ಬೆಂಗಳೂರು: ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಾಕಿದ್ದ ಪೋಸ್ಟ್ ಸಂಬಂಧ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ವಿರುದ್ಧ ದಾಖಲಾದ ಎಫ್‌ಐಆರ್‌ಗೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸೀಂ ಮುನೀರ್ ಅವರನ್ನು ಒಂದೇ ಚಿತ್ರದಲ್ಲಿ ಚಿತ್ರಿಸಿರುವುದನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಲಾಗಿತ್ತು. ಸಂಬಂಧ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ವಿರುದ್ಧ ಸಾರ್ವಜನಿಕ ಕಿಡಿಗೇಡಿತನವನ್ನು ಪ್ರಚೋದಿಸುವ ಉದ್ದೇಶದಿಂದ ಸುಳ್ಳು ಹೇಳಿಕೆ, ವದಂತಿಗಳು ಅಥವಾ ವರದಿಗಳನ್ನು ಪ್ರಕಟಿಸಿದ ಆರೋಪದಲ್ಲಿ ಎಫ್‌ಐಆರ್ ದಾಖಲಾಗಿತ್ತು. ಅದಕ್ಕೆೆ ಹೈಕೋರ್ಟ್ನಿಂದ ತಡೆ ಬಿದ್ದಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ದ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಅಮಿತ್ ಮಾಳವಿಯಾ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ರಾಚಯ್ಯ ಅವರ ಪೀಠ, ಅರ್ಜಿ ಕುರಿತ ಮುಂದಿನ ವಿಚಾರಣೆ ಮತ್ತು ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿ, ವಿಚಾರಣೆಯನ್ನು ಮುಂದೂಡಿದೆ.
ಟರ್ಕಿಯಲ್ಲಿರುವ ಇಸ್ತಾಂಬುಲ್ ಕಾಂಗ್ರೆಸ್ ಕೇಂದ್ರವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಕಚೇರಿಯಾಗಿದೆ ಎಂದು ಸುಳ್ಳು ಹೇಳಿಕೆಗಳನ್ನು ನೀಡಿದ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸೀಂ ಮುನೀರ್ ಹಾಗೂ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಒಂದೇ ಚಿತ್ರದಲ್ಲಿ ಚಿತ್ರಿಸಿರುವುದನ್ನು ಪೋಸ್ಟ್ ಮಾಡಿದ ಸಂಬಂಧ ಅಮಿತ್ ಮಾಳವಿಯಾ ವಿರುದ್ಧ ಭಾರತೀಯ ಯುವ ಕಾಂಗ್ರೆಸ್ ಕಾನೂನು ವಿಭಾಗದ ಮುಖ್ಯಸ್ಥ ಬಿ.ಎನ್.ಶ್ರೀಕಾಂತ್ ಸ್ವರೂಪ್ ಅವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅದರ ಆಧಾರದ ಮೇಲೆ ಹೈಗ್ರೌಂಡ್ಸ್ ಪೊಲೀಸರು, ಮಾಳವಿಯಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 353ರ ಅಡಿಯಲ್ಲಿ ಸಾರ್ವಜನಿಕ ಕಿಡಿಗೇಡಿತನ, ದಂಗೆ, ಭಯ ಅಥವಾ ಹಿಂಸೆಯನ್ನು ಪ್ರಚೋದಿಸುವ ಉದ್ದೇಶದಿಂದ ಸುಳ್ಳು ಹೇಳಿಕೆಗಳು, ವದಂತಿಗಳು ಅಥವಾ ವರದಿಗಳನ್ನು ಪ್ರಕಟ ಅಥವಾ ಪ್ರಸಾರ ಮಾಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದರು. ಈ ಎಫ್‌ಐಆರ್ ರದ್ದು ಕೋರಿ ಅಮಿತ್ ಮಾಳವಿಯಾ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಶಾಸಕ ಹರೀಶ್ ಪೂಂಜ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