ಮಂಗಳೂರು: ಮಂಗಳೂರಿನ ಕಣಚೂರು ಆಸ್ಪತ್ರೆಗೆ ಜೂನ್ 4 ರಂದು ಹುಸಿ ಬಾಂಬ್ ಬೆದರಿಕೆ ಬಂದಿದ್ದು, ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ದೂರು ನೀಡಿದ ವಿದ್ಯಾರ್ಥಿನಿಯನ್ನೇ ಬಂಧಿಸಿದ್ದಾರೆ. ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯ ವಿದ್ಯಾರ್ಥಿನಿ ಬಂಧನಕ್ಕೊಳಗಾದವರು.
ಸುಳ್ಳು ದೂರು ನೀಡಿದ್ದ ವಿದ್ಯಾರ್ಥಿನಿ: ಜೂನ್ 4 ರಂದು ಬೆಳಗ್ಗೆ 8-45 ಗಂಟೆಗೆ ದೇರಳಕಟ್ಟೆ ನಾಟೆಕಲ್ ರೋಡ್ ಕಣಚೂರು ಆಸ್ಪತ್ರೆಗೆ ಅನಾಮಧೇಯ ವ್ಯಕ್ತಿಯು ಕರೆ ಮಾಡಿ, ಆಸ್ಪತ್ರೆಗೆ ಬಾಂಬ್ ಇರಿಸಲಾಗಿದೆ, 11 ಗಂಟೆಯೊಳಗಾಗಿ ಆಸ್ಪತ್ರೆಯನ್ನು ಖಾಲಿ ಮಾಡಬೇಕೆಂದು 5 ಬಾರಿ ಕರೆ ಮಾಡಿ ಬೆದರಿಕೆ ಹಾಕಿರುತ್ತಾನೆ ಎಂದು ವಿದ್ಯಾರ್ಥಿನಿ ತಿಳಿಸಿದ್ದಳು.
ಈ ಬೆದರಿಕೆಯ ಬಗ್ಗೆ ದೂರು ಬಂದ ಮೇರೆಗೆ 25-30 ಜನ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರು, ಬಾಂಬ್ ನಿಷ್ಕ್ರಿಯ ತಂಡ ಹಾಗೂ ಶ್ವಾನ ದಳ ತಂಡದೊಂದಿಗೆ ಆಸ್ಪತ್ರೆಯ ಸಂಪೂರ್ಣ ಕಟ್ಟಡ, ಆಸ್ಪತ್ರೆಯ ವಾಹನ ಪಾರ್ಕಿಂಗ್ ಸ್ಥಳ ಹಾಗೂ ಆಸ್ಪತ್ರೆಯ ಸುತ್ತಮುತ್ತಲಿನ ಪರಿಸರವನ್ನು ನಿರಂತರವಾಗಿ 10 ಗಂಟೆಗಳ ಕಾಲ ಪರಿಶೀಲಿಸಿದಾಗ ಯಾವುದೇ ರೀತಿಯ ಬಾಂಬ್ ಪತ್ತೆಯಾಗಿರಲಿಲ್ಲ.
ಬಾಂಬ್ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಹಾಗೂ ರೋಗಿಗಳು ಬೆದರಿಕೆಯ ಬಗ್ಗೆ ತುಂಬಾ ಆತಂಕಕ್ಕೆ ಒಳಗಾಗಿದ್ದರು.
ಪಿ.ಜಿ. ವಿದ್ಯಾರ್ಥಿನಿ ಡಾ. ಚಲಸಾನಿ ಮೋನಿಕಾ ಚೌಧರಿ ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪೋನ್ ಕರೆ ಬಗ್ಗೆ ದೂರು ನೀಡಿದ ಮೇರೆಗೆ ಮೊ.ನಂ.89/2025 ಕಲಂ 352(2), 352(4) ಬಿಎನ್ಎಸ್ 2023 ರಂತೆ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.
ಆರೋಪಿಯ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡದವರು ಆರೋಪಿ ಪತ್ತೆಗೆ ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸಿದಾಗ ದೂರು ನೀಡಿದ ವಿದ್ಯಾರ್ಥಿನಿಯೇ ಆರೋಪಿ ಎಂಬುದು ತಿಳಿದು ಬಂದಿದೆ.
ಸೆಮಿನಾರ್ ತಪ್ಪಿಸಿಕೊಳ್ಳಲು ಬಾಂಬ್ ಬೆದರಿಕೆ: ಈ ವಿದ್ಯಾರ್ಥಿನಿ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತರ ಪದವಿ ವ್ಯಾಸಂಗ ಮಾಡುತ್ತಿದ್ದು, ಜೂನ್ 4 ರಂದು ಸೆಮಿನಾರ್ ನೀಡಬೇಕಾಗಿತ್ತು. ಈ ಸೆಮಿನಾರ್ ತಪ್ಪಿಸುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದು ತನಿಖೆಯಿಂದ ತಿಳಿದು ಬಂದಿದೆ. ಆರೋಪಿಯನ್ನು ಬಂಧಿಸಿ, ಅವರ ಹೇಳಿಕೆ ಮೇಲೆ ಅವರ ಮೊಬೈಲ್ ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿದಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಹುಸಿ ಬಾಂಬ್ ಕರೆ