ಕಾರವಾರ(ಉತ್ತರ ಕನ್ನಡ): ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆ ಕ್ರಿಕೆಟ್ ಪ್ರೇಮಿಗಳು ಸೇರಿದಂತೆ ಜನರ ಪಾಲಿಗೆ ಕಪ್ಪು ಛಾಯೆಯಾಗಿ ಮಾರ್ಪಟ್ಟಿದೆ. ಕ್ರಿಕೆಟ್ ಮೇಲಿನ ಅತಿಯಾದ ಪ್ರೀತಿಯಿಂದಾಗಿ ಸಂಭ್ರಮಾಚರಣೆಗೆ ದಂಪತಿ ತೆರಳಿದ್ದು, ದುರಂತದಲ್ಲಿ ಗಂಡನ ಕೈ ತಪ್ಪಿಸಿಕೊಂಡು ಇದೀಗ ಬಾರದ ಲೋಕಕ್ಕೆ ತೆರಳಿರುವುದು ಕುಟುಂಬಸ್ಥರ ಪಾಲಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಅಕ್ಷತಾ (27) ಬುಧವಾರ ನಡೆದ ಕಾಲ್ತುಳಿತದ ವೇಳೆ ದುರಂತ ಸಾವು ಕಂಡಿದ್ದಾರೆ. ಸಿ.ಎ. ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದ್ದ ಪ್ರತಿಭಾವಂತೆ ಈ ದುರಂತದಲ್ಲಿ ಅಸುನೀಗಿದ್ದಾರೆ. ಅವರ ಅಕಾಲಿಕ ಮರಣವು ಪತಿ ಆಶಯ್ ಸೇರಿದಂತೆ ಇಡೀ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ಮೂಲತಃ ಮಂಗಳೂರಿನ ಮೂಲ್ಕಿಯವರಾದ ಅಕ್ಷತಾ, ಒಂದೂವರೆ ವರ್ಷದ ಹಿಂದೆ ಇಂಜಿನಿಯರ್ ಯುವಕ ಸಿದ್ದಾಪುರದ ಆಶಯ್ ಅವರನ್ನು ವರಿಸಿದ್ದರು. ಇಬ್ಬರೂ ಆರ್ಸಿಬಿ ತಂಡದ ಅಪ್ಪಟ ಅಭಿಮಾನಿಗಳು. ಕ್ರಿಕೆಟ್ ಮೇಲಿನ ಅವರ ಒಲವು ಎಷ್ಟರಮಟ್ಟಿಗಿತ್ತೆಂದರೆ, ಆರ್ಸಿಬಿ ರೋಡ್ ಶೋನಲ್ಲಿ ಭಾಗವಹಿಸಲು ಅವರು ಕಚೇರಿಗೆ ರಜೆ ಹಾಕಿ, ತಂಡದ ಟೀಶರ್ಟ್ ಧರಿಸಿ ಉತ್ಸಾಹದಿಂದ ತೆರಳಿದ್ದರು.
ಅದೃಷ್ಟವಶಾತ್ ಪಾರಾದ ಆಶಯ್: ರೋಡ್ ಶೋ ರದ್ದಾದಾಗಲೂ ಅವರ ಉತ್ಸಾಹ ಕುಂದಿರಲಿಲ್ಲ. ಬದಲಾಗಿ, ಅವರು ಚಿನ್ನಸ್ವಾಮಿ ಕ್ರೀಡಾಂಗಣದತ್ತ ಹೆಜ್ಜೆ ಹಾಕಿದರು. ಗೇಟ್ ನಂಬರ್ 17ರಿಂದ ಒಳನುಗ್ಗಿದ ಜನಸಮೂಹದಲ್ಲಿ, ದಂಪತಿ ಕಾಲ್ತುಳಿತಕ್ಕೆ ಸಿಲುಕಿದರು. ಆ ಸಂದರ್ಭದಲ್ಲಿ ಆಶಯ್ ಮತ್ತು ಅಕ್ಷತಾ ಪರಸ್ಪರರಿಂದ ಬೇರ್ಪಟ್ಟಿದ್ದಾರೆ. ಅದೃಷ್ಟವಶಾತ್, ಒಬ್ಬ ಮಹಿಳೆ ಆಶಯ್ ಅವರನ್ನು ಅಪಾಯದಿಂದ ಪಾರು ಮಾಡಿದ್ದಾರೆ. ಆದರೆ, ಅಕ್ಷತಾ ದುರದೃಷ್ಟವಶಾತ್ ಜನರ ಕಾಲಡಿ ಸಿಲುಕಿ ಅಲ್ಲೇ ಪ್ರಾಣ ಕಳೆದುಕೊಂಡರು.
