ಬೆಂಗಳೂರು : ಇಂಧನ ದರ ಏರಿಕೆ, ಟೋಲ್ ಶುಲ್ಕ ಹೆಚ್ಚಳ ವಿರೋಧಿಸಿ ಲಾರಿ ಮಾಲೀಕರ ಸಂಘ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರ ಸೋಮವಾರ ಮಧ್ಯರಾತ್ರಿಯಿಂದ ಪ್ರಾರಂಭವಾಗಿದೆ. ಹೆದ್ದಾರಿಗಳ ಪಕ್ಕ, ಮಾರುಕಟ್ಟೆ, ಯಶವಂತಪುರದ ಟ್ರಕ್ ಟರ್ಮಿನಲ್ನಲ್ಲಿ ಲಾರಿಗಳು ಸಾಲು ಸಾಲಾಗಿ ನಿಂತಿದ್ದು, ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿವೆ. ಮಾರುಕಟ್ಟೆ ಮತ್ತಿತರ ಸ್ಥಳಗಳಿಗೆ ಅಗತ್ಯವಸ್ತುಗಳು, ಎಲೆಕ್ಟ್ರಾನಿಕ್ಸ್, ಗೂಡ್ಸ್ ಸಾಗಾಟ ಮಾಡುವ ಸುಮಾರು 6 ಲಕ್ಷ ಲಾರಿಗಳು ರಾಜ್ಯಾದ್ಯಂತ ಸಂಚಾರ ಸ್ಥಗಿತಗೊಳಿಸಿವೆ.
ಲಾರಿ ಮಾಲೀಕರ ಬೇಡಿಕೆಗಳೇನು? :
- ರಾಜ್ಯ ಸರ್ಕಾರ ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಆದೇಶವನ್ನ ಹಿಂಪಡೆಯಬೇಕು.
- ಎಫ್ಸಿ (ಫಿಟ್ನೆಸ್ ಸರ್ಟಿಫಿಕೇಟ್) ಶುಲ್ಕ ಏರಿಕೆ ಮಾಡಿರುವುದನ್ನು ಹಿಂಪಡೆಯಬೇಕು.
- ರಾಜ್ಯದ ಹೆದ್ದಾರಿಗಳಲ್ಲಿ ಟೋಲ್ಗಳಲ್ಲಿನ ಹಣ ವಸೂಲಿ ತಡೆಯಬೇಕು.
- ಗಡಿಗಳಲ್ಲಿ ಆರ್ಟಿಒ ಚೆಕ್ಪೋಸ್ಟ್ಗಳನ್ನು ತೆರವುಗೊಳಿಸಬೇಕು.
- ಗೂಡ್ಸ್ ವಾಹನಗಳಿಗೆ ಬೆಂಗಳೂರು ಪ್ರವೇಶಕ್ಕೆ ವಿಧಿಸಿರುವ ನಿರ್ಬಂಧ ಆದೇಶ ಹಿಂಪಡೆಯಬೇಕು.
- ಲಾರಿ ಚಾಲಕರ ಮೇಲಿನ ಹಲ್ಲೆ, ದೌರ್ಜನ್ಯಗಳನ್ನು ತಡೆಯಬೇಕು ಸೇರಿದಂತೆ ಇತರ ಬೇಡಿಕೆಗಳಿವೆ.
ಲಾರಿಗಳ ಮುಷ್ಕರದಿಂದ ತಕ್ಷಣಕ್ಕೆ ವ್ಯತ್ಯಯಗಳು ಆಗದಿದ್ದರೂ ಸಹ ಅನಿರ್ದಿಷ್ಟಾವಧಿಗೆ ಕರೆ ನೀಡಿರುವುದರಿಂದ 3-4 ದಿನಗಳಲ್ಲಿ ಮುಷ್ಕರದ ಬಿಸಿ ತಟ್ಟಬಹುದು. ಸರ್ಕಾರ ಮಾತುಕತೆಗೆ ಕರೆದರೆ ನಾವು ಸಿದ್ಧರಿದ್ದೇವೆ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಖಪ್ಪ ತಿಳಿಸಿದ್ದಾರೆ.
ಯಾವ ಸೇವೆಗಳು ಇರಲಿವೆ? :
- ಏರ್‌ಪೋರ್ಟ್ ಟ್ಯಾಕ್ಸಿ, ಫೈರ್ ಸರ್ವಿಸ್ ವಾಹನಗಳ ಓಡಾಟಕ್ಕೆ ಯಾವುದೇ ತೊಂದರೆಯಿಲ್ಲ.
- ಹಾಲು, ಔಷಧ, ತರಕಾರಿ, ಹಣ್ಣಿನ ಸಾಗಾಟ ಇರಲಿದೆ.
- ಅಕ್ಕಿ ಸಾಗಾಟ 50-50 ಎನ್ನಲಾಗಿದೆ.
- ಮೆಡಿಕಲ್ ಶಾಪ್, ಆಸ್ಪತ್ರೆ, ಆಂಬ್ಯುಲೆನ್ಸ್ ಸೇವೆಗಳಲ್ಲಿ ವ್ಯತ್ಯಯವಿಲ್ಲ.
