ಬೆಂಗಳೂರು: ಸರ್ಕಾರಿಂದ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೊಬ್ಬರಿಗೆ ಮಂಜೂರಾಗಿದ್ದ ಜಮೀನನ್ನು ಒಬ್ಬ ವ್ಯಕ್ತಿಗೆ ಮಾರಿದ ಬಳಿಕ ಮತ್ತೊಬ್ಬರಿಗೆ ನೋಂದಣಿ ಮಾಡಿಕೊಟ್ಟ ಕುರಿತು ಮರೆಮಾಚಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲ ಜಮೀನುಗಳ ಪರಾಭಾರೆ ನಿಷೇಧ) ಕಾಯ್ದೆ(ಪಿಟಿಸಿಎಲ್) ಅಡಿ ಜಮೀನಿನ ಹಕ್ಕು ಪುನರ್ಸ್ಥಾಪಿಸಲು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ಕುಟುಂಬದ ಸದಸ್ಯರಿಗೆ ಉಚ್ಚ ನ್ಯಾಯಾಲಯವು 25 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಅಲ್ಲದೆ, ದಂಡದ ಮೊತ್ತವನ್ನು 6 ವಾರಗಳಲ್ಲಿ ಕರ್ನಾಟಕ ರಾಜ್ಯ ವಕೀಲರ ಕಲ್ಯಾಣ ನಿಧಿಗೆ ಪಾವತಿಸಬೇಕು. ತಪ್ಪಿದಲ್ಲಿ ಹೈಕೋರ್ಟ್ ರಿಜಿಸ್ಟ್ರಾರ್ ಅವರು ಈ ಮೊತ್ತವನ್ನು ಮೇಲ್ಮನವಿದಾರರಿಂದ ವಸೂಲಿ ಮಾಡಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
ಆನೇಕಲ್ ತಾಲೂಕಿನ ಸಿಂಗೇನ ಅಗ್ರಹಾರದಲ್ಲಿ ಸರ್ಕಾರದಿಂದ ಮಂಜೂರಾಗಿದ್ದ ಜಮೀನನ್ನು ಮಾರಾಟ ಮಾಡಿ, ಮತ್ತೆ ಕಾನೂನು ಹೋರಾಟ ನಡೆಸಿದ್ದ ಚಿಕ್ಕವೆಂಕಟಮ್ಮ ಎಂಬವರು ವಾರಸುದಾರರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ವಕೀಲರ ವಾದ ಕಾನೂನಿನ ಸಂಪೂರ್ಣ ದುರುಪಯೋಗ: ಮೇಲ್ಮನವಿ ವಿಚಾರಣೆ ನಡೆಸಿದ್ದ ನ್ಯಾಯಪೀಠ, ''ಪ್ರಸ್ತುತ ಅರ್ಜಿ ಸಲ್ಲಿಸಿದ್ದ ಜಮೀನನ್ನು ಸುಧಾಕರ್ ಎಂಬವರಿಗೆ ಮಾರಾಟ ಮಾಡಿದ್ದ ಹೊರತಾಗಿಯೂ ವೆಂಕಟೇಶ್ ಎಂಬವರಿಗೆ ಮರು ಮಾರಾಟದ ನೋಂದಣಿ ಮಾಡಿಕೊಟ್ಟಿರುವುದು ಗೊತ್ತಾಗಿದೆ. ಅಲ್ಲದೆ, ಮೇಲ್ಮನವಿದಾರರ ಪರ ವಕೀಲರು, ಈ ಅಂಶವನ್ನು ಒಪ್ಪಿಕೊಂಡಿದ್ದು, ಇದು ಮೇಲ್ಮನವಿದಾರರ ವಿಶ್ವಾಸಾರ್ಹತೆಯ ಮೇಲೆ ಪರಿಣಾಮ ಬೀರುವಂತಾಗಿದೆ. ಹೀಗಿದ್ದರೂ, ಸರ್ಕಾರದಿಂದ ಜಮೀನು ಮಂಜೂರಾದವರು ಅನಕ್ಷರಸ್ಥರಾಗಿದ್ದು, ಹಣದ ಆಮಿಷ ನೀಡಿ, ಜಮೀನು ಖರೀದಿಸಿದ್ದಾರೆ ಎಂಬುದಾಗಿ ಮೇಲ್ಮನವಿದಾರರ ಪರ ವಕೀಲರ ವಾದ ಕಾನೂನಿನ ಪ್ರಕ್ರಿಯೆಯ ಸಂಪೂರ್ಣ ದುರುಪಯೋಗವಾಗಿದೆ'' ಎಂದು ಪೀಠ ತಿಳಿಸಿದೆ.
