ಮೈಸೂರು: ನನಗೆ 75 ವಯಸ್ಸಾಗಿದೆ. ಯುವಕರಿಗೆ ಅವಕಾಶ ಸಿಗಬೇಕು, ಆ ದೃಷ್ಟಿಯಿಂದ ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ. ಆದರೆ, ಸಹಕಾರ ಕ್ಷೇತ್ರ ಹಾಗೂ ರಾಜಕಾರಣದಲ್ಲಿ ಸಕ್ರಿಯನಾಗಿರುವೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಪ್ರಕಟಿಸಿದರು.
ಹುಣಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಟ್ಟಭದ್ರರ ಹಿಡಿತದಿಂದ ಸಹಕಾರ ಕ್ಷೇತ್ರ ಮುಕ್ತಕ್ಕೆ ಕ್ರಮ ಕೈಗೊಳ್ಳಲಾಗುವುದು. ಜನರ ನಿರೀಕ್ಷೆಗೆ ತಕ್ಕಂತೆ ಎರಡೂ ಸದನಗಳ ಒಪ್ಪಿಗೆ ಪಡೆದು ತಿದ್ದುಪಡಿ ತಂದು ರಾಜ್ಯಪಾಲರ ಅಂಕಿತಕ್ಕೆ ಕಡತ ಕಳುಹಿಸಿದ್ದರೂ ಕೇಂದ್ರಕ್ಕೆ ಕಳುಹಿಸುವಂತೆ ಸೂಚಿಸಿದ್ದಾರೆ. ಆದರೆ, ಈ ತಿದ್ದುಪಡಿ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಕೇಂದ್ರಕ್ಕೆ ಕಳುಹಿಸುವ ಅವಶ್ಯಕತೆ ಇಲ್ಲ. ಈ ಬಗ್ಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಎಂಡಿಸಿಸಿ ಸೇರಿದಂತೆ ಕೆಲ ಡೈರಿ ಚುನಾವಣೆಗಳನ್ನು ಮುಂದೂಡಲಾಗಿತ್ತು. ಅಲ್ಲದೇ ಮತಪಟ್ಟಿ ಸೇರಿದಂತೆ ಕೆಲ ತಾಂತ್ರಿಕ ಕಾರಣದಿಂದಾಗಿ ಚುನಾವಣೆ ಮುಂದೂಡಲಾಗಿದೆ. ಅದು ಬಿಟ್ಟು ಬೇರೆ ಕಾರಣವಿಲ್ಲ. ಸಹಕಾರಿ ಸಂಸ್ಥೆಗಳಲ್ಲಿ ವಹಿವಾಟು, ಮಹಾಸಭೆ ಸೇರಿದಂತೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೇ ವಿನಃ ಚುನಾವಣೆಯಲ್ಲಿ ಮತ ಹಾಕಲು ಸಹಕಾರ ಸಂಸ್ಥೆ ಸದಸ್ಯತ್ವ ಪಡೆಯುವುದಲ್ಲ. ಇದರಿಂದ ಆ ಸಂಘಗಳಿಗೆ ಹೊರೆಯಾಗಲಿದೆ. ಎಲ್ಲ ಸದಸ್ಯರು ಸಕ್ರಿಯವಾಗಿ ತೊಡಗಿಕೊಳ್ಳಬೇಕೆಂಬುದು ಸರ್ಕಾರದ ಉದ್ದೇಶ. ಮುಂದೆ ಎಲ್ಲ ಚುನಾವಣೆಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಕೆಲ ಸಚಿವರಿಗೆ ಕೊಕ್ ಎಂಬ ಶಾಸಕ ತನ್ವೀರ್ ಸೇಠ್ ಹೇಳಿಕೆ ವಿಚಾರ ಮೈಸೂರಿನಲ್ಲಿ ಸಚಿವ ರಾಜಣ್ಣ ಪ್ರತಿಕ್ರಿಯೆ ನೀಡಿ, ಸಚಿವರ ಬದಲಾವಣೆ ತೀರ್ಮಾನ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಪಕ್ಷದ ಅಧ್ಯಕ್ಷರು, ಸಿಎಂ ಸೇರಿದಂತೆ ಏನೇ ಬದಲಾವಣೆ ಇದ್ದರು ಕೂಡ ಎಲ್ಲವೂ ಯಾವ ಸಮಯಕ್ಕೆ ಅನ್ನೋದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದ. ರಾಜಕಾರಣ ನಿಂತ ನೀರಲ್ಲ ಎಂದು ಸಚಿವ ಕೆ.ಎನ್. ರಾಜಣ್ಣ ಪ್ರತಿಕ್ರಿಯೆ ನೀಡಿದರು.
ಬೆಂಗಳೂರು ಮಳೆ ಅವಾಂತರದ ಬಗ್ಗೆ: ಕೆರೆ, ಕಾಲುವೆ, ಚರಂಡಿ ಒತ್ತುವರಿಯಿಂದ ಬೆಂಗಳೂರಲ್ಲಿ ಈ ಪರಿಸ್ಥಿತಿ ಬಂದಿದೆ. ನೀರು ಹೇಗೆ ಹರಿಯಬೇಕು ಅಂತಾ ನಾವು ಹೇಳಲು ಸಾಧ್ಯವಿಲ್ಲ. ಅದಕ್ಕೆ ಅದರ ದಾರಿ ಗೊತ್ತಿದೆ. ಮೋರಿ ಚರಂಡಿ ಕಾಲುವೆ ಮುಚ್ಚಿದ ಪರಿಣಾಮ ಈ ರೀತಿ ಆಗಿದೆ. ಸಾಧನಾ ಸಮಾವೇಶ ಮುಗಿದ ನಂತರ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲಾಗುವುದು. ಡಿಸಿಎಂ ಡಿ.ಕೆ.ಶಿವಕುಮಾರ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷದ ಸಂಭ್ರಮ: ಸಿದ್ದರಾಮಯ್ಯ ಆಡಳಿತದಲ್ಲಿ ಜಾರಿಯಾದ ಪ್ರಮುಖ ಯೋಜನೆಗಳ್ಯಾವವು?
ಇದನ್ನೂ ಓದಿ:ಪ್ರಧಾನಮಂತ್ರಿ ಜನಔಷಧಿ ಕೇಂದ್ರಗಳನ್ನು ಮುಚ್ಚುವಂತೆ ರಾಜ್ಯ ಸರ್ಕಾರದ ಆದೇಶ ರಾಜಕೀಯಪ್ರೇರಿತ: ಅಶೋಕ್