ಬೆಂಗಳೂರು: ನೂತನ ಪೊಲೀಸ್ ಆಯುಕ್ತರಾಗಿ ನೇಮಕವಾಗಿ ಅಧಿಕಾರ ಸ್ವೀಕರಿಸುವ ಸೀಮಂತ್ ಕುಮಾರ್ ಸಿಂಗ್, ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಧೈರ್ಯ ತುಂಬಿದ್ದಾರೆ. ಸರಿಯಾಗಿ ಕೆಲಸ ಮಾಡಿದರೆ ನಿಮಗೆ ತೊಂದರೆಯಾಗುವುದಿಲ್ಲ ಎಂದು ಅಭಯ ನೀಡಿದ್ಧಾರೆ.
ಅಮಾನತುಗೊಂಡ ಬಿ.ದಯಾನಂದ್ ಅವರ ಜಾಗಕ್ಕೆ ಸೀಮಂತ್ ಕುಮಾರ್ ಅವರನ್ನು ಸರ್ಕಾರ ನೇಮಿಸಿದ್ದು, ಈಗಾಗಲೇ ಪದಗ್ರಹಣ ಮಾಡಿದ್ದಾರೆ.
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಕಮಿಷನರ್, "ನಿನ್ನೆ ನಗರ ಪೊಲೀಸ್ ಆಯುಕ್ತನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನೈಟ್ ರೌಂಡ್ಸ್ ಹೋಗಿ ಪರಿಶೀಲನೆ ನಡೆಸಿದ್ದೇನೆ. ಚಾರ್ಜ್ ತೆಗೆದುಕೊಳ್ಳುವ ಮುನ್ನವೇ ನಮ್ಮ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಪ್ರಕರಣ ದಾಖಲಿಸಿ ಕೆಲವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ಧಾರೆ. ಪ್ರಕರಣದ ಹೆಚ್ಚಿನ ವಿವರಗಳು ಇಷ್ಟು ಬೇಗ ನೀಡುವುದು ಸರಿಯಲ್ಲ. ಸಮಗ್ರ ವಿಚಾರಣೆ ನಡೆಸಿದ ಬಳಿಕ ಮಾಹಿತಿ ನೀಡಲಾಗುವುದು" ಎಂದರು.
"ಈ ಹಿಂದೆ ಬೆಂಗಳೂರು ನಗರ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ನನ್ನ ನೇತೃತ್ವದಲ್ಲಿ ಒಳ್ಳೆಯ ಕೆಲಸ ಮಾಡಲಿದ್ಧಾರೆ ಎಂಬ ನಂಬಿಕೆಯಿದೆ. ಹಿಂದಿನಿಂದಲೂ ಸಿಸ್ಟಮ್ಯಾಟಿಕ್ ಆಗಿ ನಗರ ಪೊಲೀಸ್ ಇಲಾಖೆಯಲ್ಲಿ ಕೆಲಸ ನಡೆಯುತ್ತಿದೆ. ಕೆಲವೊಮ್ಮೆ ಸವಾಲಿನ ಸ್ಥಿತಿ ಎದುರಾದಾಗ ಅದನ್ನು ಸ್ವೀಕರಿಸಿ ಕೆಲಸ ಮಾಡಬೇಕಿದೆ. ಜನಸ್ನೇಹಿ ರೀತಿ ಕೆಲಸ ಮಾಡಿದರೆ ನಿಮಗೆ ಏನು ಆಗುವುದಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ" ಎಂದು ತಿಳಿಸಿದರು.
ಇದನ್ನೂ ಓದಿ: ರಾತ್ರೋರಾತ್ರಿ ಬೆಂಗಳೂರು ಪೊಲೀಸ್ ಆಯುಕ್ತರಾಗಿ ಸೀಮಂತ್ ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