ಬೆಂಗಳೂರು: ಅತ್ಯಂತ ಅಪರೂಪದ ನರ ರೋಗದಿಂದ ಬಳಲುತ್ತಾ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಕೋಮಾ ಸ್ಥಿತಿಯಲ್ಲಿರುವ ವೈದ್ಯರೊಬ್ಬರ ಮೂರು ಬ್ಯಾಂಕ್ ಖಾತೆಗಳಿಂದ ಹಣ ಪಡೆದುಕೊಳ್ಳಲು ಪತ್ನಿಗೆ ಅನುಮತಿ ನೀಡುವಂತೆ ಬ್ಯಾಂಕುಗಳಿಗೆ ಆದೇಶಿಸಿ ಹೈಕೋರ್ಟ್ ಆದೇಶಿಸಿದೆ. ಈ ಆದೇಶದಿಂದಾಗಿ ತೀವ್ರ ಸಂಕಷ್ಟದಲ್ಲಿರುವ ಮಹಿಳೆಯೊಬ್ಬರಿಗೆ ನ್ಯಾಯಪೀಠ ನೆರವಾಗಿದೆ.
ಪತಿ ಐಸಿಯುನಲ್ಲಿ ಇರುವುದರಿಂದ ವೈದ್ಯಕೀಯ ಮತ್ತು ಕುಟುಂಬ ದೈನದಿನದ ಖರ್ಚು-ವೆಚ್ಚ ಭರಿಸುವ ಸಲುವಾಗಿ ಹಣ ಪಡೆಯಲು ತಮಗೆ ಅನುಮತಿ ನೀಡುವಂತೆ ಬ್ಯಾಂಕ್ಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ರಾಜಾಜಿನಗರದ ನಿವಾಸಿ ಸಂಧ್ಯಾ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿದೆ.
ಅರ್ಜಿದಾರರ ಪತಿ ಅಪರೂಪದ ಕಾಯಿಲೆಯಿಂದ ನರಳುತ್ತಿದ್ದಾರೆ. ಇದರಿಂದ ಸಂಧ್ಯಾ ಅವರನ್ನು ಪತಿಯ ಗಾರ್ಡಿಯನ್ (ಪಾಲಕರು) ಆಗಿ ನೇಮಕ ಮಾಡಲಾಗುತ್ತಿದೆ. ತಮ್ಮ ಪತಿಗೆ ಸೇರಿದ ಖಾತೆಗಳಿಂದ ಹಣ ಡ್ರಾ ಮಾಡಲು ಸಂಧ್ಯಾ ಅವರಿಗೆ ಬ್ಯಾಂಕ್ಗಳು ಅನುಮತಿ ನೀಡಬೇಕು. ಆ ವಿಚಾರದಲ್ಲಿ ಬ್ಯಾಂಕುಗಳಿಂದ ಯಾವುದೇ ಕಾರಣಕ್ಕೂ ವಿಳಂಬ ಆಗಬಾರದು. ಮತ್ಯಾವುದೇ ಅಗತ್ಯ ಪರಿಸ್ಥಿತಿ ಎದುರಾದರೂ ಅರ್ಜಿದಾರರು ಪುನಾ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ : ಸಂಧ್ಯಾ ಅವರ ಪತ್ನಿ ಡಾ.ಎಚ್.ವಿ. ಅನಿಲ್ ಕುಮಾರ್ ಅವರು 2024ರ ನ.12ರಂದು ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ಆದರೆ, ನಿವೃತ್ತಿ ಹೊಂದುವ ಕೆಲವೇ ತಿಂಗಳ ಮುನ್ನ ಅವರಿಗೆ ಹಲವು ಆರೋಗ್ಯ ಸಮಸ್ಯೆ ಕಂಡು ಬಂದಿತ್ತು. ಇದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಂಗಳೂರು ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯ ನರವಿಜ್ಞಾನ ವಿಭಾಗದಲ್ಲಿ 2024ರ ಜೂ.23ರಿಂದ ಅವರು ಆಸ್ಪತ್ರೆಯಲ್ಲಿ ವೆಂಟಿಲೇಟ್ ಆಧಾರದಲ್ಲಿ ತೀವ್ರ ನಿಗಾ ಘಟಕದಲ್ಲಿದ್ದಾರೆ.
