ಆನೇಕಲ್(ಬೆಂಗಳೂರು): ಬೇಸಿಗೆ ಮುಗಿಯುತ್ತಿದ್ದರೂ ಮಧ್ಯಾಹ್ನದ ಸುಡುಬಿಸಿಲು ನೆತ್ತಿಗೇರಿ ಕಾಡುವ ಸಮಯದಲ್ಲಿ ಮಾತು ಬರದ ಮೂಕ ಜೀವಿಗಳಿಗೆ ತಂಪಾಗಿಡಲು ವಿವಿಧ ತಣ್ಣನೆಯ ಆಹಾರಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನದ ಮೃಗಾಲಯದಲ್ಲಿ ನೀಡಲಾಗುತ್ತಿದೆ.
ಒಂದು ಕಡೆ ಐಸ್ ಕ್ಯಾಂಡಿ ತಿನ್ನುತ್ತಿರುವ ಲಂಗೂರ್ ಕೋತಿ, ಮತ್ತೊಂದು ಕಡೆ ತಂಪಾದ ಕಲ್ಲಂಗಡಿ ಹಣ್ಣು ಸವಿಯುತ್ತಿರುವ ಕರಡಿ ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ. ಬೇಸಿಗೆಯ ಶಾಖ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೃಗಾಲಯದ ಪ್ರಾಣಿಗಳು ಬಿರು ಬಿಸಿಲಿನ ತಾಪಮಾನಕ್ಕೆ ಕಂಗಾಲಾಗಿದ್ದವು. ಹೀಗಾಗಿ ಮೃಗಾಲಯದ ಅಧಿಕಾರಿಗಳು ಮಧ್ಯಾಹ್ನ ಸಮಯದಲ್ಲಿ ಪ್ರಾಣಿಗಳಿಗೆ ತಂಪಾದ ವಾತಾವರಣ ನಿರ್ಮಿಸಿಕೊಡುವ ಜೊತೆಗೆ ಮಂಜುಗಡ್ಡೆ ಮಾದರಿ ಆಹಾರವನ್ನು ಪ್ರಾಣಿಗಳಿಗೆ ನೀಡಲಾಗುತ್ತಿದೆ.
ಈ ಎಲ್ಲ ಪ್ರಾಣಿಗಳಿಗೆ ಆಹಾರ; ಮೃಗಾಲಯದಲ್ಲಿರುವ ಕರಡಿ, ಹಿಪೋಪೊಟಮಸ್, ಆನೆ, ಜಿರಾಫೆ, ಜಿಬ್ರಾ, ಕೋತಿ, ಅಳಿಲು, ಸೇರಿದಂತೆ ಸಸ್ಯಹಾರಿ ಪ್ರಾಣಿಗಳಿಗೆ ಆಹಾರವನ್ನು ಫ್ರೀಜ್ ಮಾಡಿ ನೀಡುತ್ತಿದ್ದು ಪ್ರಾಣಿಗಳು ಖುಷಿಖುಷಿಯಾಗಿ ತಮ್ಮ ಆಹಾರವನ್ನು ಸೇವನೆ ಮಾಡುತ್ತಿವೆ.

ಕೆಲವು ಪ್ರಾಣಿಗಳಿಗೆ ಸ್ಪಿಂಕ್ಲರ್ ಅಳವಡಿಕೆ: ಇನ್ನೂ ಕೆಲವು ಪ್ರಾಣಿಗಳ ಪಂಜರದಲ್ಲಿ ಬೇಸಿಗೆಯ ತಾಪಮಾನ ಕಡಿಮೆ ಮಾಡಲು ಸ್ಪ್ರಿಂಕ್ಲರ್ ಅಳವಡಿಕೆ ಮಾಡಲಾಗಿದೆ. ಪಂಜರದಲ್ಲಿ ಸ್ಪ್ರಿಂಕ್ಲರ್ ಮೂಲಕ ನೀರು ಸಿಂಪಡನೆ ಮಾಡುತ್ತಿದ್ದು ಇದರಿಂದ ಬೇಸಿಗೆಯ ತಾಪಮಾನ ಕಡಿಮೆಯಾಗಲಿದೆ. ಇನ್ನು ಆನೆ, ಹುಲಿ, ಚಿರತೆ, ಸಿಂಹ ಸೇರಿದಂತೆ ದೊಡ್ಡ ಪ್ರಾಣಿಗಳಿಗೆ ಪಂಜರಗಳಲ್ಲೇ ನೀರಿನ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ. ಮಧ್ಯಾಹ್ನದ ಸಮಯದಲ್ಲಿ ಪ್ರಾಣಿಗಳು ನೀರಿನಲ್ಲಿ ಕುಳಿತುಕೊಂಡು ತಮ್ಮ ದಣಿವನ್ನು ನೀಗಿಸಿಕೊಳ್ಳುತ್ತಿವೆ.