ಯಾವ ಸೇವೆಗಳಲ್ಲಿ ವ್ಯತ್ಯಾಯ? :
- ಡೊಮೆಸ್ಟಿಕ್ ಗ್ಯಾಸ್ ಸರಬರಾಜಿನಲ್ಲಿ ವ್ಯತ್ಯಯ.
- ಧವಸ ಧಾನ್ಯ, ಸರಕು ಸಾಗಾಟದ ವಾಹನಗಳ ಸಂಚಾರದಲ್ಲಿ ವ್ಯತ್ಯಯ.
- ಅರ್ಥ್ ಮೂವಿಂಗ್, ಬೋರ್‌ವೆಲ್ ವಾಹನಗಳ ಲಭ್ಯತೆಯಲ್ಲಿ ವ್ಯತ್ಯಯ.
- ಪೆಟ್ರೋಲಿಯಂ ಮತ್ತಿತರ ಇಂಧನ ಉತ್ಪನ್ನಗಳ ಸಾಗಾಟದಲ್ಲಿ ವ್ಯತ್ಯಯ.
ಮುಷ್ಕರಕ್ಕೆ ಬೆಂಬಲ ನೀಡಿರುವ ಸಂಘಟನೆಗಳು ಯಾವು? :
- ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್.
- ಸೌತ್ ಇಂಡಿಯಾ ಮೋಟಾರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್.
- ಬೆಂಗಳೂರು ಸಿಟಿ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್.
- ಕರ್ನಾಟಕ ಗೂಡ್ಸ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್.
- ಬೆಂಗಳೂರು ಸಿಟಿ ಲೋಕಲ್ ಟ್ಯಾಕ್ಸಿ ಅಸೋಸಿಯೇಷನ್.
- ಎಲ್‌ಪಿಜಿ ಟ್ಯಾಂಕರ್ಸ್ ಅಸೋಸಿಯೇಷನ್.
- ಪೆಟ್ರೋಲ್ ಪಂಪ್ಸ್ ಅಸೋಸಿಯೇಷನ್.
- ಬೆಂಗಳೂರು ಟೂರಿಸ್ಟ್ ಟೆಂಪೋ ಓನರ್ಸ್ ಅಸೋಸಿಯೇಷನ್.
- ಕರ್ನಾಟಕ ಟ್ರಾನ್ಸ್‌ಪೋರ್ಟ್ ಮೋಟಾರ್ ಓನರ್ಸ್ ವೆಲ್ಫೇರ್ ಅಸೋಯೇಷನ್.
- ಆಲ್ ಡಿಸ್ಟ್ರಿಕ್ಟ್ ಲಾರಿ ಅಸೋಸಿಯೇಷನ್.
ಯಾರ ಬೆಂಬಲವಿಲ್ಲ? :
- ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್.
- ಎಪಿಎಂಸಿ ಲಾರಿ ಚಾಲಕರ ಸಂಘ.
- ಏರ್‌ಪೋರ್ಟ್ ಟ್ಯಾಕ್ಸಿ ಅಸೋಸಿಯೇಷನ್ (ನೈತಿಕ ಬೆಂಬಲ).
- ಎಪಿಎಂಸಿ ವರ್ತಕರ ಸಂಘ.
- ಮಾಗಡಿ ರೋಡ್ ಲಾರಿ ಡ್ರೈವರ್ಸ್ ಅಸೋಸಿಯೇಷನ್.
- ಯಶವಂತರಪುರ ಲಾರಿ ಡ್ರೈವರ್ಸ್ ಅಸೋಸಿಯೇಷನ್.
- ಬೊಮ್ಮಸಂದ್ರ ಲಾರಿ ಡ್ರೈವರ್ಸ್ ಅಸೋಸಿಯೇಷನ್.
- ದಾಸನಪುರ ಲಾರಿ ಓನರ್ಸ್ ಅಸೋಸಿಯೇಷನ್.
ಉಳಿದಂತೆ ಮುಷ್ಕರಕ್ಕೆ ಟ್ಯಾಕ್ಸಿ ಚಾಲಕರು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ, ಏರ್‌ಪೋರ್ಟ್ ಟ್ಯಾಕ್ಸಿ ಚಾಲಕರಿಂದ ಕೇವಲ ನೈತಿಕ ಬೆಂಬಲ ವ್ಯಕ್ತವಾಗಿರುವುದರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ಗೆ ಎಂದಿನಂತೆ ಟ್ಯಾಕ್ಸಿಗಳು ಸಂಚರಿಸುತ್ತಿವೆ. ಉಳಿದಂತೆ ನಗರದಲ್ಲಿ ಒಲಾ, ಊಬರ್, ರ್‍ಯಾಪಿಡೋ ಟ್ಯಾಕ್ಸಿಗಳ ಸಂಚಾರದಲ್ಲಿ ವ್ಯತ್ಯಯ ಕಂಡು ಬಂದಿಲ್ಲ.
ಇದನ್ನೂ ಓದಿ: ಡೀಸೆಲ್ ಬೆಲೆ ಏರಿಕೆ, ಟೋಲ್ ಶುಲ್ಕ ಹೆಚ್ಚಳ ಖಂಡಿಸಿ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಆರಂಭ - LORRY STRIKE