ಹುಬ್ಬಳ್ಳಿ: ಕಳೆದ ನಾಲ್ಕು ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿದ್ದ ಚೆನ್ನಮ್ಮ ವೃತ್ತದ ಬಳಿಯ ಫ್ಲೈ ಓವರ್ ಕಾಮಗಾರಿ ತ್ವರಿತಗತಿಯಲ್ಲಿ ನಡೆಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಮೆಲ್ಸೇತುವೆ ಕಾಮಗಾರಿ ತ್ವರಿತಗೊಳಿಸುವ ಸಂಬಂಧ ಏ. 20ರಿಂದ ನಾಲ್ಕು ತಿಂಗಳ ಹಿಂದಷ್ಟೆ ಹೊಸದಾಗಿ ನಿರ್ಮಿಸಿರುವ ಹಳೇ ಬಸ್ ನಿಲ್ದಾಣ (ನಗರ ಪ್ರಾದೇಶಿಕ ಬಸ್ ನಿಲ್ದಾಣ) ವನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ.
ಬಸವವನದಿಂದ ಚನ್ನಮ್ಮ ವೃತ್ತದವರೆಗೆ 500 ಮೀಟರ್, ಚನ್ನಮ್ಮ ವೃತ್ತದಿಂದ ಹಳೇ ಕೋರ್ಟ್ ವೃತ್ತದವರೆಗೆ 150 ಮೀಟರ್ ಕಾಮಗಾರಿ ನಡೆಯಲಿದೆ. 80 ಗರ್ಡರ್ ಹಾಗೂ 16 ಸ್ಲಾಬ್ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಹೀಗಾಗಿ ಹಳೇ ಬಸ್ ನಿಲ್ದಾಣ ತಾತ್ಕಾಲಿಕವಾಗಿ ಸ್ಥಳ ಬದಲಾವಣೆ ಮಾಡಿ ಐಟಿ ಪಾರ್ಕ್ ಹತ್ತಿರ ತಾತ್ಕಾಲಿಕ ಬಸ್ ನಿಲ್ದಾಣ ಸ್ಥಾಪಿಸಲಾಗುತ್ತಿದೆ.
ಉಪ ನಗರ ಬಸ್ ನಿಲ್ದಾಣವನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳು ನಿರ್ವಹಣೆ ಹಾಗೂ ರಕ್ಷಣೆ ಮಾಡಬೇಕಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 50 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಹೈಟೆಕ್ ಪ್ರಾದೇಶಿಕ ನಗರ ಸಾರಿಗೆ ಬಸ್ ನಿಲ್ದಾಣವನ್ನು ಉದ್ಘಾಟನೆ ಮಾಡಲಾಗಿತ್ತು. ಜ.12 ರಂದು ಉದ್ಘಾಟನೆಯಾದ ಓಲ್ಡ್ ಬಸ್ ಸ್ಟ್ಯಾಂಡ್ ಈಗ ಸಂಪೂರ್ಣವಾಗಿ ಬಂದ್ ಆಗಲಿದೆ.
