ಬೆಂಗಳೂರು: ಕೆಲಸಕ್ಕಾಗಿ ನೀವೇನಾದರೂ ಇಂಟರ್ವ್ಯೂಗೆ ಹೋದರೆ ಹುಷಾರಾಗಿರಿ. ಕಾರಣ, ಸಂದರ್ಶನ ಮಾಡುವ ಸೋಗಿನಲ್ಲಿ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದ ಆರೋಪಿ ಮಾನವ ಸಂಪನ್ಮೂಲ ಅಧಿಕಾರಿ (ಹೆಚ್ಆರ್) ಸಿಸಿಬಿ ಪೊಲೀಸರ ಅತಿಥಿಯಾಗಿದ್ಧಾನೆ.
ಮೆಕ್ರೋಸಾಪ್ಟ್, ಬಾಷ್ ಸೇರಿ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 8 ಮಂದಿ ಉದ್ಯೊಗಾಂಕ್ಷಿಗಳಿಂದ 14.23 ಲಕ್ಷ ಹಣ ಪಡೆದಿದ್ದ ಖಾಸಗಿ ಕಂಪನಿ ನೌಕರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಂಚನೆಗೊಳಗಾದ ಯುವತಿಯು ನೀಡಿದ ದೂರು ಆಧರಿಸಿ ಪತ್ನೂಲ್ ಕಲಂದರ್ ಖಾನ್ (43) ಎಂಬವನನ್ನು ಬಂಧಿಸಿ, ಆತನಿಂದ 1.50 ಲಕ್ಷ ರೂ. ಹಣ ವಶಕ್ಕೆ ಪಡೆಯಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಮುಖ ಆರೋಪಿ ಕಲಂದರ್ ಜೆ.ಪಿ.ನಗರದ ಸಾರಕ್ಕಿ ನಿವಾಸಿಯಾಗಿದ್ದು, ಖಾಸಗಿ ಕಂಪನಿಯಲ್ಲಿ ಹೆಚ್ಆರ್ ಆಗಿ ಕೆಲಸ ಮಾಡುತ್ತಿದ್ದ. ಇದೇ ವೇಳೆ ವಂಚನೆಗೊಳಗಾದ ಯುವತಿಯು ಆರೋಪಿ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಕೆಲಸ ಖಾಲಿಯಿರುವುದಾಗಿ ಆನ್ಲೈನ್ನಲ್ಲಿ ತಿಳಿದುಕೊಂಡು ಸಂದರ್ಶನಕ್ಕೆ ಹೋಗಿದ್ದಳು.
ಸಂದರ್ಶನ ನಡೆಸಿದ ಆರೋಪಿಯು ವಿದ್ಯಾರ್ಹತೆ ಹೆಚ್ಚಿದ್ದು, ಪ್ರತಿಷ್ಠಿತ ಕಂಪನಿಯಲ್ಲಿ ನನ್ನ ಸ್ನೇಹಿತರಿದ್ದಾರೆ. ಅಲ್ಲಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಆಕೆಯ ಮೊಬೈಲ್ ನಂಬರ್ ಪಡೆದುಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೆಕ್ರೋಸಾಫ್ಟ್ ಕಂಪನಿಯಲ್ಲಿ ಕೆಲಸ ಖಾಲಿಯಿದ್ದು, ಹುದ್ದೆ ಕೊಡಿಸಬೇಕಾದರೆ 2.70 ಲಕ್ಷ ರೂ. ತಗುಲಲಿದೆ ಎಂದು ಸುಳ್ಳು ಹೇಳಿ ಯುವತಿಯಿಂದ ಹಣ ವರ್ಗಾಯಿಸಿಕೊಂಡಿದ್ದ. ಇದೇ ರೀತಿ ಇನ್ನಿತರ ಏಳು ಮಂದಿಗೂ ಕೆಲಸ ಕೊಡಿಸುವುದಾಗಿ ಹೇಳಿ ಒಟ್ಟು 14.23 ಲಕ್ಷ ರೂಪಾಯಿ ಯುಪಿಎ ಮೂಲಕ ಹಣ ವರ್ಗಾಯಿಸಿ ಮೋಸ ಮಾಡಿದ್ದ. ಸದ್ಯ ಓರ್ವನನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಸಹಕರಿಸಿದ್ದ ಇನ್ನಿಬ್ಬರು ತಲೆಮರೆಸಿಕೊಂಡಿದ್ಧಾರೆ ಎಂದು ಅಧಿಕಾರಿಗಳು ತಿಳಿಸಿದ್ಧಾರೆ.
ಇದನ್ನೂ ಓದಿ: ಹಣ ಡಬ್ಲಿಂಗ್ ಜಾಲ : ಓರ್ವನ ಬಂಧನ, ಕಂತೆ-ಕಂತೆ ಅಸಲಿ ನೋಟು, ಪೇಪರ್ ಬಂಡಲ್ ವಶ