ವಿಶೇಷ ವರದಿ: ಹೆಚ್.ಬಿ.ಗಡ್ಡದ
ಹುಬ್ಬಳ್ಳಿ: ಕುಡಿದ ಮತ್ತಿನಲ್ಲೋ, ಮಾದಕ ವ್ಯಸನದಿಂದಲೋ ಜಗಳ ನಡೆದು ಹತ್ಯೆಯಾಗುವುದನ್ನು ನಾವು ಕೇಳಿದ್ದೇವೆ. ಆದ್ರೆ ಕಳೆದ ಎರಡು ದಿನಗಳ ಹಿಂದೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಬಾಲಕನೊಬ್ಬ ತನಗಿಂತ ವಯಸ್ಸಿನಲ್ಲಿ ದೊಡ್ಡವನಾದ ಮತ್ತೋರ್ವ ಬಾಲಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ!.
ಈ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪುಟ್ಟ ಪುಟ್ಟ ಮಕ್ಕಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಕೊಲೆ ಮಾಡುವ ಹಂತಕ್ಕೆ ಹೋಗುವುದೇಕೆ?, ಮಕ್ಕಳ ಮನಸ್ಥಿತಿಯಲ್ಲಿ ಇಂಥ ಕ್ರೌರ್ಯ ಮೂಡಲು ಕಾರಣವೇನು? ಇದರಲ್ಲಿ ಪೋಷಕರ ಪಾತ್ರವೇನು? ಎಂಬುದಕ್ಕೆ ಉತ್ತರಗಳನ್ನು ಕಂಡುಹಿಡಿದು ಮಕ್ಕಳ ಮನಪರಿವರ್ತನೆ ಹೇಗೆ ಎಂಬ ಬಗ್ಗೆ ಮನೋವೈದ್ಯರು ಹಾಗೂ ಪೊಲೀಸ್ ಅಧಿಕಾರಿಗಳು ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿ ರವೀಶ್ ಸಿ.ಆರ್ ಅವರು ಪ್ರತಿಕ್ರಿಯಿಸಿ, "ನನ್ನ 32-33 ವರ್ಷದ ವೃತ್ತಿಜೀವನದಲ್ಲಿ ಇದೊಂದು ಪ್ರಪ್ರಥಮ ಘಟನೆ. ನಾನು ಕಂಡ ಅತ್ಯಂತ ಬೇಸರದ ಘಟನೆ. ಮಕ್ಕಳನ್ನು ಉತ್ತಮವಾಗಿ ಬೆಳೆಸುವುದು ಪ್ರತೀ ತಂದೆ ತಾಯಿಯ ಕಾಳಜಿ ಹಾಗೂ ಕರ್ತವ್ಯ. "ಬೇವಿನ ಬೀಜಕ್ಕೆ ಬೆಲ್ಲದ ಕಟ್ಟೆ ಕಟ್ಟಿ, ಹಸುವಿನ ಹಾಲನೆರೆದು, ಜೇನು ತುಪ್ಪದ ಮಳೆ ಗರೆದರೆ, ವಿಷವಾಗಬಲದೇ ಹೊರತು ಸಿಹಿಯಾಗಲ್ಲದೆೇ" ಎಂದು ಬಸವಣ್ಣನವರ ವಚನ ಉದಾಹರಿಸಿ ಮಗುವಿನ ಏಳು, ಬೀಳು, ಉನ್ನತಿ ಹಾಗೂ ಅವನತಿ ಎಲ್ಲವೂ ಪೋಷಕರ ಮೇಲಿದೆ" ಎಂದರು.
ಮುಂದುವರೆದು ಮಾತನಾಡುತ್ತಾ, "ಪೋಷಕರು ಮಕ್ಕಳೆದುರು ನಡೆದುಕೊಳ್ಳುವ ರೀತಿ ಮಕ್ಕಳ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುತ್ತದೆ. ಅದರ ಜೊತೆಗೆ ಮೊಬೈಲ್ ಹಾಗೂ ಟಿವಿಗಳಲ್ಲಿ, ಚಲನಚಿತ್ರಗಳಲ್ಲಿ ಕ್ರೈಂ ವೈಭವೀಕರಣ ಮುಗ್ದ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ. ಮಕ್ಕಳ ಮನಸ್ಸು ಬಳ್ಳಿಯಂತೆ. ಹೀಗಾಗಿ ಪೋಷಕರು ಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಮಕ್ಕಳ ದಿನನಿತ್ಯದ ಚಲನವಲನ, ನಡವಳಿಕೆ, ಅಸಹಜ ವ್ಯಕ್ತಿತ್ವವನ್ನು ಗುರುತಿಸಿ ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕು" ಎಂದು ಅವರು ಸಲಹೆ ನೀಡಿದರು.
