ಆನೇಕಲ್, ಬೆಂಗಳೂರು: ಯುವಕರ ಗುಂಪೊಂದು ಯುವತಿಯೊಬ್ಬರನ್ನು ಅಡ್ಡಗಟ್ಟಿ ಭಾನುವಾರ ಕಿರುಕುಳ ನೀಡಿದೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲ ಈ ವಿಚಾರವಾಗಿ ಎರಡು ಗುಂಪಿನ ನಡುವೆ ಗಲಾಟೆಯಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಪರ - ವಿರೋಧವಾಗಿ ಎರಡೂ ಬಣಗಳಿಂದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.
ಏನಿದು ಘಟನೆ: ಭಾನುವಾರ ಬ್ಯೂಟಿಷಿಯನ್ ತಮ್ಮ ಮನೆಯಿಂದ ಅಂಗಡಿಗೆ ತೆರಳುವ ಸಂದರ್ಭದಲ್ಲಿ ಅದೇ ಬಡಾವಣೆಯ ನಿವಾಸಿ ಮತ್ತವನ ಸ್ನೇಹಿತರು ಅಶ್ಲೀಲವಾಗಿ ಮಾತನಾಡಿ ಚುಡಾಯಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಮ್ಮನ್ನು ಸ್ಥಳೀಯರು ಹಾಗೂ ಸ್ನೇಹಿತರು ಬಂದು ತನ್ನನ್ನು ರಕ್ಷಣೆ ಮಾಡಿದರು. ಆದರೆ ಯುವಕರ ಗುಂಪು ಸ್ಥಳೀಯರ ಮೇಲೆ ಹಲ್ಲೆ ನಡೆಸಿದೆ ಎಂದು ಯುವತಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಪ್ರತಿ ದೂರು ನೀಡಿದ ಆರೋಪಿಯೊಬ್ಬರ ಪತ್ನಿ: ಮಹಿಳೆ ನೀಡಿದ್ದ ದೂರಿನಲ್ಲಿರುವ ಆರೋಪಿಯೊಬ್ಬರ ಪತ್ನಿ ಯುವತಿ ವಿರುದ್ಧ ದೂರು ನೀಡಿದ್ದಾರೆ. ಯುವತಿ ಹಾಗೂ ಆಕೆಯ ಸ್ನೇಹಿತರು ಮನೆಗೆ ನುಗ್ಗಿ ರಾಡು ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆಂದು ಪ್ರತಿ ದೂರಿನಲ್ಲಿ ಆರೋಪಿಸಲಾಗಿದೆ. ಪೊಲೀಸರು ಎರಡು ಕಡೆಯ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಘಟನೆಯ ಮಾಹಿತಿಯನ್ನು ಪಡೆಯಲು ಪ್ರಾಥಮಿಕ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ: ರಾಜು ಕಾಗೆ ಹೇಳಿದ್ದರಲ್ಲಿ ಸತ್ಯಾಂಶವಿದೆ: ಬೆಳಗಾವಿಯಲ್ಲಿ ಸಂಸದ ಜಗದೀಶ ಶೆಟ್ಟರ್ ಹೇಳಿಕೆ