ಬೆಂಗಳೂರು: ಇನ್ನು ಮುಂದೆ ಆಸ್ತಿ ನೋಂದಾಣಿಗೆ ಇ-ಸಹಿ ಕಡ್ಡಾಯವಾಗಿರಲಿದೆ. ನಾಳೆಯಿಂದ (ಮೇ 26) ಆಸ್ತಿ ಅಥವಾ ಇತರ ನೋಂದಣಿ ಪ್ರಕ್ರಿಯೆಗಳಿಗೆ ವಿದ್ಯುನ್ಮಾನ ಸಹಿ ಕಡ್ಡಾಯವಾಗಿದೆ.
ಈ ನಿಟ್ಟಿನಲ್ಲಿ ಕರ್ನಾಟಕ ಸ್ಟಾಂಪು ತಿದ್ದುಪಡಿ ಕಾಯ್ದೆ ಜಾರಿಗೊಳಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಅದರಂತೆ ಯಾವುದೇ ನೋಂದಣಿ ಪ್ರಕ್ರಿಯೆಗಳು ಡಿಜಿಟಲೀಕರಣವಾಗಲಿವೆ. ಸೇಲ್ ಡೀಡ್ ಸೇರಿ ಎಲ್ಲ ಮಾದರಿಯ ಡೀಡ್‌ಗಳನ್ನು ಆರಂಭದಿಂದ ಅಂತ್ಯದ ಪ್ರಕ್ರಿಯೆವರೆಗೂ ಡಿಜಿಟಲೈಸ್ ಮಾಡಲು ಈ ಕಾಯ್ದೆಯಲ್ಲಿ ನಿಯಮ ರೂಪಿಸಲಾಗಿದೆ.
ಡಿಜಿಟಲ್ ಇ-ಸ್ಟಾಂಪುಗಳು ಕಡ್ಡಾಯವಾಗಿರಲಿದೆ. ಇದರಿಂದ ಸ್ಟಾಂಪುಗಳ ದುರುಪಯೋಗ ಮತ್ತು ಸೋರಿಕೆ ತಡೆಯಲು ಅನುಕೂಲವಾಗಲಿದೆ. ಬ್ಯಾಂಕ್ ಚಲನ್‌ಗಳ ಮೂಲಕ ಸ್ಟಾಂಪುಗಳ ದುರುಪಯೋಗ ತಡೆಯಲು ಇದು ಸಹಕಾರಿಯಾಗಲಿದೆ. ವಿದ್ಯುನ್ಮಾನ ಸಹಿಗಳಿಗೆ ಕಾನೂನಾತ್ಮಕ ಬೆಂಬಲ ನೀಡಲಾಗಿದೆ. ವಿದ್ಯನ್ಮಾನ ವಿಧಾನಗಳ ಮೂಲಕ ಸ್ಟಾಂಪ್ ಶುಲ್ಕ ಪಾವತಿಸಬೇಕಾಗಿದೆ.
ಸಿಬ್ಬಂದಿ ಮೂಲಕ ಸ್ಟಾಂಪ್ ವಿತರಣೆಗೆ ಸಂಪೂರ್ಣ ತಡೆ ಬೀಳಲಿದೆ. ಡಿಜಿಟಲ್ ಸಹಿ ದುರ್ಬಳಕೆಯಾಗದಂತೆ ಜಿಲ್ಲಾಧಿಕಾರಿ ಅಥವಾ ಸಕ್ಷಮ ಪ್ರಾಧಿಕಾರದ ಅಧಿಕಾರಿಯ ಸಹಿಯನ್ನು ಆಧಾರ್‌ಗೆ ಜೋಡಣೆ ಮಾಡಲಾಗುತ್ತದೆ. ಸಹಿ ದೃಢೀಕರಣಗೊಂಡರೆ ಮಾತ್ರ ಸಹಿ ಸಾಧ್ಯ. ಡಿಜಿಟಲ್ ಸಹಿಯಲ್ಲಿ ಬಯೊಮೆಟ್ರಿಕ್ ಕೂಡ ಇರಲಿದೆ.
ಓದಿ: ಅಕ್ರಮವಾಗಿ ಆಸ್ತಿ ಮಾರಾಟ ಮಾಡುವವರಿಗೆ ಬ್ರೇಕ್!: ದಸ್ತಾವೇಜು ನೋಂದಣಿಗೆ ಆಧಾರ್ ಕಡ್ಡಾಯ, ದೃಢೀಕರಣ ಮಾಡುವ ವಿವರ ಹೀಗಿದೆ