ವಿಜಯಪುರ, ಗದಗ ಹಾಗೂ ಉಳಿದ ಪ್ರದೇಶದಿಂದ ಬರುವ ಬಸ್ಸುಗಳಿಗೆ ಕಾರವಾರ ರಸ್ತೆ, ಸಿಬಿಟಿ ಹಾಗೂ ಹೊಸೂರ ಬಸ್ ನಿಲ್ದಾಣಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು. ಸಂಚಾರಕ್ಕೆ ಸಮಸ್ಯೆಯಾಗದಂತೆ ನಿಗಾ ವಹಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. 3.10 ಕಿ.ಮೀ. ವ್ಯಾಪ್ತಿಯಲ್ಲಿ ಮೇಲ್ಸೆತುವೆ ಕಾಮಗಾರಿ ನಡೆಯಲಿದ್ದು, ಕೆಲವೆಡೆ ಬಾಕಿ ಇರುವ ಭೂಸ್ವಾಧೀನ ಪ್ರಕ್ರಿಯೆ ಈ ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

ಈ ಕುರಿತಂತೆ ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, "ಹೊಸೂರು ಸರ್ಕಲ್‌ನಿಂದ ಚನ್ನಮ್ಮ ಸರ್ಕಲ್, ಚನ್ನಮ್ಮ ಸರ್ಕಲ್‌ನಿಂದ ಕೋರ್ಟ್ ಸರ್ಕಲ್ರವರೆಗೆ ಬಂದ್ ಮಾಡಲು ಯೋಜನೆ ರೂಪಿಸಲಾಗಿದೆ. ವಾಹನ ದಟ್ಟಣೆಯನ್ನು ಪರಿಶೀಲಿಸಿ, ಬಸವವನ ಸರ್ಕಲ್‌ನಿಂದ 500 ಮೀಟರ್, ಚನ್ನಮ್ಮ ಸರ್ಕಲ್‌ನಿಂದ ಕೋರ್ಟ್ ಸರ್ಕಲ್ 150 ಮೀಟರ್ ಒಳಗೊಂಡು ಒಟ್ಟಾರೆ 650 ಮೀಟರ್ ರಸ್ತೆ ಬಂದ್ ಮಾಡಲಾಗುತ್ತಿದೆ. 80 ಗರ್ಡರ್ ಹಾಗೂ 16 ಸ್ಲಾಬ್ಗಳನ್ನು ಹಾಕುವ ಪ್ರಮುಖ ಕಾರ್ಯವಿದೆ. ಸಾಕಷ್ಟು ಜಾಗದ ಅವಶ್ಯಕತೆ ಇದ್ದು, ಸುರಕ್ಷತೆ ದೃಷ್ಟಿಯಿಂದ ಎಲ್ಲಾ ಇಲಾಖೆಗಳಿಂದ ತಾಂತ್ರಿಕ ಒಪ್ಪಿಗೆ ಪಡೆದು 4 ತಿಂಗಳ ಅವಧಿವರೆಗೆ ಬಂದ್ ಮಾಡಲಾಗುವುದು" ಎಂದು ತಿಳಿಸಿದರು.
"ಏಪ್ರಿಲ್ 21 ರಿಂದ ಕೆಲಸ ಪ್ರಾರಂಭ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿದೆ. ಇದಕ್ಕೆ ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ವಾಯವ್ಯ ಸಾರಿಗೆ ಹಾಗೂ ಬಿಆರ್ಟಿಎಸ್ ಸಮ್ಮತಿ ನೀಡಿದೆ. ಇದಕ್ಕೆ ಪರ್ಯಾಯವಾಗಿ ನೀಲಿಜನ್ ರೋಡ್ ಅವಶ್ಯಕತೆ ಇರುವುದರಿಂದ ಅಲ್ಲಿ ಎರಡು ಪಿಲ್ಲರ್ ಕಾಮಗಾರಿ ಕೆಲಸ ನಡೆಯುತ್ತಿದೆ. ಏಪ್ರಿಲ್ 21ಕ್ಕೆ ಕೆಲಸ ಮುಗಿಯಲಿದ್ದು, ಆ ರಸ್ತೆಯ ಸಂಚಾರಕ್ಕೆ ಮುಕ್ತವಾಗಲಿದೆ. ಸಂಚಾರ ದಟ್ಟಣೆ ಕಡಿಮೆಯಾಗಲಿದೆ" ಎಂದರು.