"ಅಷ್ಟೇ ಅಲ್ಲ, ಮಕ್ಕಳಲ್ಲಿ ಪೋಷಕರು ತಾಮಸ ಗುಣಗಳನ್ನು ಕಡಿಮೆ ಮಾಡಬೇಕು. ಮಕ್ಕಳಿಗೆ ನೈತಿಕ ಪಾಠಗಳನ್ನು ಹೇಳಿಕೊಡಬೇಕು. ಪಬ್ಜಿ, ಬ್ಲೂಗೇಮ್ಸ್‌ನಂತಹ ಆಟಗಳು ಮಕ್ಕಳ ಮನಸ್ಸಿನಲ್ಲಿ ಕ್ರೌರ್ಯ ಹುಟ್ಟು ಹಾಕುತ್ತವೆ. ಮಕ್ಕಳ ಕುರಿತು ವಿಶೇಷ ಕಾಳಜಿವಹಿಸಿ ಮೊಬೈಲ್, ಲ್ಯಾಪ್‌ಟಾಪ್‌ಗಳಲ್ಲಿ ಏನು ನೋಡುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಕಾಳಜಿ ವಹಿಸಬೇಕು. ಸಂಬಂಧಗಳು, ಭ್ರಾತೃತ್ವದ ಬೆಲೆ ಏನು ಎಂಬುದನ್ನು ತಿಳಿಸಿಕೊಡಬೇಕು. ಮಕ್ಕಳು ಸೋಲಬಾರದು ಎಂಬುದನ್ನು ಕಲಿಸಿಕೊಡಬೇಕೇ ಹೊರತು ಎಲ್ಲಾ ಕಡೆ ಗೆದ್ದು ಬರಲಿ ಎಂಬ ಆಸೆಯನ್ನು ಪೋಷಕರು ಕೈಬಿಡಬೇಕು. ಸಮಾಜಕ್ಕೆ ಮಕ್ಕಳನ್ನು ಉತ್ತಮ ಆಸ್ತಿಯನ್ನಾಗಿ ರೂಪಿಸುವುದು ಪೋಷಕರ ಕೈಯಲ್ಲಿದೆ" ಎಂದು ಅಭಿಪ್ರಾಯಪಟ್ಟರು.
ಈ ಕುರಿತಂತೆ ಮನೋವೈದ್ಯರಾದ ಡಾ.ಶಿವಾನಂದ ಹಿರೇಮಠ ಅವರು ಪ್ರತಿಕ್ರಿಯಿಸಿ, "ಮೊನ್ನೆ ನಡೆದ ಘಟನೆ ದಿಗ್ಬ್ರಮೆ ಮೂಡಿಸಿತು. ಇತ್ತೀಚೆಗೆ ಮಕ್ಕಳಲ್ಲಿ ಮುಗ್ದತೆ ಕಡಿಮೆಯಾಗುತ್ತಿದೆ. ಪೋಷಕರು ಮಕ್ಕಳ ಮೇಲೆ ನಿಗಾವಹಿಸದೇ ಇರುವುದು, ಸಾಮಾಜಿಕ ಜಾಲತಾಣ, ಚಲನಚಿತ್ರಗಳಲ್ಲಿ ಹಿಂಸೆಯನ್ನು ವೈಭವೀಕರಿಸುವುದರಿಂದ ಮಕ್ಕಳಿಗೆ ತಿಳುವಳಿಕೆ ಇಲ್ಲದಿರುವುದರಿಂದ ಅಲ್ಲಿ ತೋರಿಸುವುದೆಲ್ಲವೂ ಸತ್ಯವೇ ಎಂದು ತಿಳಿದು ಇಂಥ ಪ್ರವೃತ್ತಿಗಳನ್ನು ಬೆಳೆಸಿಕೊಳ್ಳುತ್ತಾರೆ. ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ತಮಗಿಂತ ಹಿರಿಯರು ಅಂತಹ ಪ್ರವೃತ್ತಿಯಲ್ಲಿ ತೊಡಗಿದ್ದರೆ ಅವರನ್ನೇ ಮಕ್ಕಳು ಅನುಕರಿಸುತ್ತಾರೆ. ಮನೆಯ ವಾತಾವರಣ, ತಂದೆ-ತಾಯಿಯ ನಡುವಿನ ಜಗಳ ಇಂಥವೆಲ್ಲ ಅಹಿತಕರ ಘಟನೆನೆಗಳು ನಡೆಯಲು ಪ್ರಮುಖ ಕಾರಣಗಳಾಗಿವೆ" ಎಂದು ವಿವರಿಸಿದರು.