ಬೆಂಗಳೂರು ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯ ನರವಿಜ್ಞಾನ ವಿಭಾಗದ ವೈದ್ಯರು ಡಾ.ಅನಿಲ್ ಕುಮಾರ್ ಅವರು ‘ಗ್ವಿಲೆನ್ ಬ್ಯಾರೆ ಸಿಂಡ್ರೋಮ್ ಎಂಬ ಅಪರೂಪದ ನರ ರೋಗದಿಂದ ಬಳಲುತ್ತಿದ್ದಾರೆ ಎಂದು ಪ್ರಮಾಣೀಕರಿಸಿ, ವೆಂಟಿಲೇಟರ್ ಅಲ್ಲಿಯೇ ಮುಂದುವರಿಯಬೇಕು ಎಂದು ಸೂಚಿಸಿದ್ದರು.
ಅದರಂತೆ 2025ರ ಫೆ.22ರಿಂದ ಮಾ.18ರವರೆಗೆ ವೈದ್ಯರು ಡಾ.ಅನಿಲ್ ಕುಮಾರ್ ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಿದ್ದಾರೆ. ವೆಂಟಿಲೇಟರ್ ವ್ಯವಸ್ಥೆಯು ಶಾಶ್ವತವಾಗಿ ಅಳವಡಿಸಲಾಗಿದೆ. ಇದರಿಂದ ಬರೆಯಲು ಮತ್ತು ಸಹಿ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಅನಿಲ್ ಕುಮಾರ್ ಇದ್ದಾರೆ.
ಆದರೆ, ಅವರ ಮೂರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಅನಿಲ್ ಕುಮಾರ್ ಅವರು ಬರೆಯಲು ಮತ್ತು ಸಹಿ ಮಾಡಲಾಗದ ಪರಿಸ್ಥಿತಿಯಲ್ಲಿ ಇರುವುದರಿಂದ ಬ್ಯಾಂಕ್ನಿಂದ ಹಣ ಡ್ರಾ ಮಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ಪತಿಯ ಮೂರು ಖಾತೆಗಳನ್ನು ನಿರ್ವಹಣೆ ಮಾಡಲು ಮತ್ತು ಖಾತೆಯಿಂದ ಹಣ ಪಡೆದುಕೊಳ್ಳಲು ತಮಗೆ ಅವಕಾಶ ಕಲ್ಪಿಸಬೇಕು ಎಂದು ಕೋರಿ ಸಂಧ್ಯಾ ಅವರ ಬ್ಯಾಂಕ್ಗಳಿಗೆ ಮನಿ ಪ್ರತ್ರ ನೀಡಿ, ಎಲ್ಲಾ ಅಗತ್ಯ ದಾಖಲೆ ಒದಗಿಸಿದ್ದರು. ಆ ಮನವಿಯನ್ನು ಬ್ಯಾಂಕ್ಗಳು ಪರಿಗಣಿಸದ ಹಿನ್ನೆಲೆಯಲ್ಲಿ ಸಂಧ್ಯಾ ಅವರು, ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿದಾರರ ಪರವಾಗಿ ವಕೀಲ ಎಚ್.ವೆಂಕಟೇಶ್ ದೊಡ್ಡೇರಿ ವಾದ ಮಂಡಿಸಿದ್ದರು.
ಇದನ್ನು ಓದಿ: ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಬಾಕಿಯಿರುವ ಕೇಂದ್ರದ ಪಾಲು ಬಿಡುಗಡೆಯಾಗಿಲ್ಲ: ಸಿದ್ದರಾಮಯ್ಯ