ಬೆಂಗಳೂರು: ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲ ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಅದರಲ್ಲಿ ಪ್ರಮುಖವಾಗಿ ಪಡಿತರ ಚೀಟಿಯೂ ಒಂದು.
ರೇಷನ್ ಕಾರ್ಡ್ ಇದ್ದರೆ ಆಯಾ ಕಾರ್ಡ್ಗಳನ್ನು ಅನುಸರಿಸಿ ಬಡ ಮತ್ತು ಮಧ್ಯಮ ವರ್ಗದವರಿಗೆ ಕಡಿಮೆ ದರದಲ್ಲಿ ಅಕ್ಕಿ, ಬೇಳೆ, ಗೋಧಿ, ಸಕ್ಕರೆ ಸೇರಿ ಹಲವು ಆಹಾರ ಪದಾರ್ಥಗಳು ದೊರೆಯುತ್ತದೆ. ಬಿಪಿಎಲ್ ಕಾರ್ಡ್ದಾರರ ಕುಟುಂಬಕ್ಕೆ ಅಕ್ಕಿ, ಗೋಧಿ, ಸಕ್ಕರೆ ಮತ್ತಿತರ ಆಹಾರ ಪದಾರ್ಥಿಗಳು ಉಚಿತವಾಗಿ ದೊರೆತರೆ, ಎಪಿಎಲ್ ಕಾರ್ಡ್ದಾರರಿಗೆ ಸರ್ಕಾರ ನಿಗದಿಪಡಿಸಿದ ಕಡಿಮೆ ದರದಲ್ಲಿ ಪಡಿತರ ಸಿಗುತ್ತದೆ. ಇದರಿಂದ ಹಲವಾರು ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸಬಹುದಾಗಿದೆ. ಇಷ್ಟೇ ಅಲ್ಲದೆ, ರೇಷನ್ ಕಾರ್ಡ್ ಇದ್ದರೆ ಇನ್ನೂ ಹಲವು ಸೌಲಭ್ಯಗಳು ಸರ್ಕಾರದಿಂದ ಉಚಿತವಾಗಿ ಸಿಗುತ್ತವೆ. ಅದೆಷ್ಟೋ ಜನರಿಗೆ ಇದರ ಸರಿಯಾದ ಮಾಹಿತಿ ಇರುವುದಿಲ್ಲ.
ಕಾರ್ಡ್ ಇದ್ದರೆ ಗ್ಯಾಸ್ ಸಿಲಿಂಡರ್, ಆರೋಗ್ಯ ವಿಮೆ, ಶಿಕ್ಷಣಕ್ಕೆ ಆರ್ಥಿಕ ನೆರವು, ಉಚಿತ ಹೊಲಿಗೆ ಯಂತ್ರ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಸರ್ಕಾರದಿಂದ ಯಾವೆಲ್ಲಾ ಸೌಲಭ್ಯಗಳು ಸಿಗುತ್ತವೆ ಎಂಬುದರ ಮಾಹಿತಿ ಇಲ್ಲಿದೆ.
ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು: ಒಂದು ಕುಟುಂಬದ ಆರ್ಥಿಕ ಸ್ಥಿತಿಗತಿಯನ್ನು ರೇಷನ್ ಕಾರ್ಡ್ ತೋರಿಸುತ್ತಿರುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಶಿಕ್ಷಣ ನೆರವು ಯೋಜನೆಗಳಲ್ಲಿ ಅರ್ಹತೆ ರೂಪದಲ್ಲಿ ರೇಷನ್ ಕಾರ್ಡ್ ಬಳಕೆ ಮಾಡಬಹುದು. ಶುಲ್ಕ ಮನ್ನಾ ಹಾಗೂ ವಿದ್ಯಾರ್ಥಿ ವೇತನ ಮತ್ತಿತರ ಸೌಲಭ್ಯ ದೊರೆಯುತ್ತದೆ. ಅಷ್ಟೇ ಅಲ್ಲದೆ, ವ್ಯಕ್ತಿಯ ಹೆಸರು, ವಯಸ್ಸು ಮತ್ತು ವಿಳಾಸ, ಕುಟುಂಬದ ವಿವರಗಳನ್ನು ಒಳಗೊಂಡಿರುವ ಕಾರಣ ರೇಷನ್ ಕಾರ್ಡ್ ಅನ್ನು ಪ್ರಮುಖ ಗುರುತಿನ ಚೀಟಿಯಾಗಿಯೂ ಬಳಸಬಹುದು. ಮತದಾನ ಮತ್ತಿತರ ಕಡೆ ಐಡಿ ಪ್ರೂಪ್ ಆಗಿ ಈ ಕಾರ್ಡ್ ಬಳಕೆ ಮಾಡಬಹುದು. ಕೆಲವು ಪಿಂಚಣಿ ಯೋಜನೆಗಳಿಗೆ ಅಥವಾ ಬ್ಯಾಂಕ್ನಲ್ಲಿ ಖಾತೆ ತೆರೆಯಲು ಸಹ ಪಡಿತರ ಚೀಟಿ ಬಳಸಬಹುದಾಗಿದೆ.