''ಅಲ್ಲದೆ, ಜಮೀನಿನ ಹಕ್ಕನ್ನು ಮೇಲ್ಮನವಿದಾರರಿಗೆ ಪುನರ್ ಸ್ಥಾಪಿಸಿರುವ ಜಿಲ್ಲಾಧಿಕಾರಿಗಳ ಕ್ರಮ ರದ್ದುಪಡಿಸಿರುವ ಏಕಸದಸ್ಯ ಪೀಠದ ಆದೇಶದಲ್ಲಿ ದೋಷವಿಲ್ಲ. ಹೀಗಾಗಿ, ಮೇಲ್ಮನವಿ ಅರ್ಜಿ ವಜಾಗೊಳಿಸುತ್ತಿರುವುದಾಗಿ'' ಪೀಠ ಹೇಳಿದೆ.
ಶೀಘ್ರ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ: ಪಿಟಿಸಿಎಲ್ ಕಾಯ್ದೆಯನ್ನು ಸಾಮಾಜಿಕ ಮತ್ತು ಅರ್ಥಿಕವಾಗಿ ತುಳಿತಕ್ಕೊಳಗಾದವರಿಗೆ ಸಹಾಯಹಸ್ತ ನೀಡುವ ಸಲುವಾಗಿ ಜಾರಿ ಮಾಡಲಾಗಿದೆ. ಕಾಯ್ದೆಯಲ್ಲಿ ಸರ್ಕಾರದಿಂದ ಮಂಜೂರಾದ ಜಮೀನನ್ನು ಪರಭಾರೆ ನಿಷೇಧವಿದ್ಧರೂ, ಶ್ರೀಮಂತರು ಹಾಗು ಪ್ರಬಲ ವರ್ಗಕ್ಕೆ ಸೇರಿದವರು ಆ ಜಮೀನನ್ನು ಪಡೆಯುವುದಕ್ಕಾಗಿ ಅನುದಾನಿತರ ಬಡತನ ಮತ್ತು ಅವಿದ್ಯಾವಂತಿಕೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಪಿಟಿಸಿಎಲ್ ಕಾಯ್ದೆಯಡಿ ಸಲ್ಲಿಕೆಯಾಗುವ ಅರ್ಜಿಗಳ ವಿಚಾರಣಾ ಪ್ರಕ್ರಿಯೆ ಆರಂಭಿಸಲು ಅಧಿಕಾರಿಗಳಿಗೆ ಇಚ್ಛಾಶಕ್ತಿಯಿಲ್ಲವಾಗಿದೆ. ಕಾಯ್ದೆಯಲ್ಲಿನ ನಿಯಮಗಳನ್ನು ಸ್ವಯಂಪ್ರೇರಿತವಾಗಿ ಜಾರಿ ಮಾಡಲು ಅಧಿಕಾರಿಗಳಿಗೆ ಅಧಿಕಾರ ನೀಡಿದ್ದರೂ, ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಹೀಗಾಗಿ, ಕಾಯ್ದೆಯ ನಿಯಮಗಳನ್ನು ಸರಿಯಾದ ರೀತಿಯಲ್ಲಿ ಜಾರಿ ಮಾಡದಿದ್ದಲ್ಲಿ ಫಲಾನುಭವಿಗಳು ಬಲಿಪಶುಗಳಾಗುವಂತಾಗಿದೆ ಎಂದು ಪೀಠ ಬೇಸರ ವ್ಯಕ್ತಪಡಿಸಿತು.
