕೊಡಲು ಇವರೇ ಬೇಕಾ?. ಯಾವುದೇ ಮೂಲ ಸೌಲಭ್ಯ ಕೊಟ್ಟಿಲ್ಲ. ಪರಿಶಿಷ್ಟ ಜಾತಿ ಮತ್ತು ವರ್ಗದ ನಿಗಮಗಳಲ್ಲಿ ಹಗರಣ ಆಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ, ಬೋವಿ ನಿಗಮದಲ್ಲಿ ಅವ್ಯವಹಾರ ಆಗಿರುವುದು ಬಯಲಾಗಿದೆ. ಇನ್ನೇನು ಬೇಕು?. ಬೆಲೆ ಏರಿಕೆ ಹೆಚ್ಚಾಗಿದೆ. ಬೆಂಗಳೂರು ನಗರ ಗಾರ್ಬೇಜ್ ಸಿಟಿ ಆಗಿದೆ. ವಿದೇಶಿಗರು ಬೆಂಗಳೂರಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಇದನ್ನೂ ಓದಿ : ಸುಲಿಗೆಯೇ ಇವರ ಮೂಲ ಮಂತ್ರ, ದಪ್ಪ ಚರ್ಮದ ಸರ್ಕಾರಕ್ಕೆ ಬುದ್ಧಿ ಕಲಿಸುತ್ತೇವೆ: ನಿಖಿಲ್ ಕುಮಾರಸ್ವಾಮಿ - NIKHIL KUMARASWAMY