ಕಾರವಾರ: ಸೇನೆಯ ಬಗ್ಗೆ ಯಾರಾದರೂ ವಿರೋಧವಾಗಿ ಮಾತನಾಡಿದರೆ ಅದು ತಪ್ಪು. ನಮ್ಮ ಸೇನೆಯನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು. ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ನೀಡಿದ ಹೇಳಿಕೆ ಖಂಡಿಸಿದ ಹಿರಿಯರಾದ ಆರ್.ವಿ ದೇಶಪಾಂಡೆ, ಯಾರಾದರೂ ಸೇನೆ ಬಗ್ಗೆ ವಿರೋಧ ಮಾಡಿದ್ದರೇ ತಪ್ಪು. ನಾವು ಅವರ ಸಾಹಸವನ್ನು ಪ್ರಶಂಸಿಸಿ ಗೌರವ ಸಲ್ಲಿಸಿದ್ದೇವೆ ಎಂದರು.
ಶಾಂತಿಗೆ ಚ್ಯುತಿ ಬಂದಾಗ ನಮ್ಮ ಸೇನೆ ಸುಮ್ಮನಿರಲ್ಲ: ಪಾಕಿಸ್ತಾನ ಯುದ್ಧದಲ್ಲಿ ಸೋತಿದ್ದಾರೆ. ಅವರು ಹತಾಶರಾಗಿದ್ದಾರೆ. ಭಯೋತ್ಪಾದಕರನ್ನು ಪೋಷಿಸುತ್ತಿರುವ ಆ ರಾಷ್ಟ್ರ ಸುಧಾರಿಸಬೇಕಿದೆ. ಪಾಕಿಸ್ತಾನವೂ ಅಭಿವೃದ್ಧಿ ಹೊಂದಬೇಕು, ಅಲ್ಲಿನ ಜನರು ಸುಖವಾಗಿರಬೇಕು. ಭಾರತ-ಪಾಕಿಸ್ತಾನ ಸಂಬಂಧ ಉತ್ತಮವಾಗಿರಬೇಕು. ಆದರೆ, ಪ್ರೀತಿ, ವಿಶ್ವಾಸ ಮತ್ತು ಶಾಂತಿಗೆ ಚ್ಯುತಿ ಬಂದಾಗ ನಮ್ಮ ಸೈನಿಕರು ತಕ್ಕ ಉತ್ತರ ನೀಡುವುದು ಅನಿವಾರ್ಯವಾಗಲಿದೆ ಎಂದು ಆರ್ ವಿ ದೇಶಪಾಂಡೆ ಹೇಳಿದ್ದಾರೆ.
ಸರ್ಕಾರದ ಸಾಧನೆಗೆ ಅಭಿನಂದನೆ: ರಾಜ್ಯ ಸರ್ಕಾರ ಎರಡು ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಆಡಳಿತ, ಅಭಿವೃದ್ಧಿ ಹಾಗೂ ಕಾನೂನು - ಸುವ್ಯವಸ್ಥೆಗೆ ಸಂಬಂಧಿಸಿದ ಉತ್ತಮ ಕಾರ್ಯಗಳನ್ನು ಮಾಡಲಾಗಿದೆ ಎಂದು ದೇಶಪಾಂಡೆ ಹೇಳಿದರು. ಈ ಸಂದರ್ಭದಲ್ಲಿ ಸಿಎಂ ಸಿದ್ಧರಾಮಯ್ಯ ಮತ್ತು ಸಚಿವ ಸಂಪುಟದ ಸದಸ್ಯರಿಗೆ ನನ್ನ ಅಭಿನಂದನೆಗಳು ಎಂದು ಅವರು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಅವರ ಸಾಮರ್ಥ್ಯದಂತೆ ಕೆಲಸ ಮಾಡುತ್ತಿದ್ದಾರೆ: ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರನ್ನು ಏನು ಮಾಡಬೇಕು ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ. ಇದರ ಬಗ್ಗೆ ನಾನೇನೂ ಹೇಳುವುದಿಲ್ಲ ಎಂದರು. "ನಾನು 9 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದೇನೆ. ಆದರೆ, ಮಂತ್ರಿ ಪದವಿ ನೀಡಬೇಕೆಂದು ಕೇಳುವುದರಿಂದ ಗೌರವ ಬರುವುದಿಲ್ಲ. ಜಿಲ್ಲಾ ಸಚಿವರು ತಮ್ಮ ಸಾಮರ್ಥ್ಯದಂತೆ ಕೆಲಸ ಮಾಡುತ್ತಿದ್ದಾರೆ. ಜನರ ನಿರೀಕ್ಷೆಗಳನ್ನು ಪೂರೈಸಿದ್ದಾರೆಯೋ ಇಲ್ಲವೋ ಎಂಬುದನ್ನು ಜನರೇ ನಿರ್ಣಯಿಸಬೇಕು" ಎಂದರು.
