ಶಾಸಕ ವೀರೇಂದ್ರ ಬಂಧನ ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಅರ್ಜಿಯ ಆದೇಶ ಕಾಯ್ದಿರಿಸಿದ ಹೈಕೋರ್ಟ್
ಬೆಟ್ಟಿಂಗ್ ಆರೋಪ ಪ್ರಕರಣ ಸಂಬಂಧ ಚಿತ್ರದುರ್ಗದ ಶಾಸಕ ಕೆ.ಸಿ.ವೀರೇಂದ್ರ ಬಂಧನ ಪ್ರಶ್ನಿಸಿ ಅವರ ಪತ್ನಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಪೂರ್ಣಗೊಳಿಸಿದೆ.

Published : October 13, 2025 at 1:50 PM IST
ಬೆಂಗಳೂರು: ಆನ್ಲೈನ್ ಮತ್ತು ಆಫ್ಲೈನ್ ಅಕ್ರಮ ಬೆಟ್ಟಿಂಗ್ ಆರೋಪ ಪ್ರಕರಣ ಸಂಬಂಧ ಚಿತ್ರದುರ್ಗದ ಶಾಸಕ ಕೆ.ಸಿ.ವೀರೇಂದ್ರ ಅವರನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿ ಶಾಸಕರ ಪತ್ನಿ ಡಿ.ಆರ್.ಚೈತ್ರಾ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ಆದೇಶವನ್ನು ಕಾಯ್ದಿರಿಸಿದೆ.
ಕೆ.ಸಿ.ವೀರೇಂದ್ರ ಅವರನ್ನು ಪಿಎಂಎಲ್ ಕಾಯ್ದೆಯಡಿ ಜಾರಿ ನಿರ್ದೇಶನಾಲಯವು ಬಂಧಿಸಿರುವ ಕ್ರಮ ಕಾನೂನುಬಾಹಿರ ಎಂದು ಘೋಷಿಸುವಂತೆ ಪತ್ನಿ ಚೈತ್ರಾ ತಮ್ಮ ಅರ್ಜಿಯಲ್ಲಿ ಕೋರಿದ್ದರು. ಅದರ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ನ್ಯಾಯಪೀಠ, ತೀರ್ಪು ಕಾಯ್ದಿರಿಸಿತು.
ಜಾರಿ ನಿರ್ದೇಶನಾಲಯದ ಪರ ವಕೀಲರ ವಾದ ಮಂಡನೆ: ವಿಚಾರಣೆ ವೇಳೆ, ಶಾಸಕ ವೀರೇಂದ್ರ ಅವರನ್ನು ಬಂಧಿಸಿರುವ ಕ್ರಮವನ್ನು ಸಮರ್ಥಿಸಿಕೊಂಡ ಜಾರಿ ನಿರ್ದೇಶನಾಲಯದ ಪರ ವಾದ ಮಂಡಿಸಿದ ಸಹಾಯಕ ಸಾಲಿಸಿಟರ್ ಜನರಲ್, ಅರವಿಂದ ಕಾಮತ್, ''ಅರ್ಜಿದಾರರ ಪತಿಯ ವಿರುದ್ಧ 30 ಸಾವಿರ ರೂ.ಗಳನ್ನು ವಂಚನೆ ಮಾಡಿರುವ ಆರೋಪ ಸಂಬಂಧ ಸತೀಶ್ ಎಂಬವರು ದೂರು ನೀಡಿದ್ದರು. ಅದಕ್ಕೆ ಸಂಬಂಧಿಸಿದಂತೆ ಮಾತ್ರ ತನಿಖೆ ನಡೆಯುತ್ತಿಲ್ಲ. ಆ ಆರೋಪಕ್ಕೆ ಸಂಬಂಧಿಸಿದಂತೆ ಸುತ್ತಲಿನ ಪ್ರಕರಣಗಳ ತನಿಖೆ ಮತ್ತು ವಿಚಾರಣೆ ನಡೆಯಲಿದೆ'' ಎಂದರು.
