ಬೆಂಗಳೂರು: ವಿಶ್ವ ಗಾಣಿಗ ಸಮುದಾಯ ಚಾರಿಟಬಲ್ ಟ್ರಸ್ಟ್ ಬಜೆಟ್ನಲ್ಲಿ ಘೋಷಣೆ ಮಾಡಿದ್ದ 3.5 ಕೋಟಿ ರೂ.ಗಳ ಅನುದಾನದಲ್ಲಿ ಬಾಕಿಯಿರುವ 1.5 ಕೋಟಿ ರೂ. ಹಣವನ್ನು ಮುಂದಿನ ಒಂದು ತಿಂಗಳ ಒಳಗೆ ಬಿಡುಗಡೆಗೆ ಮಾಡದಿದ್ದಲ್ಲಿ, ಬಾಕಿಯಿರುವ ದಿನದಿಂದ ಬಿಡುಗಡೆಯಾಗುವವರೆಗೆ ಶೇ.6 ಬಡ್ಡಿಯನ್ನು ರಾಜ್ಯ ಸರ್ಕಾರ ಪಾವತಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಪೂರ್ಣಾನಂದಪುರಿ ಸ್ವಾಮೀಜಿ (ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ) ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿತು.
ಟ್ರಸ್ಟ್ಗೆ ಮಂಜೂರು ಮಾಡುವುದಾಗಿ ಘೋಷಣೆ ಮಾಡಿ ಬಾಕಿ ಪಾವತಿಸಬೇಕಾಗಿರುವ 1.5 ಕೋಟಿಗೆ ಬಿಡುಗಡೆ ಮಾಡದಿರುವ ಸಂಬಂಧ 2025ರ ಮಾರ್ಚ್ 21ರಂದು ಹೊರಡಿಸಿರುವ ಆದೇಶವನ್ನು ನ್ಯಾಯಾಲಯದ ಮುಂದೆ ಇಡಲಾಗಿದೆ. ಆ ದಾಖಲೆಯು ನಂಬಿಕೆ ಸೃಷ್ಟಿಸುತ್ತಿಲ್ಲ. ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿರುವಾಗ ಅಥವಾ ವಿಚಾರಣೆ ಮುಗಿದ ಬಳಿಕ ಹಣಕಾಸು ಇಲಾಖೆ ಸ್ಪಷ್ಟನೆ ಕೇಳಿದೆ. ಹಾಗಾದರೆ, ಹೇಗೆ ಹಣಕಾಸು ಇಲಾಖೆ 1.5 ಕೋಟಿ ನೀಡಬೇಕು ಎಂದು ಪ್ರಶ್ನಿಸಿದ್ದು, ಅರ್ಥವಾಗದ ವಿಚಾರವಾಗಿದೆ.
ಹಣ ಬಿಡುಗಡೆ ಮಾಡುವಂತೆ ಸೂಚಿಸಿದರೂ ಬಿಡುಗಡೆ ಆಗದಿರುವುದು ಆಘಾತಕಾರಿ ಎಂದ ಕೋರ್ಟ್: ಮುಖ್ಯಮಂತ್ರಿ ಹಣಕಾಸು ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಯು ಹಣ ಬಿಡುಗಡೆ ಮಾಡುವಂತೆ ಸೂಚಿಸಿದ್ದರೂ ಅದು ಇನ್ನೂ ಬಿಡುಗಡೆಯಾಗದಿರುವುದು ನ್ಯಾಯಾಲಯಕ್ಕೆ ಆಘಾತ ಉಂಟು ಮಾಡಿದೆ. ಹೀಗಾಗಿ, ಈ ಆದೇಶದ ಪ್ರತಿ ಸಿಕ್ಕ ದಿನದಿಂದ ಒಂದು ತಿಂಗಳಲ್ಲಿ ಬಾಕಿ 1.5 ಕೋಟಿಯನ್ನು ಟ್ರಸ್ಟ್ಗೆ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಬಿಡುಗಡೆ ಬಾಕಿ ಇರುವ ದಿನದಿಂದ ಶೇ.6ರ ಬಡ್ಡಿದರಲ್ಲಿ ಹಣ ಪಾವತಿಸಬೇಕು ಎಂದು ಪೀಠ ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಗಾಣಿಗ ಟ್ರಸ್ಟ್ನ ಸರ್ವಾಂಗೀಣ ಅಭಿವೃದ್ಧಿಗೆ 3.5 ಕೋಟಿ ಬಿಡುಗಡೆ ಮಾಡಲು ಹಿಂದಿನ ಬಿಜೆಪಿ ಸರ್ಕಾರ ಆದೇಶಿಸಿತ್ತು. ಇದಕ್ಕೆ ಪ್ರಸ್ತುತದ ಮುಖ್ಯಮಂತ್ರಿಗಳು ಸಹಮತಿ ವ್ಯಕ್ತಪಡಿಸಿದ್ದರು. ಹಿಂದುಳಿದ ವರ್ಗಗಳ ಇಲಾಖೆಯ ಆದೇಶ ಹೊರತುಪಡಿಸಿ ಹಣಕಾಸು ಇಲಾಖೆ ಆದೇಶ ಮತ್ತಿತರ ಕಡೆ ಹಣ ಬಿಡುಗಡೆ ಮಾಡದಂತೆ ಯಾವುದೇ ಮಾರ್ಪಾಡು ಮಾಡಲಾಗಿಲ್ಲ. ಅದಾಗ್ಯೂ, ಹಣ ಬಿಡುಗಡೆ ಮಾಡುತ್ತಿಲ್ಲಎಂದು ವಿವರಿಸಿದರು.
