ಹಾಸನ: 'ಈ ಥರದ ಪರಿಸ್ಥಿತಿ ಯಾವ ತಂದೆ, ತಾಯಿಗೂ ಬರಬಾರದು.. ನನ್ನ ಮಗನಿಗೋಸ್ಕರವೇ ಈ ಜಾಗ ಮಾಡಿದ್ದು, ಇದೇ ಜಾಗದಲ್ಲಿ ನನ್ನ ಮಗ ಮಲಗುತ್ತಿದ್ದ. ಈಗ ಇಲ್ಲೇ ಮಲಗಿಸಿದ್ದೇನೆ.. ಯಾರಿಗೂ ಈ ಪರಿಸ್ಥಿತಿ ಬೇಡ' ಎಂದು ಕಾಲ್ತುಳಿತದಲ್ಲಿ ಮಗನನ್ನು ಕಳೆದುಕೊಂಡ ಭೂಮಿಕ್ ಅವರ ತಂದೆ ಗೋಳಾಡಿದ್ದಾರೆ.
ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಘಟನೆ ನಡೆದು ನಾಲ್ಕು ದಿನಗಳೆ ಕಳೆದಿದೆ. ಆದರೆ ತಮ್ಮವರನ್ನು ಕಳೆದುಕೊಂಡ ಹೆತ್ತವರು ಹಾಗೂ ಕುಟುಂಬಸ್ಥರ ದುಃಖ, ಆಕ್ರಂದನ ಕಿಂಚಿತ್ತೂ ಕಡಿಮೆಯಾಗಿಲ್ಲ. ಮಗನನ್ನು ನೆನೆದು ತಂದೆ ಆತನ ಸಮಾಧಿ ಬಳಿ ಗೋಳಾಡುತ್ತಿರುವ ದೃಶ್ಯ ಮನಕಲಕುವಂತಿದೆ.
ಆರ್‌ಸಿಬಿ ತಂಡ 18 ವರ್ಷಗಳ ಬಳಿಕ ಐಪಿಎಲ್ ಚಾಂಪಿಯನ್ ಪಟ್ಟವನ್ನೇನೋ ಅಲಂಕರಿಸಿದೆ. ಆದರೆ, ಆರ್‌ಸಿಬಿ ಫ್ಯಾನ್ಸ್ ಐತಿಹಾಸಿಕ ಕ್ಷಣದ ಸಂಭ್ರಮದಲ್ಲಿ ಈ ದುರಂತ ಸಂಭವಿಸಿತ್ತು. 11ಕ್ಕೂ ಹೆಚ್ಚು ಅಭಿಮಾನಿಗಳು ಸಾವನ್ನಪ್ಪಿದ್ದು, ಅಭಿಮಾನಿಗಳ ಮನೆಗಳಲ್ಲಿ ಸೂತಕ ಛಾಯೆ ಆವರಿಸಿದೆೆ.
ಮೃತ ಇಂಜಿನಿಯರಿಂಗ್ ವಿದ್ಯಾರ್ಥಿ ಭೂಮಿಕ್ನ ಮೂರನೇ ದಿನದ ಹಾಲು ತುಪ್ಪದ ಕಾರ್ಯದ ವೇಳೆ ತಂದೆ ಡಿ.ಟಿ. ಲಕ್ಷ್ಮಣ್ ಮಗನ ಸಮಾಧಿಯ ಮೇಲೆ ಮಲಗಿ ಗೋಳಾಡಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕುಪ್ಪಗೋಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಬೆಂಗಳೂರಿನಲ್ಲಿ ದ್ವಿತೀಯ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಬೇಲೂರು ತಾಲೂಕಿನ ಕುಪ್ಪಗೋಡು ಗ್ರಾಮದ ಭೂಮಿಕ್ ಕಾಲ್ತುಳಿತದಲ್ಲಿ ಮೃತಪಟ್ಟಿದ್ದ. ಎಂದಿನಂತೆ ಕಾಲೇಜಿಗೆ ತೆರಳಿದ್ದ ಈತ ಬಳಿಕ ಸ್ನೇಹಿತರ ಜೊತೆಗೂಡಿ ಚಿನ್ನಸ್ವಾಮಿ ಸ್ಟೇಡಿಯಂಗೆ ತೆರಳಿದ್ದ.
ಭೂಮಿಕ್ ಪೋಷಕರು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ, ಕುಪ್ಪುಗೋಡು ಗ್ರಾಮದವರು. ಡಿ.ಟಿ. ಲಕ್ಷ್ಮಣ-ಅಶ್ವಿನಿ ದಂಪತಿಯ ಏಕೈಕ ಪುತ್ರನಾಗಿದ್ದ ಭೂಮಿಕ್. ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಡಿಟಿ ಲಕ್ಷ್ಮಣ ಸಣ್ಣ ಕೈಗಾರಿಕೆ ನಡೆಸುತ್ತಿದ್ದಾರೆ. ಡಿ.ಟಿ. ಲಕ್ಷ್ಮಣ ಅವರಿಗೆ ಸೇರಿದ ಜಮೀನು ಸ್ವಗ್ರಾಮದಲ್ಲಿದ್ದು, ತಿಂಗಳು ಅಥವಾ 2 ತಿಂಗಳಿಗೊಮ್ಮೆ ಎಂಬಂತೆ ವರ್ಷದಲ್ಲಿ 5-6 ಬಾರಿ ಕುಟುಂಬಸ್ಥರು ಇಲ್ಲಿಗೆ ಬಂದು ಹೋಗುತ್ತಿದ್ದರು. ಇದೀಗ ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಕುಟುಂಬ ತೀವ್ರ ದುಃಖದಲ್ಲಿ ಮುಳುಗಿದೆ.
ಇದನ್ನು ಓದಿ: ಬೆಂಗಳೂರು ಕಾಲ್ತುಳಿತ ದುರಂತ, ಸಂತ್ರಸ್ತರ ಪರಿಹಾರದಲ್ಲಿ ಹೆಚ್ಚಳ: 25 ಲಕ್ಷ ರೂಗೆ ಹೆಚ್ಚಿಸಿ ಆದೇಶ