''ಅಲ್ಲದೇ, ಆನ್ಲೈನ್ ಹಣ ವರ್ಗಾವಣೆ (ಫೋನ್ ಪೇ) ಮಾಡಿರುವ ಸಂಬಂಧವೂ ತನಿಖೆ ನಡೆಸಬೇಕಾಗಿದೆ. ಬೇರೆ ಬೇರೆ ಕಂಪನಿಗಳ ಮೂಲಕ ಅರ್ಜಿದಾರರ ಪತಿ ವ್ಯವಹಾರ ನಡೆಸುತ್ತಿದ್ದಾರೆ. ಗೇಮಿಂಗ್ ಕಂಪನಿಗಳ ಮೂಲಕ ಗ್ರಾಹಕರನ್ನು ವಂಚನೆ ಮಾಡಿದ್ದಾರೆ. ಕೆವೈಸಿ ನೀಡದೆಯೂ ಹಣ ಪಡೆಯಲಾಗುತ್ತಿದೆ. ರಾಜ್ಯದಲ್ಲಿ ಅಕ್ರಮ ಬೆಟ್ಟಿಂಗ್ ಮಾಡಿ, ಸಂಗ್ರಹಿಸಿದ ಹಣವನ್ನು ಶ್ರೀಲಂಕಾ ದುಬೈ ಸೇರಿದಂತೆ ವಿದೇಶಗಳಲ್ಲಿ ಕೆಸಿನೋಗಾಗಿ ಹೂಡಿಕೆ ಮಾಡಲಾಗಿದೆ. ಅರ್ಜಿದಾರರ ಪತಿಯ ವಿರುದ್ಧದ ಎಲ್ಲ ಆರೋಪಗಳನ್ನು ಕ್ರೋಢೀಕರಿಸಿ ತನಿಖೆ ನಡೆಸಲಿದೆ. ಹೀಗಾಗಿ, ಅರ್ಜಿ ವಜಾಗೊಳಿಸಬೇಕು'' ಎಂದು ಮನವಿ ಮಾಡಿದರು.
ಅರ್ಜಿದಾರರ ಪರ ವಕೀಲರ ವಾದ: ಇದಕ್ಕೂ ಮುನ್ನ, ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ''ವೀರೇಂದ್ರ ವಿರುದ್ಧ 2011ರ ಕ್ರಿಕೆಟ್ ಬೆಟ್ಟಿಂಗ್ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆ ಪ್ರಕರಣದ ಆರೋಪಗಳಿಂದ 2014ರಲ್ಲಿ ಅವರು ಖುಲಾಸೆಯಾಗಿದ್ದರು. ಇದೇ ಪ್ರಕರಣ ಸಂಬಂಧ 2015ರ ಮತ್ತೊಂದು ಎಫ್ಐಆರ್ನ್ನು ಹೈಕೋರ್ಟ್ ರದ್ದು ಮಾಡಿದೆ. 2016ರಲ್ಲಿ ದಾಖಲಾದ ಪ್ರಕರಣದಲ್ಲಿ ಕೆ.ಸಿ.ವೀರೇಂದ್ರ ಅವರು ಆರೋಪಿಯಾಗಿರಲಿಲ್ಲ. 2022ರ ದಾಖಲಾದ ಪ್ರಕರಣ ಸಂಬಂಧ ಆರೋಪಪಟ್ಟಿಯಲ್ಲಿ ವೀರೇಂದ್ರ ಅವರ ಹೆಸರನ್ನು ಕೈಬಿಡಲಾಗಿತ್ತು. ಮತ್ತೆರಡು ಪ್ರಕರಣಗಳು 2024ರಲ್ಲಿ ಮುಕ್ತಾಯಗೊಂಡಿವೆ. ಮುಕ್ತಾಯಗೊಂಡಿರುವ ಪ್ರಕರಣಗಳನ್ನು ಉಲ್ಲೇಖಿಸಿ ಇ.ಡಿ ಪ್ರಕರಣ (ಇಸಿಐಆರ್) ದಾಖಲಿಸಿಕೊಳ್ಳಲಾಗಿದೆ'' ಎಂದು ತಿಳಿಸಿದರು.