ಇದನ್ನು ಓದಿ: ಗೃಹ ಲಕ್ಷ್ಮಿ ಯೋಜನೆಯ ಹಣ ಹಾಕಲು ಬಜೆಟ್ ಹೊಂದಿಸಬೇಕಿದೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಪ್ರವಾಸೋದ್ಯಮ ಅಭಿವೃದ್ಧಿಗೆ ಕರೆ: ಉತ್ತರಕನ್ನಡ ಜಿಲ್ಲೆಯ ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕು. ನಾನು ಸಚಿವರಾಗಿದ್ದಾಗ ರಾಕ್ ಗಾರ್ಡನ್ ಮತ್ತು ಇಕೋ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಿದ್ದೇನೆ. ಈಗ ಜಿಲ್ಲಾಧಿಕಾರಿಯೊಂದಿಗೆ ಈ ವಿಷಯದಲ್ಲಿ ಮಾತನಾಡಿದ್ದೇನೆ. ಈ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಅಪಾರ ಅವಕಾಶಗಳಿವೆ ಎಂದರು.
ಹಾಲಕ್ಕಿ ಒಕ್ಕಲಿಗರಿಗೆ ಎಸ್.ಟಿ.ಹಕ್ಕು: ಹಾಲಕ್ಕಿ ಒಕ್ಕಲಿಗರು, ಕುಣಬಿ ಮತ್ತು ಮರಾಠಾ ಸಮುದಾಯಕ್ಕೆ ಎಸ್.ಟಿ. ಹಕ್ಕು ನೀಡುವ ಬಗ್ಗೆ ಮತ್ತೆ ಮುಖ್ಯಮಂತ್ರಿಯೊಂದಿಗೆ ಮಾತನಾಡಿದ್ದೇನೆ. ಇದಕ್ಕಾಗಿ ಸಂಬಂಧಪಟ್ಟ ಇಲಾಖೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಹೇಳಿದ್ದೇನೆ. ಇದನ್ನು ಮಾಡಲು ನನಗೆ ಅಧಿಕಾರ ಇಲ್ಲದಿರಬಹುದು. ಅಧಿಕಾರ ಇಲ್ಲದಿದ್ದರೂ ಜನರ ಸೇವೆಗೆ ನಾನು ಸದಾ ಸಿದ್ಧ ಎಂದರು.
ಅಧಿಕಾರಕ್ಕಿಂತ ಕರ್ತವ್ಯ ಮುಖ್ಯ: "ಜೀವನ ಕ್ಷಣಿಕ. ಅಧಿಕಾರ ಎಷ್ಟು ಕ್ಷಣಿಕವಾದುದು ಎಂಬುದನ್ನು ಯೋಚಿಸಬೇಕು. ಅವಕಾಶ ಸಿಕ್ಕಾಗ ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು, ಅಧಿಕಾರದ ಹಂಬಲವಿರಬಾರದು" ಎಂದು ಮಾಜಿ ಸಚಿವ ದೇಶಪಾಂಡೆ ಹೇಳಿದರು.
ಇದನ್ನು ಓದಿ: ಗ್ರೇಟರ್ ಬೆಂಗಳೂರಿಗೆ ಮೀಸಲಾತಿ ಪ್ರಕಟಿಸಿ ಶೀಘ್ರದಲ್ಲೇ ಚುನಾವಣೆ ನಡೆಸುತ್ತೇವೆ: ಡಿಸಿಎಂ ಡಿಕೆಶಿ