ಹಾಗಾದರೆ, ಪೋಷಕರ ಪಾತ್ರವೇನು?:
- ಅಹಿತಕರ ಘಟನೆಗಳು ನಡೆಯುವುದನ್ನು ತಡೆಯುವಲ್ಲಿ ಪಾಲಕರು ಹಾಗೂ ಪೋಷಕರ ಪಾತ್ರ ಪ್ರಮುಖವಾಗಿದೆ. ಮಕ್ಕಳ ಜೊತೆ ವಿಶ್ವಾಸ ಹಾಗೂ ಪ್ರೀತಿಯಿಂದ ನಡೆದುಕೊಳ್ಳಬೇಕು. ವಿಶೇಷ ನಿಗಾ ವಹಿಸಿ ಅವರು ಯಾರ ಜೊತೆ ಬೆರೆಯುತ್ತಿದ್ದಾರೆ, ಅವರ ವರ್ತನೆಗಳೇನು ಎಂಬ ಬಗ್ಗೆ ತಿಳಿದುಕೊಳ್ಳುವುದು ಅವಶ್ಯವಾಗಿದೆ.
- ಮನೆಯಲ್ಲಿ ಮಕ್ಕಳ ಹಿಂಸಾತ್ಮಕ ಪ್ರವೃತ್ತಿಗಳನ್ನು ಗಮನಸಬೇಕು. ಚಿಕ್ಕ ಮಕ್ಕಳು ತಮಗಿಂತ ಹಿರಿಯರಿಗೆ ಹೊಡೆಯುವುದು, ಬಡಿಯುವುದು ಮಾಡುತ್ತಿದ್ದರೆ ಸೂಕ್ಷ್ಮವಾಗಿ ಗಮನಿಸಿ ಕೌನ್ಸಲಿಂಗ್ ಮಾಡಿಸಬೇಕು. ಕೌನ್ಸಲಿಂಗ್, ಥೆರಪಿ ಮೂಲಕ ಸಮಸ್ಯೆ ಬಗೆಹರಿಸಬೇಕು. ಆನ್‌ಲೈನ್ ಗೇಮ್ಸ್‌ಗಳಲ್ಲಿ ಹಿಂಸಾತ್ಮಕ ಪ್ರವೃತ್ತಿ ಹೆಚ್ಚಾಗಿದ್ದು, ಸರ್ಕಾರ ಹಾಗೂ ಪೋಷಕರು ಅವುಗಳಿಂದ ದೂರುವಿಡುವ ಕೆಲಸ ಮಾಡಬೇಕಿದೆ.
- ತಂದೆ ಕುಟುಂಬದ ರೋಲ್ ಮಾಡೆಲ್ ಆಗಿದ್ದು, ಉತ್ತಮ ವರ್ತನೆ ಹೊಂದಿರಬೇಕು. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಕೌಟುಂಬಿಕ ಸೌಹಾರ್ದತೆ ಇರಬೇಕು. ತಂದೆ ಮಕ್ಕಳಿಗಾಗಿ ಸಮಯ ಮೀಸಲಿಟ್ಟು ಮಕ್ಕಳಲ್ಲಿ ಬಾಂಧವ್ಯ ಗಟ್ಟಿಗೊಳಿಸುವ ಮೂಲಕ ಇಂಥ ಘಟನೆಗಳು ನಡೆಯುವುದನ್ನು ತಡೆಗಟ್ಟಬಹುದು ಎಂಬುದು ತಜ್ಞರ ಸಲಹೆ.