ಇದಕ್ಕೆ ಪೀಠ, ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ನೀಡಿರುವ ನಿರ್ದೇಶನಕ್ಕೆ ವಿರುದ್ಧವಾಗಿ ಹೇಗೆ ವಾದಿಸುತ್ತೀರಿ?. ಹೆಚ್ಚುವರಿ ಸರ್ಕಾರಿ ವಕೀಲರು 1.5 ಕೋಟಿ ಬಿಡುಗಡೆ ಮಾಡಲ್ಲ ಎನ್ನುತ್ತಿದ್ದಾರೆ. ಬಿಡುಗಡೆ ಮಾಡದಿರುವುದನ್ನು ಹೇಗೆ ಸಮರ್ಥಿಸುತ್ತೀರಿ?” ಎಂದು ನ್ಯಾಯಾಲಯವು ಪ್ರಶ್ನಿಸಿತು.
ಇದಕ್ಕೆ ಸರ್ಕಾರಿ ವಕೀಲರು, 2023ರ ಜನವರಿ 18 ರಂದು 3.5 ಕೋಟಿ ಬಿಡುಗಡೆ ಮಾಡಲಾಗಿದ್ದ ಆದೇಶದ ಪೈಕಿ 2 ಕೋಟಿ ಬಿಡುಗಡೆ ಮಾಡಲಾಗಿದೆ. ಉಳಿದ 1.5 ಕೋಟಿ ಬಿಡುಗಡೆ ಮಾಡದಂತೆ ಆದೇಶಿಸಲಾಗಿದೆ. ಹಣಕಾಸು ಇಲಾಖೆಗೆ 2025ರ ಮಾರ್ಚ್ 21 ರಂದು ಹಣ ಮಂಜೂರಾತಿ ರದ್ದುಪಡಿಸಿರುವ ಆದೇಶದ ಬಗ್ಗೆ ತಿಳಿದಿರಲಿಲ್ಲ. ಹೀಗಾಗಿ, ಹಣಕಾಸು ಇಲಾಖೆಗೆ ಒಪ್ಪಿಗೆ ನೀಡಿತ್ತು ಎಂದು ಸಮರ್ಥನೆ ನೀಡಿದರು.
ಈ ವಾದವನ್ನು ಒಪ್ಪದ ಪೀಠ, ನ್ಯಾಯಾಲಯವು ನೋಟಿಸ್ ನೀಡಿದ ಬಳಿಕ ತಪ್ಪುಗಳನ್ನು ಸರಿಪಡಿಸುವುದನ್ನು ಸರ್ಕಾರ ನಿಲ್ಲಿಸಬೇಕು. ಪ್ರಕರಣದ ಪೂರ್ವದಲ್ಲೇ ತಪ್ಪನ್ನು ಸರಿಪಡಿಸಬೇಕಿತ್ತು. ನ್ಯಾಯಾಲಯ ನೋಟಿಸ್ ಜಾರಿ ಮಾಡುತ್ತದೆ ಎನ್ನುವಾಗ ಸರ್ಕಾರದ ಆದೇಶ ತರುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಪೀಠ ತಿಳಿಸಿತು.
ಪ್ರಕರಣದ ಹಿನ್ನೆಲೆ: ವಿಶ್ವ ಗಾಣಿಗರ ಸಮುದಾಯ ಚಾರಿಟಬಲ್ ಟ್ರಸ್ಟ್ಗೆ ಬಜೆಟ್ನಲ್ಲಿ 3.5 ಕೋಟಿ ಅನುದಾನ ಘೋಷಣೆ ಮಾಡಲಾಗಿತ್ತು. ಮುಖ್ಯಮಂತ್ರಿಯವರ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಅನುಮೋದನೆ ಸಹ ಕೊಟ್ಟಿತ್ತು. ಅದರಂತೆ 2 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಆ ಹಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಹಣ ಬೇಕಾಗಿದೆ. ಆದ್ದರಿಂದ, ಬಾಕಿ ಉಳಿದಿರುವ 1.5 ಕೋಟಿ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಲಾಗಿತ್ತು.
ಇದನ್ನೂ ಓದಿ: ಮುಡಾ ಮಾಜಿ ಆಯುಕ್ತ ನಟೇಶ್ ವಿರುದ್ಧದ ಸಮನ್ಸ್ ರದ್ದುಗೊಳಿಸಿದ ಆದೇಶದಿಂದ ಇತರ ಆರೋಪಿಗಳ ವಿಚಾರಣೆ ಕಷ್ಟವಾಗುತ್ತದೆ: ಇ.ಡಿ ವಾದ
ಇದನ್ನೂ ಓದಿ: ಅಭಿಯೋಗ, ಸರ್ಕಾರಿ ವ್ಯಾಜ್ಯಗಳ ಇಲಾಖೆ ಅಧಿಕಾರಿ ನೇಮಕ ಪ್ರಶ್ನಿಸಿ ಅರ್ಜಿ: ಸರ್ಕಾರಕ್ಕೆ ನೋಟಿಸ್