''ಪರಿಸ್ಥಿತಿಯ ಗೊಂದಲದಲ್ಲಿ, ನನ್ನ ಪತ್ನಿ ಎಲ್ಲಿದ್ದಾರೆ ಎಂಬುದು ಗೊತ್ತಿರಲಿಲ್ಲ. ಗಾಯಾಳುಗಳನ್ನು ಕೊಂಡೊಯ್ದ ಆಸ್ಪತ್ರೆಯಲ್ಲೆಲ್ಲ ಹುಡುಕಾಡಿದೆ. ಕೊನೆಗೆ ಅಕ್ಷತಾ ಧರಿಸಿದ್ದ ಆರ್ಸಿಬಿ ಟೀಶರ್ಟ್ ಮೂಲಕ ಆಕೆಯನ್ನು ಗುರುತಿಸಲಾಯಿತು. ಅದನ್ನು ತಿಳಿದ ಬಳಿಕ ನಾನು ಅಕ್ಷತಾಳನ್ನು ಕಳೆದುಕೊಂಡಿರುವುದು ಅರಿವಾಯಿತು" ಎಂದು ಆಶಯ್ ಘಟನೆ ಬಗ್ಗೆ ಮಾಧ್ಯಮಗಳಿಗೆ ವಿವರಿಸಿದರು.
ಅಕ್ಷತಾ ಅವರ ಮೃತದೇಹ ಸಿದ್ದಾಪುರಕ್ಕೆ ಆಗಮಿಸಿದಾಗ, ಇಡೀ ಕುಟುಂಬದ ಆಕ್ರಂದನ ಮುಗಿಲುಮುಟ್ಟಿತು. ಭವಿಷ್ಯದ ಕನಸುಗಳನ್ನು ಕಟ್ಟಿಕೊಂಡು ಹೊಸ ಜೀವನಕ್ಕೆ ಕಾಲಿಟ್ಟಿದ್ದ ದಂಪತಿಯ ಜೀವನ ಕ್ರಿಕೆಟ್ ಉತ್ಸಾಹದ ನಡುವೆಯೂ ದುರಂತ ತಿರುವು ಪಡೆದಿದೆ. ಗುರುವಾರ ಅಕ್ಷತಾ ಅವರ ಅಂತ್ಯಸಂಸ್ಕಾರ ನೆರವೇರಿದ್ದು, ಆಕೆಯ ಕುಟುಂಬ ಮತ್ತು ಸ್ನೇಹಿತರು ತೀವ್ರ ದುಃಖದಲ್ಲಿ ಮುಳುಗಿದ್ದಾರೆ. ಈ ಘಟನೆ ಕೇವಲ ಕ್ರಿಕೆಟ್ ಪಂದ್ಯದ ದುರಂತವಲ್ಲ, ಬದಲಿಗೆ ಒಬ್ಬ ಪ್ರತಿಭಾವಂತೆ, ಪ್ರೀತಿಯ ಪತ್ನಿ ಹಾಗೂ ಕನಸುಗಳನ್ನು ಹೊತ್ತ ದಂಪತಿಯ ಅಕಾಲಿಕ ಅಂತ್ಯವಾದಂತಾಗಿದೆ.
ಇದನ್ನೂ ಓದಿ: ಕಾಲ್ತುಳಿತ ಪ್ರಕರಣ: ಆರ್ಸಿಬಿ, ಡಿಎನ್ಎ ಸಂಸ್ಥೆಯ ಒಟ್ಟು ನಾಲ್ವರು ಪೊಲೀಸ್ ವಶಕ್ಕೆ