ಹಳೇ ಬಸ್ ನಿಲ್ದಾಣ ಏ. 21ರಿಂದ ಬಂದ್: "ಪ್ರಮುಖ ಬದಲಾವಣೆಯಲ್ಲಿ ಅತೀ ಮುಖ್ಯವಾಗಿ ಹಳೇ ಬಸ್ ನಿಲ್ದಾಣ ಬಂದ್ ಮಾಡಲಾಗುತ್ತದೆ. ಅದನ್ನು ಐಟಿ ಪಾರ್ಕ್ ಎದುರು ಸ್ಥಳಾಂತರ ಮಾಡಲಾಗುವುದು. ಸಿಬಿಟಿಯಿಂದ ಬರುವ ಬಸ್ಗಳು ಕಾರವಾರ ರೋಡ್ನಲ್ಲಿ ತಿರುವು ಪಡೆದುಕೊಳ್ಳಲು ತೀರ್ಮಾನ ಮಾಡಲಾಗಿದೆ. ಗದಗ, ವಿಜಯಪುರ ಕಡೆಯಿಂದ ಬರುವ ಬಸ್ಗಳು ಕಾರವಾರ ರೋಡ್ ಮೂಲಕ ಸಂಚಾರ ನಡೆಸಲಿವೆ" ಎಂದು ಮಾಹಿತಿ ನೀಡಿದರು.
ಬಸ್ ನಿಲ್ದಾಣ ನಿರ್ವಹಣೆಯೇ ದೊಡ್ಡ ಸವಾಲು: ನೂತನವಾಗಿ ನಿರ್ಮಿಸಿರುವ ಹಳೇ ನಿಲ್ದಾಣ ಹಲವು ವಿಶಿಷ್ಟ್ಯತೆಗಳಿಂದ ಕೂಡಿದೆ. ಇತ್ತೀಚೆಗಷ್ಟೇ ಕಾರ್ಯರಂಭ ಮಾಡಿದ್ದರಿಂದ ಸಾಕಷ್ಟು ಬೆಲೆ ಬಾಳುವ ಪರಿಕರಗಳು ಹಾಗೂ ಬಿಆರ್ಟಿಎಸ್ ಬಸ್ ನಿಲ್ದಾಣದ ಕೊಠಡಿಗಳು ಸೇರಿದಂತೆ ಹಲವು ಉಪಕರಣಗಳು ಹೊರಗಡೆ ಇವೆ. ಅವುಗಳ ರಕ್ಷಣೆ ಪ್ರಮುಖ ಸವಾಲಾಗಿದೆ. ಅದಲ್ಲದೇ ಕಳ್ಳರ ಕಾಟ, ಕಿಡಿಗೇಡಿಗಳು ಹಾನಿಯನ್ನುಂಟು ಮಾಡುವ ಆತಂಕ ಇದೆ. ಹೀಗಾಗಿ ಭದ್ರತೆ ಹೆಚ್ಚಿಸುವ ಅವಶ್ಯಕತೆ ಇದೆ.
ಈ ಬಗ್ಗೆ ಸ್ಮಾರ್ಟ್ ಸಿಟಿ ಈ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ರುದ್ರೇಶ ಗಾಳಿ ಪ್ರತಿಕ್ರಿಯಿಸಿ, "ಬಸ್ ನಿಲ್ದಾಣ ನಿರ್ವಹಣೆಗೆ ಹಾಗೂ ಭದ್ರತೆಗೆ 10 ಜನ ಸಿಬ್ಬಂದಿ ಅವಶ್ಯಕತೆ ಇದೆ. ಇದರ ನಿರ್ವಹಣೆಯನ್ನು ವಾಯುವ್ಯ ಸಾರಿಗೆ ಸಂಸ್ಥೆ ನೋಡಿಕೊಳ್ಳುತ್ತಿದ್ದು, ಹೆಚ್ಚಿನ ಸಿಬ್ಬಂದಿ ನಿಯೋಜಿಸುವ ವಿಶ್ವಾಸವಿದೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಹುಬ್ಬಳ್ಳಿ ಫ್ಲೈ ಓವರ್ ಕಾಮಗಾರಿ: ಚನ್ನಮ್ಮ ವೃತ್ತದ ಪ್ರಮುಖ ರಸ್ತೆಗಳು 4 ತಿಂಗಳು ಬಂದ್, ಬದಲಿ ಮಾರ್ಗಗಳ ವಿವರ ಇಲ್ಲಿದೆ