ಆದ್ದರಿಂದ ಪಿಟಿಸಿಎಲ್ ಕಾಯ್ದೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ನಿಯಮಗಳಂತೆ ತಕ್ಷಣ ಕ್ರಮಕ್ಕೆ ಮುಂದಾಗದ ಅಧಿಕಾರಿಗಳು ಕ್ರಮ ಕೈಗೊಳ್ಳುವುದಕ್ಕಾಗಿ ರಾಜ್ಯ ಸರ್ಕಾರ ಅಗತ್ಯ ಕಾರ್ಯವಿಧಾನ ಜಾರಿ ಮಾಡಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸರ್ಜಾಪುರದ ಸಿಂಗೇನ ಅಗ್ರಹಾರ ಗ್ರಾಮದಲ್ಲಿ 1 ಎಕರೆ ಭೂಮಿಯನ್ನು 1982ರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಚಿಕ್ಕವೆಂಕಟಮ್ಮ ಎಂಬವರಿಗೆ ಸರ್ಕಾರ ಮಂಜೂರು ಮಾಡಿತ್ತು. ಈ ಜಮೀನನ್ನು ಚಿಕ್ಕವೆಂಕಟಮ್ಮ ಟಿ.ಸುಧಾಕರ್ ಅವರಿಗೆ 1996ಲ್ಲಿ ಮಾರಾಟಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಬಳಿಕ 1998ರಲ್ಲಿ ಸುಧಾಕರ್ ಅವರ ಹೆಸರಿಗೆ ನೋಂದಣಿ ಮಾಡಿಕೊಳ್ಳಲಾಗಿತ್ತು. ಇದಾದ ನಂತರ ಸುಧಾಕರ್ ಅವರು ಜಮೀನು ಮಾರಾಟಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಅನುಮತಿ ಪಡೆದ ಬಳಿಕ ತಿಪ್ಪಯ್ಯ ಎಂಬವರಿಗೆ 2004ರಲ್ಲಿ ಮಾರಾಟ ಮಾಡಿದ್ದರು.
ಜಮೀನು ಖರೀದಿಸಿದ್ದವರನ್ನು ಪ್ರತಿವಾದಿಯನ್ನಾಗಿ ಮಾಡಿರಲಿಲ್ಲ: ಇದಾದ ನಂತರ, ಚಿಕ್ಕವೆಂಕಟಮ್ಮ ಅವರ ಪುತ್ರ ವೆಂಕಟಸ್ವಾಮಿ ಅವರು ಪಿಟಿಸಿಎಲ್ ಕಾಯಿದೆಯಡಿ ತಮ್ಮ ತಾಯಿಗೆ ಮಂಜೂರಾಗಿದ್ದ ಜಮೀನನ್ನು ಪುನಃ ತಮ್ಮ ಹೆಸರಿಗೆ ಮರುಸ್ಥಾಪನೆ ಮಾಡುವಂತೆ ಕೋರಿ ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿಗೆ 2005ರಲ್ಲಿ ಮನವಿ ಸಲ್ಲಿಸಿದ್ದರು. ಈ ಪ್ರಕ್ರಿಯೆಲ್ಲಿ ಜಮೀನು ಮೊದಲು ಖರೀದಿಸಿದ್ದ ಸುಧಾಕರ್ ಅವರನ್ನು ಪ್ರತಿವಾದಿ ಮಾಡಿದ್ದರು. ಆದರೆ, ಸುಧಾಕರ್ ಅವರಿಂದ ಜಮೀನು ಖರೀದಿ ಮಾಡಿದ್ದ ತಿಪ್ಪಯ್ಯ ಎಂಬವರನ್ನು ಪ್ರತಿವಾದಿಯನ್ನಾಗಿ ಮಾಡಿರಲಿಲ್ಲ. ಆದರೂ ಈ ಅರ್ಜಿಯನ್ನು ಉಪವಿಭಾಗಾಧಿಕಾರಿಗಳು ತಿರಸ್ಕರಿಸಿದ್ದರು.