''ಅಲ್ಲದೇ, ವೀರೇಂದ್ರ ಅವರು ಸಿಕ್ಕಿಂನಲ್ಲಿ ಇದ್ದಾಗ ಮನೆ, ವ್ಯಾಪಾರ ಸ್ಥಳದಲ್ಲಿ ಇ.ಡಿ ದಾಳಿ ನಡೆಸಿದೆ. ಅಂದರೆ ವೀರೇಂದ್ರ ಅವರ ಅನುಪಸ್ಥಿತಿಯಲ್ಲಿ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ಮಾಡಲಾಗಿದೆ. ಪಿಎಂಎಲ್ ಕಾಯ್ದೆಯಡಿ ಯಾವುದೇ ಅನುಸೂಚಿತ ಪ್ರಕರಣ ಇಲ್ಲದಿದ್ದರೂ ವೀರೇಂದ್ರ ಅವರನ್ನು ಬಂಧಿಸಲಾಗಿದೆ. ಪಿಎಂಎಲ್ ಕಾಯ್ದೆಯಡಿ ಶಾಸಕರನ್ನು ಬಂಧಿಸುವ ಮುನ್ನ ಸಮನ್ಸ್ ನೀಡಬೇಕು. ಆದರೆ, ಈ ಪ್ರಕರಣದಲ್ಲಿ ಬಂಧನ ಮಾಡುವವರೆಗೂ ಸಮನ್ಸ್ ನೀಡಿಲ್ಲ. ಬಂಧನ ಮೆಮೊವನ್ನು ಸಕಾಲಕ್ಕೆ ನೀಡಿಲ್ಲ. ಯಾವ ಆಧಾರದಲ್ಲಿ ಬಂಧಿಸಲಾಗುತ್ತಿದೆ ಎಂಬುದಕ್ಕೆ ಸೂಕ್ತ ಕಾರಣ ನೀಡಿಲ್ಲ'' ಎಂದು ವಕೀಲರು ವಿವರಣೆ ಕೊಟ್ಟರು.
ಪ್ರಕರಣದ ಹಿನ್ನೆಲೆ: ಅಕ್ರಮವಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಆನ್ಲೈನ್ ಮತ್ತು ಆಫ್ಲೈನ್ ಬೆಟ್ಟಿಂಗ್ ನಡೆಸಿದ ಆರೋಪದಲ್ಲಿ ಶಾಸಕ ವೀರೇಂದ್ರ ಅವರನ್ನು ಬಂಧಿಸಲಾಗಿತ್ತು. ಇದನ್ನು ಪ್ರಶ್ನಿಸಿರುವ ಅವರ ಪತ್ನಿ, ತನ್ನ ಪತಿಯನ್ನು ಕಾನೂನುಬಾಹಿರವಾಗಿ ಬಂಧನ ಮಾಡಲಾಗಿದೆ. ಇದು ಸಂವಿಧಾನದ ಪರಿಚ್ಛೇದ 19 ಮತ್ತು 21ರಲ್ಲಿ ಲಭ್ಯವಾಗಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ. ಆದ್ದರಿಂದ ತಕ್ಷಣ ವೀರೇಂದ್ರ ಅವರನ್ನು ಬಿಡುಗಡೆ ಮಾಡಲು ನಿರ್ದೇಶನ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಮರ್ಯಾದಾ ಹತ್ಯೆ: 9 ತಿಂಗಳ ಗರ್ಭಿಣಿಯನ್ನು ಸುಟ್ಟು ಕೊಂದ ಸಹೋದರರಿಗೆ ಗಲ್ಲು ಶಿಕ್ಷೆ, ಉಳಿದವರಿಗೆ ಜೀವಾವಧಿ ಶಿಕ್ಷೆ