ಪ್ರವಾಸಿಗರ ಅನಿಸಿಕೆ ಹೀಗಿದೆ; ಈ ಕುರಿತು ಮಾತನಾಡಿದ ಪ್ರವಾಸಿಗ ರಂಗನಾಥ್, "ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಬೇಸಿಗೆ ಸಮಯದಲ್ಲಿ ಪ್ರಾಣಿಗಳಿಗೆ ತಂಪಾದ ಆಹಾರವನ್ನು ನೀಡುತ್ತಿರುವುದು ನಿಜಕ್ಕೂ ಪ್ರಶಂಸನೀಯ. ತಂಪಾದ ಆಹಾರವನ್ನು ಪ್ರಾಣಿಗಳು ಖುಷಿ ಖುಷಿಯಿಂದ ಸವಿಯುತ್ತಿರುವ ದೃಶ್ಯಗಳು ನಿಜಕ್ಕೂ ಆಹ್ಲಾದವನ್ನು ಉಂಟು ಮಾಡುತ್ತಿವೆ" ಎಂದರು.

ಮತ್ತೊಬ್ಬ ಪ್ರವಾಸಿಗ ಪುನೀತ್ ಮೊದಲ ಬಾರಿಗೆ ಪ್ರಾಣಿಗಳು ಐಸ್ ಕ್ಯಾಂಡಿಯನ್ನು ಸವಿಯುತ್ತಿರುವ ದೃಶ್ಯ ನೋಡಿದೆ. ಫ್ರೀಜ್ ಮಾಡಿರುವ ಆಹಾರವನ್ನು ಪ್ರಾಣಿಗಳು ಇಷ್ಟಪಟ್ಟು ತಿನ್ನುತ್ತಿವೆ. ಪ್ರಾಣಿಗಳಿಗೆ ಬೇಸಿಗೆಯಲ್ಲಿ ವಿಶೇಷ ಆರೈಕೆ ಮಾಡುತ್ತಿರುವ ಮೃಗಾಲಯದ ಸಿಬ್ಬಂದಿಗಳಿಗೆ ಧನ್ಯವಾದ ಅರ್ಪಿಸಿದರು.

ಒಟ್ಟಿನಲ್ಲಿ ಬೇಸಿಗೆಯ ನಡುವೆ ಮೃಗಾಲಯದಲ್ಲಿ ಪ್ರಾಣಿಗಳಿಗೆ ತಂಪಾದ ವಾತಾವರಣವನ್ನು ನಿರ್ಮಾಣ ಮಾಡಿಕೊಡುವ ಮೂಲಕ ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರಾಣಿಗಳ ಆರೈಕೆ ಮಾಡುತ್ತಿದೆ. ಇದು ಎಲ್ಲ ಮೃಗಾಲಯಗಳಲ್ಲಿ ಅನುಸರಿಸಿದರೆ ಪ್ರಾಣಿಗಳಿಗೆ ಬೇಸಿಗೆಯಲ್ಲಿ ಕೊಂಚ ಮಟ್ಟಿಗೆ ಅನುಕೂಲಕರವಾಗಲಿದೆ ಎಂಬುದು ನಮ್ಮ ನಂಬಿಕೆ.
ಇದನ್ನೂ ಓದಿ: ಬನ್ನೇರುಘಟ್ಟ ಜೈವಿಕ ಉದ್ಯಾನವನ ವೀಕ್ಷಣೆಗೆ ಆನ್ಲೈನ್ ಟಿಕೆಟ್ ಬುಕ್ ಮಾಡುವಾಗ ಎಚ್ಚರ!