ಈ ನಡುವೆ ಜಮೀನಿನ ಮೂಲ ಮಂಜೂರುದಾರರಾದ ಚಿಕ್ಕವೆಂಕಟಮ್ಮ ಮೃತಪಟ್ಟಿದ್ದರು. ಬಳಿಕ ಪ್ರಕರಣವನ್ನು ಅವರ ಮಗ ವೆಂಕಟಸ್ವಾಮಿ ಮುಂದುವರೆಸಿದ್ದರು. ಉಪವಿಭಾಗಾಧಿಕಾರಿಗಳ ಆದೇಶವನ್ನು ಜಿಲ್ಲಾಧಿಕಾರಿಗಳ ಮುಂದೆ ಪ್ರಶ್ನಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ಜಿಲ್ಲಾಧಿಕಾರಿ, ಚಿಕ್ಕವೆಂಕಟಮ್ಮ ಎಂಬವರು ಜಮೀನನ್ನು ಸುಧಾಕರ್ ಅವರಿಗೆ ಮಾರಾಟ ಮಾಡಿದ ಸಂದರ್ಭದಲ್ಲಿ ಸರ್ಕಾರದಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದು ತಿಳಿಸಿ, ಅವರ ಅರ್ಜಿಯನ್ನು ಪುರಸ್ಕರಿಸಿದ್ದರು. ಜೊತೆಗೆ, ಆ ಜಮೀನಿನ ಹಕ್ಕುಗಳನ್ನು ಮರುಸ್ಥಾಪಿಸಿ, ದಾಖಲೆಗಳನ್ನು ಚಿಕ್ಕವೆಂಕಟಮ್ಮ ಅವರ ಕಾನೂನು ವಾರಸುದಾರರ ಹೆಸರಿಗೆ ಮಾಡಿಕೊಡುವಂತೆ ಆದೇಶಿಸಿದ್ದರು.
ಜಿಲ್ಲಾಧಿಕಾರಿ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೊರೆ: ಇದನ್ನು ಪ್ರಶ್ನಿಸಿ ತಿಪ್ಪಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡುವೆ ಚಿಕ್ಕವೆಂಕಟಮ್ಮ ಅವರ ಮಗ ವೆಂಕಟಸ್ವಾಮಿ ಅವರು ಮೃತಪಟ್ಟಿದ್ದರು. ಅವರ ವಾರಸುದಾರರು ಪ್ರಕರಣದಲ್ಲಿ ಪ್ರತಿವಾದಿಗಳಾಗಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಜಿಲ್ಲಾಧಿಕಾರಿ ಆದೇಶವನ್ನು ರದ್ದುಪಡಿಸಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಚಿಕ್ಕವೆಂಕಟಮ್ಮನವರ ವಾರಸುದಾರರು (ಮಗನ ಹೆಂಡತಿ, ಮಕ್ಕಳು) ದ್ವಿಸದಸ್ಯಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಆದರೆ, ಅದೇ ಜಮೀನನ್ನು ಚಿಕ್ಕವೆಂಕಟಮ್ಮ ಅವರ ವಾರಸುದಾರರು ವೆಂಕಟೇಶ್ ಎಂಬುವರಿಗೆ ಮಾರಾಟ ಮಾಡಿ ನೋಂದಾಯಿಸಿದ್ದರು. ಈ ಅಂಶವನ್ನು ಏಕಸದಸ್ಯ ಪೀಠ ಹಾಗೂ ದ್ವಿಸದಸ್ಯ ಪೀಠದಲ್ಲಿ ಅರ್ಜಿ, ಮೇಲ್ಮನವಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ವಿವರಿಸಿರಲಿಲ್ಲ.
ಇದನ್ನೂ ಓದಿ: ಕೊಲೆ ಯತ್ನ, ಸಾರ್ವಜನಿಕ ಆಸ್ತಿ ನಾಶ ಪ್ರಕರಣ: ಮಹಾನಗರ ಪಾಲಿಕೆ ಸದಸ್ಯೆ ಸೇರಿ 11 ಮಂದಿಗೆ ಜೈಲು ಶಿಕ್ಷೆ