ಉಜ್ವಲ ಗ್ಯಾಸ್ ಸಿಲಿಂಡರ್ : ಅಡುಗೆ ಗ್ಯಾಸ್ ಇಲ್ಲದವರಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್ ಸಿಗುತ್ತದೆ. ರೇಷನ್ ಕಾರ್ಡ್ ಬಳಸಿಕೊಂಡು ಈ ಯೋಜನೆ ಪಡೆಯುಬಹುದಾಗಿದೆ.
ಶ್ರಮಿಕ್ ಕಾರ್ಡ್ : ಅಸಂಘಟಿತ ವಲಯದ ಕಾರ್ಮಿಕರಿಗೆ ಶ್ರಮಿಕ್ ಕಾರ್ಡ್ ಯೋಜನೆಯಡಿ ರೇಷನ್ ಕಾರ್ಡ್ ಆಧಾರವಾಗಿ ಕೆಲಸದ ಲಾಭ, ಉದ್ಯೋಗ ಅವಕಾಶ ಸೇರಿದಂತೆ ಹಲವು ನೆರವು ದೊರೆಯುತ್ತದೆ. ಆ ಮೂಲಕ ಕಾರ್ಮಿಕರು ಕಾನೂನುಬದ್ಧವಾಗಿ ಸರ್ಕಾರದ ಸವಲತ್ತುಗಳನ್ನು ಪಡೆಯಬಹುದು ಎನ್ನುತ್ತಾರೆ ಅಧಿಕಾರಿಗಳು.
ರೈತರ ಬೆಳೆ ವಿಮೆಗೆ ಕಾರ್ಡ್ ಬಳಕೆ : ರೈತರ ಬೆಳೆ ವಿಮೆಗೂ ಈ ಕಾರ್ಡ್ ಬಳಕೆಯಾಗುತ್ತದೆ. ಕೃಷಿಯಲ್ಲಿ ನಷ್ಟ ಸಂಭವಿಸಿದರೆ ರೈತರು ರೇಷನ್ ಕಾರ್ಡ್ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಿ ಬೆಳೆ ನಷ್ಟ ಪರಿಹಾರ ಪಡೆಯಬಹುದು. ವಿಶೇಷವಾಗಿ ಬರ, ಪ್ರವಾಹ, ಮಳೆಹಾನಿ ವೇಳೆ ಗುರುತಿಗಾಗಿ ರೇಷನ್ ಕಾರ್ಡ್ ನೀಡಬಹುದು.
ಮನೆ ನಿರ್ಮಾಣಕ್ಕೂ ನೆರವು : ಎಷ್ಟೋ ಜನರಿಗೆ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಆರ್ಥಿಕ ನೆರವು ಸಿಗುತ್ತದೆ ಎಂಬುದೇ ಗೊತ್ತಿರುವುದಿಲ್ಲ. ರೇಷನ್ ಕಾರ್ಡ್ದಾರರು ಮನೆಗೆ ಅರ್ಜಿ ಸಲ್ಲಿಸಿ ಹಣದ ಸಹಾಯ ಪಡೆದು ತಮ್ಮ ಸ್ವಂತ ಮನೆ ಕಟ್ಟಿಕೊಳ್ಳಬಹುದು. ಪ್ರಧಾನ ಮಂತ್ರಿ ಅವಾಜ್ ಯೋಜನೆ (ರಾಜ್ಯ ಸರ್ಕಾರದಲ್ಲೂ ಈ ಯೋಜನೆ ಇದೆ) ಬಳಕೆ ಆಗುತ್ತದೆ. ಜೊತೆಗೆ ಕಾರ್ಡ್ ಇದ್ದರೆ ಮನೆ ಸಾಲದ ಮೇಲಿನ ಸಬ್ಸಿಡಿ ಸಹ ಸಿಗುತ್ತದೆ.
ಮಹಿಳೆಯರಿಗೆ ಹೊಲಿಗೆ ಯಂತ್ರ : ಮಹಿಳೆಯರು ಸ್ವಾವಲಂಬಿ ಆಗಲು ರಾಜ್ಯ ಸರ್ಕಾರ ನೀಡುತ್ತಿರುವ ಮತ್ತೊಂದು ಯೋಜನೆ ಎಂದರೆ ಅದು ಉಚಿತ ಹೊಲಿಗೆ ಯಂತ್ರ ವಿತರಣೆ. ಪಡಿತರ ಚೀಟಿ ಹೊಂದಿರುವ ಮಹಿಳೆಯರು ಹೊಲಿಗೆ ಯಂತ್ರವನ್ನು ಉಚಿತವಾಗಿ ಪಡೆದು ಸ್ವಂತ ಉದ್ಯೋಗ ಪ್ರಾರಂಭಿಸಬಹುದು. ಮಹಿಳೆಯರ ಸ್ವಾವಲಂಬಿ ಬದುಕಿಗೆ ಈ ಯೋಜನೆ ಪ್ರಮುಖವಾಗಿದೆ.
ಇದನ್ನೂ ಓದಿ: ಬಡವರಿಗೆ ಸೂರು ಕಲ್ಪಿಸಲು ಹಾಗೂ ವಸತಿ ಸೌಲಭ್ಯಕ್ಕಾಗಿ ಇರುವ ಯೋಜನೆಗಳೇನು?
ಇದನ್ನೂ ಓದಿ: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ: ಈ ಸೌಲಭ್ಯ ಪಡೆಯುವುದು ಹೇಗೆ?