ಬೆಂಗಳೂರು: ಕಾರ್ಪೋರೇಟ್ ದಿವಾಳಿ ಪರಿಹಾರ ಪ್ರಕ್ರಿಯೆ (ಸಿಐಆರ್ಪಿ) ಅಥವಾ ತನಿಖೆಗೆ ನೆರವಾಗುವ ಸಲುವಾಗಿ ಬೈಜೂಸ್ನ ಪಾಲುದಾರರೊಂದಿಗೆ ಇ-ಮೇಲ್ ಸಂಭಾಷಣೆಗಳನ್ನು ಸಂರಕ್ಷಣೆ ಮಾಡುವಂತೆ ಬೈಜೂಸ್ನ ಥಿಂಕ್ ಆ್ಯಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್ (ಟಿಎಲ್ಪಿಎಲ್) ಸಂಸ್ಥೆಗೆ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.
ಬೈಜೂಸ್ನಿಂದ ಅಮಾನತುಗೊಂಡಿದ್ದ ಬೈಜು ರವೀಂದ್ರನ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಈ ಆದೇಶ ನೀಡಿದೆ.
ಅಲ್ಲದೆ, ಏಪ್ರಿಲ್ 8ರಂದು ನಡೆದ ಬೈಜೈಸ್ನ ಸಾಲಗಾರರ ಸಮಿತಿ (ಸಿಒಸಿ) ವಿಷಯಗಳು ಸೇರಿದಂತೆ ಇತರೆ ಅಂಶಗಳನ್ನು ಸಂಬಂಧಪಟ್ಟ ಪ್ರಶ್ನೆಗಳನ್ನು ನೊಂದ ಪಕ್ಷಗಾರರು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣದ ಮುಂದೆ ಹೋಗಬಹುದು ಎಂದು ಪೀಠ ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ಬೈಜೂಸ್ ಪ್ರಕರಣ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣದ (ಎನ್ಸಿಎಲ್ಟಿ) ವಿಚಾರಣಾ ಹಂತದಲ್ಲಿದೆ. ಆದ್ದರಿಂದ ಅರ್ಜಿದಾರ ರವೀಂದ್ರನ್ ಅವರು ಕಂಪೆನಿಯ ಇತರೆ ಪಾಲುದಾರರೊದಿಗೆ ಹಂಚಿಕೊಂಡಿರುವ ಇ-ಮೇಲ್ ಸಂದೇಶಗಳು ಸಾಕ್ಷ್ಯಾಧಾರಗಳಾಗಿವೆ. ಅಂಶಗಳನ್ನು ಅಳಿಸಿದಲ್ಲಿ (ಡಿಲಿಟ್ ಮಾಡುವುದು) ವಿಚಾರಣೆಗೆ ಪ್ರತಿಕೂಲ ಪರಿಣಾಮ ಬೀರಲಿದೆ. ಅಲ್ಲದೆ, ಇ-ಮೇಲ್ ಸಂದೇಶಗಳು ಅಗತ್ಯವಾಗಿದೆ. ಅವುಗಳನ್ನು ಅಳಿಸುವುದಕ್ಕೆ ಅನುಮತಿ ನೀಡಬಾರದು'' ಎಂದು ಪೀಠಕ್ಕೆ ವಿವರಿಸಿದರು.
ಸರ್ಕಾರದ ಪರ ವಕೀಲರು ವಾದ ಮಂಡಿಸಿ, ''ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ದೂರಿನ ಸಂಬಂಧ ಹೈಕೋರ್ಟ್ನ ಮತ್ತೊಂದು ಪೀಠ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ನೀಡಿದೆ. ಈ ಆದೇಶದಿಂದಾಗಿ ಪ್ರಕರಣದ ವಿಚಾರಣೆ ಮುಂದುವರೆಸಲಾಗಿಲ್ಲ'' ಎಂದು ಪೀಠಕ್ಕೆ ತಿಳಿಸಿದರು.
ಇದನ್ನೂ ಓದಿ: ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನು ಸಾರ್ವಜನಿಕ ಕಚೇರಿ ಸೇವಕ ಎಂದು ಪರಿಗಣಿಸಲಾಗದು: ಹೈಕೋರ್ಟ್ ಆದೇಶ - HIGH COURT