ಶಿವಮೊಗ್ಗ: ಹುಬ್ಬಳ್ಳಿಯ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದ ಆರೋಪಿಗೆ ಗುಂಡಿಕ್ಕಿದ ಪೊಲೀಸ್ ಇಲಾಖೆಗೆ ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.
ಶಿವಮೊಗ್ಗದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಚಿಕ್ಕ ಮಗುವನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಲಾಗಿದೆ. ಈಗಾಗಲೇ ಕಾನೂನಿನ ಚೌಕಟ್ಟಿನಲ್ಲಿ ಗುಂಡಿಟ್ಟು ಕೊಲ್ಲಲಾಗಿದೆ. ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆ ನೀಡಲಾಗಿದೆ. ಇದಕ್ಕೆ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇಡೀ ಸಮಾಜ ತಲೆತಗ್ಗಿಸುವ ಘಟನೆ ನಿನ್ನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಇಂತಹ ಘಟನೆ ಕೊನೆಯಾಗಬೇಕು. ಆ ನಿಟ್ಟಿನಲ್ಲಿ ಸಮಾಜ ಒಟ್ಟಾಗಬೇಕು. ದೇಶದಲ್ಲಿ ಸಾಕಷ್ಟು ಜನರು ಅಕ್ರಮವಾಗಿ ಬಂದು ನೆಲೆಸಿದ್ದಾರೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ವಲಸೆ ಕಾರ್ಮಿಕರಿಗೂ ವ್ಯವಸ್ಥೆ ಮಾಡುತ್ತಿದೆ. ಅದರ ನಡುವೆ ಇಂತಹ ಘಟನೆ ಆಗಿದೆ. ರಾಕ್ಷಸಿ ಕೃತ್ಯ ನಡೆದಿದ್ದನ್ನು, ಎಲ್ಲರೂ ಖಂಡಿಸಬೇಕು ಎಂದು ತಿಳಿಸಿದರು.
ಜಾತಿ ಗಣತಿ ವಿಚಾರ: ಜಾತಿ ಗಣತಿ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದೆ. ಏಪ್ರಿಲ್ 17ರಂದು ಕರೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಬಹುದು. ವರದಿಯಿಂದ ರಾಜ್ಯದ ಜನರಿಗೆ ಒಳ್ಳೆಯದಾದ್ರೆ ಸಂತೋಷ. ಅದರಲ್ಲಿ ಕೊರತೆ ಇದ್ರೆ ಅದನ್ನು ಎತ್ತಿ ಹಿಡಿದು, ಸಂಬಂಧಿಸಿದವರಿಗೆ ತಿಳಿಸುತ್ತೇವೆ. ಆ ನಿಟ್ಟಿನಲ್ಲಿ ಬಿಜೆಪಿ ನಿರಂತರವಾಗಿ ಕೆಲಸ ಮಾಡುತ್ತದೆ ಎಂದು ಪ್ರತಿಕ್ರಿಯೆ ನೀಡಿದರು.
ಎನ್ಕೌಂಟರ್ ಮಾಡಬೇಕು- ಎಂಎಲ್ಸಿ ಬಲ್ಕಿಷ್ ಬಾನು: ಶಿವಮೊಗ್ಗ ಪ್ರೆಸ್ ಟ್ರಸ್ಟ್ನಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಲ್ಕಿಷ್ ಬಾನು, ಅತ್ಯಾಚಾರ ನಡೆಸಿದವರಿಗೆ ಎನ್ಕೌಂಟರ್ ಮಾಡಲೇಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅತ್ಯಾಚಾರದಂತಹ ಕೃತ್ಯ ಎಸಗಿದವರನ್ನು ಕೊಲ್ಲಿ ಎಂಬ ಸಲಹೆಯನ್ನು ನಾನು ಸದನದಲ್ಲಿಯೂ ನೀಡಿದ್ದೇನೆ. ಇದು ಬೇರೆಯವರಿಗೆ ಪಾಠವಾಗಬೇಕು. ಇಂತಹ ಘೋರ ಮನಸ್ಥಿತಿಯವರಿಗೆ ಇದೇ ಆಗಬೇಕು. ಉತ್ತರ ಭಾರತದವರ ಕೆಲಸಕ್ಕೆ ಕಡಿವಾಣ ಹಾಕಬೇಕು ಎಂದು ಬಲ್ಕಿಷ್ ಬಾನು ತಿಳಿಸಿದರು.
ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು- ಮಧು ಬಂಗಾರಪ್ಪ: ಶಿವಮೊಗ್ಗದಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಹುಬ್ಬಳ್ಳಿ ಘಟನೆ ಬಗ್ಗೆ ಪೊಲೀಸ್ ಕಮಿಷನರ್ ಈಗಾಗಲೇ ವಿವರ ನೀಡಿದ್ದಾರೆ. ಇಂತಹ ಆರೋಪಿಗೆ ಕಠಿಣ ಶಿಕ್ಷೆಯನ್ನ ಕೊಡಬೇಕಾಗುತ್ತದೆ. ಅದು ಎನ್ಕೌಂಟರ್ ಮೂಲಕ ಆಗಿದೆ. ಇದರ ಬಗ್ಗೆ ಜನರ ಪ್ರತಿಕ್ರಿಯೆ ಸಹ ನೋಡಿದ್ದೇನೆ. ಇಂತಹ ಘಟನೆಯನ್ನು ಪಕ್ಷಾತೀತ, ಜಾತ್ಯತೀತವಾಗಿ ಎಲ್ಲರೂ ಖಂಡಿಸಬೇಕು ಎಂದರು.
ಮುಂದಿನ ಶೈಕ್ಷಣಿಕ ವರ್ಷಕ್ಕೆ ಪಠ್ಯಪುಸ್ತಕ ಸಿದ್ಧವಿದೆ. ಇಲಾಖೆಯಿಂದ ಎಲ್ಲಾ ತಯಾರಿ ಆಗಿದೆ. ವಿಶೇಷವಾಗಿ ದ್ವೀತಿಯ ಪಿಯುಸಿ ಮರು ಪರೀಕ್ಷೆ ಬರೆಯಲು ಎರಡು ಅವಕಾಶ ನೀಡಲಾಗಿದೆ. ಜೊತೆಗೆ ಈ ಪರೀಕ್ಷಾ ಶುಲ್ಕವನ್ನು ಸರ್ಕಾರದಿಂದಲೇ ಭರಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: ಹುಬ್ಬಳ್ಳಿ ಬಾಲಕಿ ಕೊಲೆ ಪ್ರಕರಣ : ಎನ್ಕೌಂಟರ್ ಲೇಡಿ ಸಿಂಗಂ ಹಾಡಿ - ಹೊಗಳುತ್ತಿರುವ ಸಾರ್ವಜನಿಕರು
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಬಾಲಕಿಯ ಅಪಹರಿಸಿ ಕೊಲೆ: ಆರೋಪಿಯ ಎನ್ಕೌಂಟರ್ ಬಗ್ಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ಪಷ್ಟನೆ ಹೀಗಿದೆ